ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಶಾ ಎದುರೇ ಗುಡುಗಿದ ಡಿಕೆಶಿ: 'ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ಬೇಡ'; ಲೋಕಸಭೆ ಸ್ಥಾನ 543ಕ್ಕೇ ಸೀಮಿತಗೊಳಿಸುವಂತೆ ಆಗ್ರಹ!

ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ರಾಜ್ಯಗಳು ಸಾಧಿಸಿರುವ ಯಶಸ್ಸು, ಅವುಗಳ ರಾಜಕೀಯ ಧ್ವನಿಯನ್ನು ಕಡಿಮೆ ಮಾಡಲು ಕಾರಣವಾಗಬಾರದು.
Amit Shah chairs southern CMs conclave
31ನೇ ದಕ್ಷಿಣ ವಲಯ ಮಂಡಳಿ ಸಭೆ
Updated on

ತಿರುವನಂತಪುರಂ: ಕೇಂದ್ರ ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ಕೇರಳದ ಕೋವಲಂನಲ್ಲಿ 31ನೇ ದಕ್ಷಿಣ ವಲಯ ಮಂಡಳಿ ಸಭೆ ಗುರುವಾರ ನಡೆದಿದ್ದು, ಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ವಿಚಾರ ಪ್ರಮುಖವಾಗಿ ಚರ್ಚೆಗೆ ಬಂದಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿರುವ ದಕ್ಷಿಣ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆ ವೇಳೆ ಅನ್ಯಾಯವಾಗಬಾರದು ಎಂದು ಒತ್ತಾಯಿಸಿದ್ದಾರೆ.

1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಮುಂದಿನ 25 ವರ್ಷಗಳ ಕಾಲ ಲೋಕಸಭೆಯ ಒಟ್ಟು 543 ಸ್ಥಾನಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದಿದ್ದು, ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಬಾರದು ಎಂದು ಆಗ್ರಹಿಸಿದ್ದಾರೆ.

ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ರಾಜ್ಯಗಳು ಸಾಧಿಸಿರುವ ಯಶಸ್ಸು, ಅವುಗಳ ರಾಜಕೀಯ ಧ್ವನಿಯನ್ನು ಕಡಿಮೆ ಮಾಡಲು ಕಾರಣವಾಗಬಾರದು. ಯಾವುದೇ ದಕ್ಷಿಣ ರಾಜ್ಯ ತನ್ನ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪ್ರಾತಿನಿಧ್ಯವೆಂದರೆ ಕೇವಲ ಸಂಖ್ಯೆಯಲ್ಲ, ಅದು ರಾಜಕೀಯ ಪ್ರಭಾವ ಮತ್ತು ಧ್ವನಿಯೂ ಆಗಿದೆ.

1971ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕ್ಷೇತ್ರ ಪುನರ್ವಿಂಗಡಣೆ ನಡೆಸಬೇಕು ಹಾಗೂ 543 ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮುಂದಿನ 25 ವರ್ಷಗಳ ಕಾಲ ಸ್ಥಗಿತಗೊಳಿಸುವಂತೆ ದಕ್ಷಿಣ ವಲಯ ಮಂಡಳಿ ನಿರ್ಣಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜನಸಂಖ್ಯೆ ನಿಯಂತ್ರಣಕ್ಕೆ ದೇಶ ನೀಡಿದ ಕರೆಯನ್ನು ದಕ್ಷಿಣ ರಾಜ್ಯಗಳು ಶಿಸ್ತುಬದ್ಧವಾಗಿ ಪಾಲಿಸಿ ಯಶಸ್ವಿಯಾಗಿವೆ. ಈ ಸಾಧನೆಗಾಗಿ ಕ್ಷೇತ್ರ ಪುನರ್ವಿಂಗಡಣೆ ಸಂದರ್ಭದಲ್ಲಿ ಅವುಗಳಿಗೆ ಶಿಕ್ಷೆಯಾಗಬಾರದು. ನಾನು ಹೇಳುತ್ತಿರುವುದನ್ನು ಇಲ್ಲಿರುವ ಎಲ್ಲ ಮುಖ್ಯಮಂತ್ರಿಗಳು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. 1971ರ ಆಧಾರವನ್ನು ಗೌರವಿಸೋಣ ಮತ್ತು ನಮ್ಮ ರಾಜಕೀಯ ಧ್ವನಿಯ ಬಲವನ್ನು ರಕ್ಷಿಸೋಣ ಎಂದು ಹೇಳಿದರು.

Amit Shah chairs southern CMs conclave
'ಬಲಿಷ್ಠ ದಕ್ಷಿಣ ಭಾರತವೇ ಬಲಿಷ್ಠ ಭಾರತದ ಆಧಾರ': ಕರ್ನಾಟಕದ ಜಲ, ಆರ್ಥಿಕ- ರಾಜಕೀಯ ಕಾಳಜಿ ವಹಿಸಿ: ಅಮಿತ್ ಶಾ ಮುಂದೆ ಪ್ರಸ್ತಾಪಿಸಿದ ಸಿಎಂ ಡಿ.ಕೆ. ಶಿವಕುಮಾರ್-Video

ಮೇಕೆದಾಟು, ಕಾವೇರಿ ವಿವಾದ ಪ್ರಸ್ತಾಪ

ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು, ಮೇಕೆದಾಟು ಯೋಜನೆ ಮತ್ತು ಕರ್ನಾಟಕ-ತಮಿಳುನಾಡು ನಡುವಿನ ಬಹುಕಾಲದ ಕಾವೇರಿ ನೀರು ವಿವಾದವನ್ನೂ ಪ್ರಸ್ತಾಪಿಸಿದರು.

ಮೇಕೆದಾಟು ಜಲಾಶಯ ನಿರ್ಮಾಣದಿಂದ ತಮಿಳುನಾಡು ಹಾಗೂ ಪುದುಚೇರಿಯ ರೈತರಿಗೂ ಪ್ರಯೋಜನವಾಗಲಿದೆ ಎಂದು ಹೇಳಿದರು.

ಸಭೆಗೆ ನಡೆದುಕೊಂಡು ಬರುವಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದರು.

ಮೇಕೆದಾಟು ಯೋಜನೆಯ ಪ್ರತಿಯೊಂದು ಹನಿ ನೀರೂ ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ನೆರವಾಗಲಿದೆ. ನಮಗೆ ಸಹಾಯ ಮಾಡಿ, ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪಕ್ಕದಲ್ಲೇ ಕುಳಿತಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಕಾವೇರಿ ಹಾಗೂ ಮೇಕೆದಾಟು ವಿಚಾರಗಳ ಕುರಿತು ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ವಿಜಯ್ ಅವರು ಅಮಿತ್ ಶಾ ಅವರನ್ನು ಸನ್ಮಾನಿಸಿದರು.

ಸಭೆಯ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಕೂಡ ವಿಜಯ್ ಅವರೊಂದಿಗೆ ಮಾತುಕತೆ ನಡೆಸಿದರು.

ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದೆ. ಕೇರಳದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪಿ.ಕೆ. ಕುನ್ಹಾಲಿಕುಟ್ಟಿ ಕೂಡ ಉಪಸ್ಥಿತರಿದ್ದರು ಎಂದು ಸತೀಶನ್ ತಿಳಿಸಿದ್ದಾರೆ.

ಸಭೆಗೂ ಮುನ್ನ ಡಿ.ಕೆ. ಶಿವಕುಮಾರ್ ಅವರು, ಕೇರಳ ಮುಖ್ಯಮಂತ್ರಿ, ತೆಲಂಗಾಣದ ಉಪಮುಖ್ಯಮಂತ್ರಿ, ತೆಲಂಗಾಣ ಕೃಷಿ ಸಚಿವ ತುಮ್ಮಲ ನಾಗೇಶ್ವರ ರಾವ್ ಹಾಗೂ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದರು.

ಸಭೆಯಲ್ಲಿ ದಕ್ಷಿಣ ಭಾರತದ ಪ್ರಗತಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಾಮಾನ್ಯ ಆದ್ಯತೆಗಳು ಹಾಗೂ ಪ್ರಮುಖ ಸಮಸ್ಯೆಗಳ ಕುರಿತು ಈ ವೇಳೆ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾಗಿ ಶಿವಕುಮಾರ್ ತಿಳಿಸಿದ್ದಾರೆ.

ಸಭೆಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಿದ್ದು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳೂ ಇದರ ಭಾಗವಾಗಿವೆ.

ಸಭೆಯು ದಕ್ಷಿಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಪ್ರಮುಖ ಅಂತರ್ ರಾಜ್ಯ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಕೇಂದ್ರೀಕರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com