

ಬೆಂಗಳೂರು: ಆಗಸ್ಟ್ 15ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಫ್ರೀಡಂ ಹಬ್ಬ’ಕ್ಕೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಗರಿಕರು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುಮಾರು 25 ತುಕಡಿಗಳು ಹಾಗೂ ಕಲಾತಂಡಗಳು ಭಾಗವಹಿಸುವ ವರ್ಣರಂಜಿತ ಸ್ವಾತಂತ್ರ್ಯೋತ್ಸವ ಪಥಸಂಚಲನ ನಡೆಯಲಿದೆ. ಭಾರತದ ವಿವಿಧ ಸಂಸ್ಕೃತಿ, ಕರ್ನಾಟಕದ ವಿವಿಧ ಪ್ರದೇಶಗಳು ಹಾಗೂ ವಿವಿಧ ವೃತ್ತಿಗಳನ್ನು ಪ್ರತಿನಿಧಿಸುವ ಕಲಾತಂಡಗಳು ಜನಪದ ನೃತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ.
ಮಕ್ಕಳಿಗಾಗಿ ಮಕ್ಕಳ ಮೇಳ ಆಯೋಜಿಸಲಾಗಿದ್ದು, ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ಅರಿವು ಮೂಡಿಸುವ ಜತೆಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸುವ ಪ್ರಯತ್ನ ಮಾಡಲಾಗಿದೆ.
ಮಕ್ಕಳಿಗಾಗಿ ವಿಧಾನಸೌಧ ಪ್ರವಾಸವನ್ನೂ ಆಯೋಜಿಸಲಾಗಿದೆ. 20ರಿಂದ 25 ಮಕ್ಕಳ ಗುಂಪುಗಳಿಗೆ ತಲಾ 15 ನಿಮಿಷಗಳ ಮಾರ್ಗದರ್ಶಿತ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ನಡೆಯುವ ಸಂಗೀತ ಕಾರ್ಯಕ್ರಮವು ಸಾರ್ವಜನಿಕರ ಸಾಮೂಹಿಕ ಗಾಯನದೊಂದಿಗೆ ಮುಕ್ತಾಯಗೊಳ್ಳಲಿದೆ.
ಅಂಬೇಡ್ಕರ್ ವೀಧಿಯಲ್ಲಿ 120ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು. ಜೀವನಶೈಲಿ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾವಯವ ಉಡುಪುಗಳು, ಆಟಿಕೆಗಳು, ಜವಳಿ, ಆಹಾರ ಸೇರಿದಂತೆ ವಿವಿಧ ಉತ್ಪನ್ನಗಳು ಇಲ್ಲಿ ಲಭ್ಯವಿರಲಿವೆ. ದಿನವಿಡೀ ಈ ಮಳಿಗೆಗಳು ತೆರೆದಿರಲಿವೆ.
ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ಪರಿಚಯಿಸುವ ಒಂಬತ್ತು ವಿಭಾಗಗಳ ‘ಫ್ರೀಡಂ ಜರ್ನಿ’ ಆಯೋಜಿಸಲಾಗುತ್ತದೆ. ಮಹಾತ್ಮ ಗಾಂಧಿ ಪ್ರತಿಮೆ ಬಳಿ ‘ವಾಕಿಂಗ್ ಮ್ಯೂಸಿಯಂ–ಇಂಡಿಯಾಸ್ ಫ್ರೀಡಂ ಜರ್ನಿ’ ವೀಕ್ಷಣೆಗೆ ಅವಕಾಶ ಇರಲಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಈಗಾಗಲೇ ಸುಮಾರು 18,000 ಮಂದಿ ಫ್ರೀಡಂ ಹಬ್ಬಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶವಿದ್ದು, ಕ್ಯೂಆರ್ ಕೋಡ್ ಆಧಾರಿತ ಪ್ರವೇಶ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಒಂದು ಕ್ಯೂಆರ್ ಕೋಡ್‌ನಿಂದ ಒಬ್ಬರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿವಿಲ್ ಪೊಲೀಸ್ ಹಾಗೂ ಕೆಎಸ್‌ಆರ್‌ಪಿ ಸೇರಿದಂತೆ 3,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ವಿಧಾನಸೌಧ ಪ್ರವೇಶಿಸುವವರಿಗೆ ಬಣ್ಣದ ಟ್ಯಾಗ್‌ಗಳನ್ನು ನೀಡಲಾಗುತ್ತದೆ. ಕಾರ್ಯಕ್ರಮದ ದಿನ ಬೆಳಗ್ಗೆ 11 ಗಂಟೆಯಿಂದ ಅಂಬೇಡ್ಕರ್ ವೀಧಿಯಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಹಬ್ಬಕ್ಕೆ ಬರುವವರಿಗೆ ಪ್ರಮುಖ ಮಾಹಿತಿ...
ಕಾರ್ಯಕ್ರಮಕ್ಕೆ ಪ್ರವೇಶ ಮತ್ತು ನಿರ್ಗಮನಕ್ಕೆ ಜಿಪಿಒ ವೃತ್ತ, ಕೆ.ಆರ್. ವೃತ್ತ ಹಾಗೂ ಕಬ್ಬನ್ ಪಾರ್ಕ್ (ಹೈಕೋರ್ಟ್ ಗೇಟ್) ಮಾರ್ಗಗಳನ್ನು ಬಳಸಬೇಕು.
ಒಟ್ಟು 18 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೋಂದಣಿ ಅಗತ್ಯವಿಲ್ಲ.
ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ವಿಧಾನಸೌಧ ಪ್ರವೇಶಿಸಲು ಮಾನ್ಯ ಗುರುತಿನ ಚೀಟಿ ಕಡ್ಡಾಯ.
ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ಇರುವುದಿಲ್ಲ.
ಕಾರ್ಯಕ್ರಮ ವೀಕ್ಷಣೆಗೆ ವಿಧಾನಸೌಧದ ಆವರಣದಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತದೆ.
ಸ್ಥಳದಲ್ಲಿ ಒಟ್ಟು 80 ಜೈವಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದ್ದು, 30 ವಿಧಾನಸೌಧದ ಒಳಗೆ ಹಾಗೂ 50 ಹೊರಭಾಗದಲ್ಲಿರಲಿವೆ.
ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
‘ಮೇ ಐ ಹೆಲ್ಪ್ ಯೂ?’ ಸ್ವಯಂಸೇವಕರು ವಿಶೇಷ ಟಿ-ಶರ್ಟ್ ಧರಿಸಿ ಸ್ಥಳದಲ್ಲಿರುತ್ತಾರೆ.
ಕಾರ್ಯಕ್ರಮದ ಬಳಿಕ ಹೆಚ್ಚುವರಿ ಮೆಟ್ರೋ ಸೇವೆಗಳನ್ನು ಒದಗಿಸಲಾಗುತ್ತದೆ.
ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ.
ನಿಗದಿತ ಸ್ಥಳಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇರಲಿದೆ.
ಇತರೆ ಸುರಕ್ಷತಾ ವ್ಯವಸ್ಥೆಗಳಿರಲಿವೆ.
ಎರಡು ಅಗ್ನಿಶಾಮಕ ವಾಹನಗಳು, ಪ್ರಥಮ ಚಿಕಿತ್ಸಾ ಕೇಂದ್ರಗಳು, ಆಂಬ್ಯುಲೆನ್ಸ್‌ಗಳು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ರಾಣಿ ಚೆನ್ನಮ್ಮ ಪಡೆ ಸಹಯೋಗದಲ್ಲಿ ಮಹಿಳೆಯರ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ಸ್ತನ್ಯಪಾನ ಕೊಠಡಿ, ವಿಶ್ರಾಂತಿ ಸೌಲಭ್ಯ ಹಾಗೂ ಸ್ಯಾನಿಟರಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.