ಬೆಂಗಳೂರು ನೀರು ಬಿಕ್ಕಟ್ಟಿಗೆ ಪರಿಹಾರವಿದ್ದರೂ ನಿರ್ಲಕ್ಷ್ಯ? ಟಿಜಿ ಹಳ್ಳಿಯಲ್ಲಿ 2.2 ಟಿಎಂಸಿ ನೀರು ವ್ಯರ್ಥ..!

ಇತ್ತೀಚೆಗೆ ಸುಮಾರು 230 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಿ ಮರು ಚಾಲನೆಗೊಳಿಸಿರುವ ನೀರು ಸಂಸ್ಕರಣಾ ವ್ಯವಸ್ಥೆ ಹಾಗೂ ಯಂತ್ರೋಪಕರಣಗಳು ವ್ಯರ್ಥವಾಗದಂತೆ ಸದ್ಯ 4 ಎಂಎಲ್‌ಡಿ ನೀರನ್ನು ಕೆಳಭಾಗದ ಮಂಚನಬೆಲೆ ಜಲಾಶಯ ಮತ್ತು ಮಾಗಡಿ ಗ್ರಾಮಗಳಿಗೆ ಪೂರೈಸಲಾಗುತ್ತಿದೆ.
Tippagondanahalli reservoir
ತಿಪ್ಪಗೊಂಡನಹಳ್ಳಿ ಜಲಾಶಯ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ, ನಗರದ ಸಮೀಪದಲ್ಲೇ ಇರುವ ತಿಪ್ಪಗೊಂಡನಹಳ್ಳಿ (ಟಿಜಿ ಹಳ್ಳಿ) ಜಲಾಶಯದಲ್ಲಿ ಸುಮಾರು 2.2 ಟಿಎಂಸಿ ಅಡಿ ನೀರು ಬಳಕೆಯಾಗದೆ ವ್ಯರ್ಥವಾಗುತ್ತಿದೆ.

1933ರಲ್ಲಿ ನಿರ್ಮಿಸಲಾದ ರಾಜ್ಯದ ಮೊದಲ ಮಾನವ ನಿರ್ಮಿತ ಅಣೆಕಟ್ಟುಗಳಲ್ಲಿ ಒಂದಾದ ಟಿಜಿ ಹಳ್ಳಿ ಜಲಾಶಯ ಮಾಗಡಿ ರಸ್ತೆಯಲ್ಲಿ ಬೆಂಗಳೂರಿನಿಂದ ಸುಮಾರು 35 ಕಿ.ಮೀ ದೂರದಲ್ಲಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧಿಕಾರಿಗಳ ಪ್ರಕಾರ, ಜಲಾಶಯದಲ್ಲಿ 58 ಅಡಿ ಮಟ್ಟದಲ್ಲಿ ಸುಮಾರು 2.2 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆದರೆ, ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ.

ಇತ್ತೀಚೆಗೆ ಸುಮಾರು 230 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಿ ಮರು ಚಾಲನೆಗೊಳಿಸಿರುವ ನೀರು ಸಂಸ್ಕರಣಾ ವ್ಯವಸ್ಥೆ ಹಾಗೂ ಯಂತ್ರೋಪಕರಣಗಳು ವ್ಯರ್ಥವಾಗದಂತೆ ಸದ್ಯ 4 ಎಂಎಲ್‌ಡಿ ನೀರನ್ನು ಕೆಳಭಾಗದ ಮಂಚನಬೆಲೆ ಜಲಾಶಯ ಮತ್ತು ಮಾಗಡಿ ಗ್ರಾಮಗಳಿಗೆ ಪೂರೈಸಲಾಗುತ್ತಿದೆ.

ಉಳಿದ ನೀರು ಜಲಾಶಯದಲ್ಲೇ ಬಳಕೆಯಾಗದೆ ಉಳಿದಿದ್ದು, ಆವಿಯಾಗುವಿಕೆ ಮತ್ತು ಸೋರಿಕೆಯಿಂದಾಗಿ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಎಂಜಿನಿಯರ್‌ರೊಬ್ಬರು ತಿಳಿಸಿದ್ದಾರೆ. ಆದರೆ, ಈ ಭಾಗದಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿರುವುದು ಹಾಗೂ ರೈತರಿಗೆ ಇದರಿಂದ ಅನುಕೂಲವಾಗಿರುವುದು ಸದ್ಯದ ಸಕಾರಾತ್ಮಕ ಅಂಶ ಎಂದು ಹೇಳಿದ್ದಾರೆ.

ಬೆಂಗಳೂರಿನ ನೀರಿನ ಅಗತ್ಯ ಪೂರೈಸಲು ಮೇಕೆದಾಟು ಯೋಜನೆಯಿಂದ 4 ಟಿಎಂಸಿ ಅಡಿ ನೀರು ಬೇಕು ಎಂದು ಹೇಳಲಾಗುತ್ತಿದ್ದರೂ, ಈಗಾಗಲೇ ಇರುವ ಟಿಜಿ ಹಳ್ಳಿ ಜಲಾಶಯದಲ್ಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳದೆ ಇರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯಲ್ಲಿ ಬೆಂಗಳೂರಿಗೆ ನೀರು ತಲುಪಿಸಲು ಅಗತ್ಯವಿರುವ ಪೈಪ್‌ಲೈನ್‌ ವ್ಯವಸ್ಥೆಯನ್ನು ಸೇರಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಟಿಜಿ ಹಳ್ಳಿ ಜಲಾಶಯದಿಂದ ಬೆಂಗಳೂರಿಗೆ ನೀರು ತರಲು ಈಗಾಗಲೇ ಪೈಪ್‌ಲೈನ್‌ ವ್ಯವಸ್ಥೆ ಇದೆ. ಇತ್ತೀಚೆಗೆ ಅದನ್ನು ದುರಸ್ತಿ ಕೂಡ ಮಾಡಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆಯಂತೆ 2024ರಲ್ಲಿ ನೀರನ್ನು ಕುಡಿಯಲು ಯೋಗ್ಯವಾಗಿಸಲು ಹೆಚ್ಚುವರಿ ಓಝೋನೀಕರಣ ಘಟಕವನ್ನೂ ಅಳವಡಿಸಲಾಗಿತ್ತು. ಅದೇ ವರ್ಷ ಟಿಜಿ ಹಳ್ಳಿ ನೀರನ್ನು ಪ್ರಾಯೋಗಿಕವಾಗಿ ಬೆಂಗಳೂರಿಗೆ ಪೂರೈಸಲಾಗಿತ್ತು. ಆದರೆ, ಬಳಿಕ ಸರ್ಕಾರದ ಆದೇಶದ ಮೇರೆಗೆ ಈ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tippagondanahalli reservoir
ಬೆಂಗಳೂರು ನೀರು ಬಿಕ್ಕಟ್ಟಿಗೆ BWSSB ಶಾಶ್ವತ ಪರಿಹಾರ; 3,000 ಕಿಮೀ ಹಳೆಯ ಪೈಪ್‌ಲೈನ್ ಬದಲಾವಣೆ: ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್

‘ಟಿಜಿ ಹಳ್ಳಿ ನೀರು ಕುಡಿಯಲು ಯೋಗ್ಯ’

ಟಿಜಿ ಹಳ್ಳಿ ಜಲಾಶಯದಲ್ಲಿ ಗರಿಷ್ಠ 74 ಅಡಿ ಮಟ್ಟದವರೆಗೆ ನೀರು ಸಂಗ್ರಹಿಸಬಹುದು. ಜಲಾಶಯದ ನೀರು ಸುಮಾರು 2,300 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಒಟ್ಟು ಜಲಾಶಯದ ಪ್ರದೇಶ ಸುಮಾರು 2,700 ಎಕರೆ ಇದೆ.

ಆದರೆ, ಜಲಾಶಯದ ನೀರಿನ ಗುಣಮಟ್ಟದ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರಲ್ಲಿ ಇನ್ನೂ ಅನುಮಾನಗಳಿವೆ. ಮಳೆ ಮಾತ್ರವಲ್ಲದೆ ಅರ್ಕಾವತಿ ನದಿ ಹಾಗೂ ಹೆಸರಘಟ್ಟ ಜಲಾಶಯವೂ ಟಿಜಿ ಹಳ್ಳಿಯ ಪ್ರಮುಖ ನೀರಿನ ಮೂಲಗಳಾಗಿವೆ.

ಕಾವೇರಿ ನೀರನ್ನು ಸಂಸ್ಕರಿಸಿ ಕ್ಲೋರಿನೇಷನ್‌ ಮಾಡಲಾಗುತ್ತದೆ. ಆದರೆ, ಟಿಜಿ ಹಳ್ಳಿ ನೀರಿಗೆ ಹೆಚ್ಚುವರಿಯಾಗಿ ಓಝೋನೀಕರಣ ಪ್ರಕ್ರಿಯೆಯ ಮೂಲಕ ಸಂಸ್ಕರಣೆ ಮಾಡಲಾಗುತ್ತದೆ. ಅರ್ಕಾವತಿಯಿಂದ ಪ್ರತಿದಿನ ಸುಮಾರು 35 ಎಂಎಲ್‌ಡಿ ಸಂಸ್ಕರಿತ ನೀರು ಟಿಜಿ ಹಳ್ಳಿ ಜಲಾಶಯಕ್ಕೆ ಹರಿದುಬರುತ್ತದೆ. ಜಲಾಶಯದ ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸಲು ಬಿಡಬ್ಲ್ಯುಎಸ್‌ಎಸ್‌ಬಿ ವರದಿಯನ್ನೂ ಸಿದ್ಧಪಡಿಸುತ್ತಿದೆ.

ಸದ್ಯ ಟಿ.ಕೆ. ಹಳ್ಳಿ ಜಲಾಶಯದಿಂದ ಬೆಂಗಳೂರಿಗೆ ಪ್ರತಿದಿನ ಸುಮಾರು 1,940 ಎಂಎಲ್‌ಡಿ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ.

ಟಿಜಿ ಹಳ್ಳಿ ಜಲಾಶಯದ ನೀರು ಉತ್ತಮ ಗುಣಮಟ್ಟದ್ದಾಗಿದ್ದು, ಸಂಸ್ಕರಣೆ ಬಳಿಕ ಕುಡಿಯಲು ಯೋಗ್ಯವಾಗಿದೆ. ಆದರೂ ಪ್ರತಿದಿನ ಈ ನೀರನ್ನು ನಿರ್ಲಕ್ಷಿಸಿ ವ್ಯರ್ಥ ಮಾಡಲಾಗುತ್ತಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಎಂಜಿನಿಯರ್‌ ಹೇಳಿದ್ದಾರೆ.

ಯೆಟ್ಟಿನಹೊಳೆ ಯೋಜನೆ ಬೆಂಗಳೂರಿಗೆ ನೀರು ತಲುಪಿಸಿದ ಬಳಿಕ ಟಿಜಿ ಹಳ್ಳಿ ನೀರನ್ನು ಬಳಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ. ಆದರೆ, ಯೆಟ್ಟಿನಹೊಳೆ ಯೋಜನೆ ವಿಳಂಬವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಟಿಜಿ ಹಳ್ಳಿ ನೀರನ್ನು ಬಳಸಿಕೊಂಡು ದಬ್ಬಸಪೇಟೆ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸುವ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪ್ರೊಫೆಸರ್‌ ಟಿ.ವಿ. ರಾಮಚಂದ್ರ ಅವರ ಪ್ರಕಾರ, ಬೆಂಗಳೂರಿಗೆ ಮೇಕೆದಾಟು ಯೋಜನೆಯ ಅಗತ್ಯವಿಲ್ಲ. ನಗರಕ್ಕೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕಾವೇರಿ ನೀರೂ ಉತ್ತಮ ಪ್ರಮಾಣದಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.

ಇದರ ಜತೆಗೆ ಬೆಂಗಳೂರಿನಲ್ಲಿ ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ಸಂಸ್ಕರಿತ ತ್ಯಾಜ್ಯ ನೀರು ಕೂಡ ಉತ್ಪತ್ತಿಯಾಗುತ್ತಿದೆ. ಲಭ್ಯವಿರುವ ಮಳೆನೀರು, ಕಾವೇರಿ ನೀರು ಹಾಗೂ ಸಂಸ್ಕರಿತ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ನಗರದ ನೀರಿನ ಅಗತ್ಯವನ್ನು ನಿರ್ವಹಿಸಬಹುದು ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರಿನ ನೀರಿನ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ನಗರದ ಸಮೀಪದಲ್ಲೇ ಇರುವ ಟಿಜಿ ಹಳ್ಳಿ ಜಲಾಶಯದಲ್ಲಿನ 2.2 ಟಿಎಂಸಿ ಅಡಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com