ಬೈಕ್ ಮೇಲೆ ಹರಿದ ವಾಟರ್ ಟ್ಯಾಂಕರ್: ಜಿಗಿದು ಜೀವ ಉಳಿಸಿಕೊಂಡ ಸವಾರ, ಚಾಲಕನ ಬಂಧನ, ಟ್ಯಾಂಕರ್ ಸೀಜ್!

ಬೆಂಗಳೂರಿನ ಗುಂಜೂರು-ಪಾಳ್ಯ ಸಿಡಿಪಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ನೀರಿನ ಟ್ಯಾಂಕರ್ ವೊಂದು ಬೈಕ್ ಮೇಲೆ ಹರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು.
Bengaluru Traffic Police arrests tanker driver
ಜಿಗಿದು ಜೀವ ಉಳಿಸಿಕೊಂಡ ಸವಾರ-ಚಾಲಕನ ಬಂಧನ
Updated on

ಬೆಂಗಳೂರು: ನಗರದ ವರ್ತೂರು ವ್ಯಾಪ್ತಿಯ ಗುಂಜೂರು-ಪಾಳ್ಯ ಸಿಡಿಪಿ ರಸ್ತೆಯಲ್ಲಿ ಭೀಕರ ಅಪಘಾತಕ್ಕೆ ಕಾರಣವಾದ ವಾಟರ್ ಟ್ಯಾಂಕರ್ ಚಾಲಕನನ್ನು ಬೆಂಗಳೂರು ಸಂಚಾರ ಪೊಲೀಸರು ಬಂಧಿಸಿದ್ದು, ಟ್ಯಾಂಕರ್ ವಾಹನವನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ಹೌದು.. ಬೆಂಗಳೂರಿನ ಗುಂಜೂರು-ಪಾಳ್ಯ ಸಿಡಿಪಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ನೀರಿನ ಟ್ಯಾಂಕರ್ ವೊಂದು ಬೈಕ್ ಮೇಲೆ ಹರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಈ ಘಟನೆಯಲ್ಲಿ ಅದೃಷ್ಟವಶಾತ್ ಬೈಕ್ ಸವಾರ ಬೈಕ್ ನಿಂದ ಹಾರಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಎಚ್ಚೆತ್ತಿದ್ದ ಬೆಂಗಳೂರಿನ ವೈಟ್‌ಫೀಲ್ಡ್ ಸಂಚಾರ ಪೊಲೀಸರು ಇದೀಗ ಟ್ಯಾಂಕರ್ ಚಾಲಕನನ್ನು ಬಂಧಿಸಿದ್ದು ಮಾತ್ರವಲ್ಲದೇ ಟ್ಯಾಂಕರ್ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಟ್ಯಾಂಕರ್ ಅನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ.

Bengaluru Traffic Police arrests tanker driver
ಯುವತಿ ಮೇಲೆ ಹರಿದ ದುಬಾರಿ Aston Martin ಕಾರು: Janasena ಪಾರ್ಟಿ ಸಂಸದನ ಪುತ್ರನ ವಿರುದ್ಧ ಹಿಟ್ ಅಂಡ್ ರನ್ ಕೇಸ್

ಆಗಿದ್ದೇನು?

ಮೂಲಗಳ ಪ್ರಕಾರ ಸ್ಥಳೀಯ ನಿವಾಸಿ ಸೌರಭ್ ಅಗರ್ವಾಲ್ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಸವಾರ. ಗುಂಜೂರು-ಪಾಳ್ಯ ರಸ್ತೆಯ ಸಂಪೂರ್ಣ ಹದಗೆಟ್ಟ ಹಾಗೂ ನೀರಿನಿಂದ ತುಂಬಿದ್ದ ರಸ್ತೆಯಲ್ಲಿ ಅವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಟ್ಯಾಂಕರ್ ಅವರತ್ತ ನುಗ್ಗಿದೆ.

ಟ್ಯಾಂಕರ್ ವೇಗ ಕಡಿಮೆ ಮಾಡುವ ಲಕ್ಷಣ ಕಾಣಿಸದಿದ್ದರಿಂದ ಅಪಾಯ ಅರಿತ ಸೌರಭ್, ಕ್ಷಣಮಾತ್ರವೂ ತಡ ಮಾಡದೆ ಬೈಕ್‌ನಿಂದ ಕೆಳಗೆ ಜಿಗಿದಿದ್ದಾರೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ಟ್ಯಾಂಕರ್ ಬೈಕ್ ಮೇಲೆ ಹರಿದಿದ್ದು, ಭಾರೀ ವಾಹನದ ಚಕ್ರಗಳಿಗೆ ಸಿಲುಕಿ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತದ ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಟ್ಯಾಂಕರ್ ಸುತ್ತುವರಿದು ಚಾಲಕ ಪರಾರಿಯಾಗದಂತೆ ತಡೆದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಟ್ಯಾಂಕರ್‌ನಲ್ಲಿ ಬಯಲಾದ ಶಾಕಿಂಗ್ ಉಲ್ಲಂಘನೆಗಳು

ಟ್ಯಾಂಕರ್ ಪರಿಶೀಲಿಸಿದಾಗ ಹಲವು ಗಂಭೀರ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನು ಈ ಭಾರೀ ವಾಹನದಲ್ಲಿ ಗೋಚರಿಸುವ ನೋಂದಣಿ ಫಲಕ ಇರಲಿಲ್ಲ ಎನ್ನಲಾಗಿದೆ. ಸ್ಥಳೀಯರು ಹಾಗೂ ಪೊಲೀಸರು ವಿಚಾರಿಸಿದಾಗ ಚಾಲಕನ ಬಳಿ ಮಾನ್ಯ ಚಾಲನಾ ಪರವಾನಗಿ ಇಲ್ಲದಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.

ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದ್ದರೂ ಚಾಲಕ ಅತಿವೇಗದಲ್ಲಿ ಟ್ಯಾಂಕರ್ ಚಲಾಯಿಸುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

‘ಸಾವಿನ ರಸ್ತೆ’ ಎಂದು ಆಕ್ರೋಶ

ಗುಂಜೂರು-ಪಾಳ್ಯ ಸಿಡಿಪಿ ರಸ್ತೆಯ ದುಸ್ಥಿತಿಗೆ ಸಂಬಂಧಿಸಿದಂತೆ ಸ್ಥಳೀಯರು ಮತ್ತೊಮ್ಮೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಳವಾದ ಗುಂಡಿಗಳು, ರಸ್ತೆಯಲ್ಲಿ ನಿಂತಿರುವ ನೀರು ಹಾಗೂ ನಿಯಂತ್ರಣವಿಲ್ಲದೆ ಸಂಚರಿಸುವ ವಾಣಿಜ್ಯ ಟ್ಯಾಂಕರ್‌ಗಳ ಅಪಾಯಕಾರಿ ಓಡಾಟ ಈ ಭಾಗದ ರಸ್ತೆಗಳು ವಾಹನ ಸವಾರರಿಗೆ ಪ್ರತಿದಿನವೂ ಅಪಾಯಕಾರಿಯಾಗಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ರಸ್ತೆ ದುರಸ್ತಿ ಹಾಗೂ ಭಾರೀ ವಾಣಿಜ್ಯ ವಾಹನಗಳ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com