'ಬಿಜೆಪಿ ಭ್ರಷ್ಟ ನಾಯಕರಿಂದ ತುಂಬಿದೆ': ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧವೇ ಕಾಂಗ್ರೆಸ್ ಪ್ರತಿಭಟನೆ

ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕರ್ನಾಟಕದ ಪ್ರಮುಖ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮುಖವಾಡಗಳನ್ನು ಧರಿಸಿದ್ದರು.
Karnataka Congress workers wearing face masks of prominent Karnataka BJP and JD(S) leaders protest against them.
ಕರ್ನಾಟಕದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮುಖವಾಡಗಳನ್ನು ಧರಿಸಿ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.
Updated on

ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಹೊರಗೆ ಬಿಜೆಪಿ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ, ಅದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವಲ್ಲ ಬದಲಾಗಿ ಬಿಜೆಪಿಯೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹187 ಕೋಟಿ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೇರಿದಂತೆ ಬಿಜೆಪಿ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕರ್ನಾಟಕದ ಪ್ರಮುಖ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮುಖವಾಡಗಳನ್ನು ಧರಿಸಿದ್ದರು.

ಕಾಂಗ್ರೆಸ್ ಜಿಲ್ಲಾ (ಬೆಂಗಳೂರು ಪಶ್ಚಿಮ) ಉಪಾಧ್ಯಕ್ಷ ಕುಶಲ್ ಅಭಯ್ ಗೌಡ ಎಎನ್‌ಐ ಜೊತೆ ಮಾತನಾಡಿ, 'ಬಿಜೆಪಿ ಭ್ರಷ್ಟಾಚಾರ ಮತ್ತು ಭ್ರಷ್ಟ ನಾಯಕರಿಂದ ತುಂಬಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗಮನಿಸಿದರೆ, ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ನಾಲ್ವರು ಮುಖ್ಯಮಂತ್ರಿಗಳನ್ನು ನೀವು ಕಾಣಬಹುದು. ಆದರೂ, ಅವರಿಗೆ ಹುದ್ದೆಗಳನ್ನು ನೀಡಲಾಗಿದೆ ಮತ್ತು ಅವರು ರಾಜ್ಯಗಳನ್ನು ಆಳುತ್ತಿದ್ದಾರೆ. ಹೀಗಿದ್ದರೂ, ಆ ವ್ಯಕ್ತಿಗಳನ್ನು ಪ್ರಶ್ನಿಸುವ ಬದಲು, ಕರ್ನಾಟಕದ ಬಿಜೆಪಿ ಶಾಸಕರು ನಮ್ಮ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ನಾಗೇಂದ್ರ ಅವರು ಈಗಾಗಲೇ ರಾಜೀನಾಮೆ ನೀಡಿದ್ದರು. ಆದರೆ, ಅವರ ಮೇಲಿನ ಆರೋಪಗಳು ಸತ್ಯವಲ್ಲ ಎಂದು ತಿಳಿದ ನಂತರ ಅವರಿಗೆ ಮತ್ತೆ ಹುದ್ದೆ ನೀಡಲಾಗಿದೆ' ಎಂದರು.

'ಈ ಬಿಜೆಪಿ ನಾಯಕರಿಗಿಂತ ದೊಡ್ಡ ಕಳ್ಳರು ನಮಗೆ ಎಲ್ಲಿಯೂ ಸಿಗುವುದಿಲ್ಲ. 'ದೇಣಿಗೆ ಪೆಟ್ಟಿಗೆ' ಕಳ್ಳರಾಗಿರುವ ಇವರು, ಸದ್ಯ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಬಗ್ಗೆ ಅಥವಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ, ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ. ವಾಸ್ತವವಾಗಿ, ಭ್ರಷ್ಟಾಚಾರದ ಪಿತಾಮಹರೇ ಇವರು. ಬ್ಲಡ್ ಬ್ಯಾಂಕ್‌ನಿಂದ ಹಿಡಿದು ಕೋವಿಡ್‌ಗೆ ಸಂಬಂಧಿಸಿದ ಅವ್ಯವಹಾರಗಳವರೆಗೆ, ಕರ್ನಾಟಕದ ಪ್ರತಿಯೊಂದು ಹಗರಣದಲ್ಲೂ ಇವರ ಹೆಸರುಗಳಿವೆ... ಹೀಗಿರುವಾಗ, ನಮ್ಮ ಮೇಲೆ ಆರೋಪ ಮಾಡಲು ಇವರಿಗೆ ಯಾವ ನೈತಿಕ ಹಕ್ಕಿದೆ?' ಎಂದು ಪ್ರಶ್ನಿಸಿದರು.

ಫ್ರೀಡಂ ಪಾರ್ಕ್‌ನಿಂದ ಮೆರವಣಿಗೆ ನಡೆಸಿದ ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ದೊಡ್ಡ ಗುಂಪೊಂದು ರಾಜ್ಯ ವಿಧಾನಮಂಡಲಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಭಾರಿ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಪ್ರತಿಭಟನಾಕಾರರು ಆವರಣದೊಳಗೆ ಪ್ರವೇಶಿಸದಂತೆ ತಡೆದರು ಮತ್ತು ನಂತರ ಹಲವು ಹಿರಿಯ ನಾಯಕರನ್ನು ವಶಕ್ಕೆ ಪಡೆದರು. ಪೊಲೀಸರು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನೂ ವಶಕ್ಕೆ ತೆಗೆದುಕೊಂಡರು.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 'ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸ್ ಪಡೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆಡಳಿತಾರೂಢ ಸರ್ಕಾರದ 'ಪಾಪದ ಕೊಡ ತುಂಬಿದೆ' ಎಂದು ದೂರಿದರು.

ಆರ್ ಅಶೋಕ್ ಮಾತನಾಡಿ, 'ಬಿ. ನಾಗೇಂದ್ರ ಅವರು ವಾಲ್ಮೀಕಿ ನಿಗಮದ ಹಣವನ್ನು — ಅಂದರೆ ₹180 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಮಾಡಿದ್ದಾರೆ. ಹಾಗಾಗಿ ಆ ಹಣವನ್ನು ಮರಳಿಸಬೇಕು. ಇದೇ ಕಾರಣಕ್ಕಾಗಿ ನಾವು ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ; ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ. ಪೊಲೀಸರು ನಮ್ಮೊಂದಿಗೆ ಒರಟಾಗಿ ವರ್ತಿಸಿದ್ದಾರೆ. ಈ ಸರ್ಕಾರವು ವಿರೋಧ ಪಕ್ಷದ ಮೇಲೆ ದಾಳಿ ನಡೆಸುತ್ತಿದೆ. ಇದು ಸರಿಯಲ್ಲ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ, ಆದರೆ ಕಾಂಗ್ರೆಸ್‌ನವರು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಈ ಪ್ರತಿಭಟನೆ (ಧರಣಿ) ಮುಂದುವರಿಯುತ್ತದೆ' ಎಂದರು.

ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರಗಳಿಗೆ ಹಣ ಒದಗಿಸಲು, 2024ರಲ್ಲಿ ವಾಲ್ಮೀಕಿ ನಿಗಮಕ್ಕೆ ಸೇರಿದ ₹187 ಕೋಟಿಗಳನ್ನು ರಾಜ್ಯದ ಖಜಾನೆಯಿಂದ ಲೂಟಿ ಮಾಡಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ಸದ್ಯ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ಮೊದಲ ದಿನದಿಂದಲೂ, ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ಸದಸ್ಯರು ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡರಲ್ಲೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಈಮಧ್ಯೆ, ಬಿ. ನಾಗೇಂದ್ರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅನುಮತಿಯನ್ನು ಕೋರಿದೆ.

Karnataka Congress workers wearing face masks of prominent Karnataka BJP and JD(S) leaders protest against them.
'ಅದಾನಿಗೆ ರೆಡ್ ಕಾರ್ಪೆಟ್, ಜನರಿಗೆ ಬಿಸ್ಕೆಟ್': ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ; Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com