

ಬೆಂಗಳೂರು: ರಾಜಧಾನಿಯ ಖಾಲಿ ನಿವೇಶನಗಳಲ್ಲಿ ಕಸ ಹಾಗೂ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಲು ಬಿಬಿಎಂಪಿ ನೀಡಿದ್ದ ಗಡುವು ಮುಗಿದಿದ್ದರೂ, ಕೇವಲ ಶೇಕಡಾ 20 ರಷ್ಟು ಮಾಲೀಕರು ಮಾತ್ರ ನಿಯಮ ಪಾಲಿಸಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಡೆದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ನಗರದ ಎಲ್ಲಾ ಪಾಲಿಕೆ ವ್ಯಾಪ್ತಿಗಳಲ್ಲಿ ಕಸ ಹಾಕಲಾಗುತ್ತಿರುವ ಖಾಲಿ ನಿವೇಶನಗಳನ್ನು ಗುರುತಿಸಿ, ಮಾಲೀಕರಿಗೆ ನೋಟಿಸ್ ನೀಡಿ, ಅವರು ಸ್ವಚ್ಛಗೊಳಿಸಲು ವಿಫಲರಾದರೆ ಪಾಲಿಕೆಯೇ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ತ್ಯಾಜ್ಯ ಮುಕ್ತ ಅಭಿಯಾನ’ದಡಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ಆಗಸ್ಟ್ 22ರವರೆಗೆ ಸಮಯ ನೀಡಲಾಗಿತ್ತು. ಆದರೆ, ಕೆಲವು ಪ್ರದೇಶಗಳಲ್ಲಿ ಆಗಸ್ಟ್ 15ರ ಗಡುವಿನೊಳಗೆ ಕೇವಲ ಶೇ.20ರಷ್ಟು ನಿವೇಶನ ಮಾಲೀಕರು ಮಾತ್ರ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪಾಲಿಕೆಗಳು ಇದೀಗ ಕಸ ಸುರಿಯಲಾಗುತ್ತಿರುವ ಖಾಲಿ ನಿವೇಶನಗಳನ್ನು ಗುರುತಿಸಿ, ಮಾಲೀಕರಿಗೆ ನೋಟಿಸ್ ನೀಡಬೇಕು. ಅವುಗಳನ್ನು ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಪಾಲಿಕೆಯೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಾದ ಸಂದರ್ಭದಲ್ಲಿ, ಅದರ ವೆಚ್ಚವನ್ನು ನಂತರ ಆಸ್ತಿ ತೆರಿಗೆ ಮೂಲಕ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಸೂಚಿಸಿದರು.
ಸ್ವಚ್ಛಗೊಳಿಸದ ಖಾಲಿ ನಿವೇಶನಗಳ ಬಗ್ಗೆ ಸಾರ್ವಜನಿಕರು ‘ಕ್ಲಿಯರ್ ಇಟ್’ ಆ್ಯಪ್ ಮೂಲಕ ದೂರು ನೀಡಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಐದು ಪಾಲಿಕೆಗಳು ಗುರುವಾರದಿಂದಲೇ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಆರಂಭಿಸಬೇಕು. ಮುಂದಿನ ಸೋಮವಾರದಿಂದ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಿ, ಹೆಚ್ಚಿನ ಪ್ರಮಾಣದಲ್ಲಿ ಜಾರಿಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.
ನಗರಾದ್ಯಂತ ಸ್ವಚ್ಛತಾ ಕಾರ್ಯ ನಡೆಸಲು ಅಗತ್ಯವಿರುವ ಅಗೆಯುವ ಯಂತ್ರಗಳು, ಟಿಪ್ಪರ್‌ಗಳು, ಟ್ರ್ಯಾಕ್ಟರ್‌ಗಳು ಹಾಗೂ ಸಾಕಷ್ಟು ಸಿಬ್ಬಂದಿ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮುಂಚಿತವಾಗಿ ಮಾಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.