ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಭೀತಿ: ಅಕ್ಟೋಬರ್‌ನಿಂದ 450 ಕೋಟಿ ರೂ. ವೆಚ್ಚದ ವೈಟ್-ಟಾಪಿಂಗ್ ಕಾಮಗಾರಿ ಆರಂಭ..!

ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಈ ರಸ್ತೆಯ ಸುತ್ತಮುತ್ತ ಇರುವ ಕಂಪನಿಗಳೊಂದಿಗೆ ಸಮನ್ವಯ ಸಾಧಿಸಿ, ಶೇ.50ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದ್ದಾರೆ.
krishbyregowda
ಕೃಷ್ಣ ಬೈರೇಗೌಡ
Updated on

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಬ್ಯುಸಿ ರಸ್ತೆಗಳಲ್ಲಿ ಒಂದಾದ ಹೊರ ವರ್ತುಲ ರಸ್ತೆಯ (ORR) ಪ್ರಯಾಣಿಕರಿಗೆ ಮತ್ತೊಂದು ಸಂಚಾರ ದಟ್ಟಣೆಯ ಬಿಸಿ ತಟ್ಟಲಿದೆ.

ಹೊರ ವರ್ತುಲ ರಸ್ತೆಯ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ ಬರೋಬ್ಬರಿ 450 ಕೋಟಿ ರೂ. ವೆಚ್ಚದ ವೈಟ್-ಟಾಪಿಂಗ್ (ಕಾಂಕ್ರೀಟ್ ರಸ್ತೆ) ಕಾಮಗಾರಿಯು ಈ ವರ್ಷದ ಅಕ್ಟೋಬರ್‌ನಿಂದ ಅಧಿಕೃತವಾಗಿ ಆರಂಭವಾಗಲಿದೆ.

ಬೆಂಗಳೂರಿನ ಹೊರವರ್ತುಲ ರಸ್ತೆಯ (ORR) ವೈಟ್ ಟಾಪಿಂಗ್ ಕಾಮಗಾರಿಯನ್ನು ಅಕ್ಟೋಬರ್‌ನಿಂದ ಆರಂಭಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಈ ರಸ್ತೆಯ ಸುತ್ತಮುತ್ತ ಇರುವ ಕಂಪನಿಗಳೊಂದಿಗೆ ಸಮನ್ವಯ ಸಾಧಿಸಿ, ಶೇ.50ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದ್ದಾರೆ.

ಯೋಜನೆಗೆ ಸಂಬಂಧಿಸಿದಂತೆ ಸಚಿವರು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಎಲ್‌.ಕೆ. ಅತೀಕ್‌, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್‌, ವಿಶೇಷ ಆಯುಕ್ತ ನಿತೇಶ್‌, ಡಿಸಿಪಿ ಶಾಹಿಲ್‌ ಬಗ್ಲಾ, ಬಿ-ಸ್ಮೈಲ್‌ ತಾಂತ್ರಿಕ ನಿರ್ದೇಶಕ ಪ್ರಹ್ಲಾದ್‌, ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

krishbyregowda
ತ್ಯಾಜ್ಯ ತೆರವುಗೊಳಿಸದಿದ್ದರೆ ಸರ್ಕಾರಿ ಇಲಾಖೆಗಳಿಗೆ ನೊಟೀಸ್: ಬೆಂಗಳೂರಿನ ಪಾಲಿಕೆಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌. ಪುರಂವರೆಗೆ ಸುಮಾರು 17 ಕಿ.ಮೀ. ಉದ್ದದ ಹೊರವರ್ತುಲ ರಸ್ತೆ ಅಭಿವೃದ್ಧಿಪಡಿಸುವ ಯೋಜನೆಗೆ ಸರ್ಕಾರ ಈಗಾಗಲೇ ರೂ.450 ಕೋಟಿ ಮಂಜೂರು ಮಾಡಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಹೊರವರ್ತುಲ ರಸ್ತೆಯಲ್ಲಿರುವ ವಿವಿಧ ಕಂಪನಿಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ.

ಕಾಮಗಾರಿ ವೇಳೆ ಸಂಚಾರ ದಟ್ಟಣೆ ಉಂಟಾಗದಂತೆ ಆಂತರಿಕ ರಸ್ತೆಗಳನ್ನು ಹೆಚ್ಚು ಬಳಸಿಕೊಂಡು ವಾಹನಗಳನ್ನು ಬೇರೆಡೆಗೆ ತಿರುಗಿಸುವಂತೆ ಸಚಿವರು ಸೂಚಿಸಿದ್ದಾರೆ. ಸಂಚಾರ ನಿರ್ವಹಣೆಯ ಅಂತಿಮ ಯೋಜನೆ ರೂಪಿಸುವ ಮೊದಲು ಹೊರವರ್ತುಲ ರಸ್ತೆ ಕಂಪನಿಗಳ ಸಂಘ (ORRCA) ಹಾಗೂ ಪೊಲೀಸ್‌ ಇಲಾಖೆಯೊಂದಿಗೆ ಸಮಾಲೋಚನೆ ನಡೆಸುವಂತೆಯೂ ಹೇಳಿದ್ದಾರೆ.

ಹೊರವರ್ತುಲ ರಸ್ತೆಯಲ್ಲಿ ಎರಡೂ ಬದಿಗಳಲ್ಲೂ ಕನಿಷ್ಠ 3 ಮೀಟರ್‌ ಅಗಲದ ನಿರಂತರ ಪಾದಚಾರಿ ಮಾರ್ಗ ನಿರ್ಮಿಸುವಂತೆ ಸೂಚಿಸಲಾಗಿದೆ. ಅಡ್ಡ ರಸ್ತೆಗಳಲ್ಲಿನ ಪಾದಚಾರಿ ಮಾರ್ಗಗಳನ್ನು ಗರಿಷ್ಠ 1.8 ಮೀಟರ್‌ ಅಗಲದಲ್ಲಿ ನಿರ್ಮಿಸಬಹುದು ಎಂದು ತಿಳಿಸಿದ್ದಾರೆ.

ಅಲ್ಲದೆ, ಪ್ರಯಾಣಿಕರ ಅನುಕೂಲಕ್ಕಾಗಿ ಟ್ಯಾಕ್ಸಿ ಹಾಗೂ ಬಸ್‌ಗಳ ಹತ್ತುವ-ಇಳಿಯುವ ಸ್ಥಳಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಲಭ್ಯವಿರುವ ಬಫರ್‌ ಪ್ರದೇಶಗಳಲ್ಲಿ ಅವುಗಳಿಗೆ ಬಣ್ಣದ ಗುರುತುಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.

ರಸ್ತೆ ಬದಿಯಲ್ಲಿರುವ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸುವಂತೆಯೂ ಸಚಿವರು ನಿರ್ದೇಶನ ನೀಡಿದ್ದಾರೆ. ಖಾಸಗಿ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ವಿದ್ಯುತ್‌ ಪರಿವರ್ತಕಗಳನ್ನು ಗುರುತಿಸಿ ತೆರವುಗೊಳಿಸುವುದು ಹಾಗೂ ಮುಖ್ಯ ರಸ್ತೆಯಲ್ಲೇ ಸೂಕ್ತ ಬಸ್‌ ತಂಗುದಾಣಗಳನ್ನು ನಿರ್ಮಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com