ಕರಡು ಮತದಾರರ ಪಟ್ಟಿ ಪ್ರಕಟ: ಹೊರಗುಳಿದ 1.07 ಕೋಟಿ ಮತದಾರರು; ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

ಈ ಕರಡು ಪಟ್ಟಿಯಲ್ಲಿ ಒಟ್ಟು 4,46,35,975 ಮತದಾರರಿದ್ದಾರೆ — ಅದರಲ್ಲಿ 2,21,59,240 ಪುರುಷರು, 2,24,73,864 ಮಹಿಳೆಯರು, 3,70,341 ಹೊಸ ಮತದಾರರು, 951 ಅನಿವಾಸಿ ಭಾರತೀಯ (NRI) ಮತದಾರರು ಮತ್ತು 44,176 ಸೇವಾ ಮತದಾರರು ಸೇರಿದ್ದಾರೆ.
Chief Electoral Officer V Anbukkumar speaks at a meeting.
ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸಭೆಯಲ್ಲಿ ಮಾತನಾಡುತ್ತಿರುವುದು
Updated on

ವಿಶೇಷ ತೀವ್ರ ಪರಿಷ್ಕರಣೆ (SIR) ಮುಂದಿನ ಹಂತಕ್ಕೆ ಕಾಲಿಡುತ್ತಿರುವಂತೆಯೇ, ಕರ್ನಾಟಕದ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ನಿನ್ನೆ ಸೋಮವಾರ ಪ್ರಕಟಿಸಲಾಗಿದೆ.

ಈ ಕರಡು ಪಟ್ಟಿಯಲ್ಲಿ ಒಟ್ಟು 4,46,35,975 ಮತದಾರರಿದ್ದಾರೆ — ಅದರಲ್ಲಿ 2,21,59,240 ಪುರುಷರು, 2,24,73,864 ಮಹಿಳೆಯರು, 3,70,341 ಹೊಸ ಮತದಾರರು, 951 ಅನಿವಾಸಿ ಭಾರತೀಯ (NRI) ಮತದಾರರು ಮತ್ತು 44,176 ಸೇವಾ ಮತದಾರರು ಸೇರಿದ್ದಾರೆ.

ನೋಂದಾಯಿತ ಒಟ್ಟು 5.54 ಕೋಟಿ ಮತದಾರರಲ್ಲಿ, 1.07 ಕೋಟಿ ಮತದಾರರನ್ನು ASDDO (ಗೈರುಹಾಜರಿ, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಮತ್ತು ಇತರರು) ಪಟ್ಟಿಯಡಿಯಲ್ಲಿ ಗುರುತಿಸಿ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್, "ಒಟ್ಟು 43.81 ಲಕ್ಷ ಮತದಾರರಿಗೆ ನೊಟೀಸ್ ನೀಡಲಾಗುತ್ತದೆ. ಇದರಲ್ಲಿ 20.35 ಲಕ್ಷ ತಾರ್ಕಿಕ ವ್ಯತ್ಯಾಸಗಳು (Logical Discrepancy) ಮತ್ತು 23.45 ಲಕ್ಷ ಮ್ಯಾಪಿಂಗ್ ಇಲ್ಲದ (No-Mapping) ಪಟ್ಟಿಗೆ ಸೇರಿವೆ. ನೊಟೀಸ್ ನೀಡುವ ಮತದಾರರ ನೋಂದಣಾಧಿಕಾರಿಗಳು (ERO) ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಹಕ್ಕುಗಳ ಪರಿಶೀಲನೆಗಾಗಿ ಆಗಸ್ಟ್ 31 ರಿಂದ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಗಣತಿ ನಮೂನೆಗಳನ್ನು ಸಲ್ಲಿಸಿರುವ ಎಲ್ಲಾ ಮತದಾರರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಬೇಕು. ಕರಡು ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಮಾತ್ರ ಹೆಸರು, ಜನ್ಮ ದಿನಾಂಕ ತಿದ್ದುಪಡಿ ಅಥವಾ ವಿಧಾನಸಭಾ ಕ್ಷೇತ್ರದ ಒಳಗೆ ಅಥವಾ ಹೊರಗೆ ಸ್ಥಳಾಂತರಗೊಂಡ ಕಾರಣಕ್ಕಾಗಿ ವಿಳಾಸ ಬದಲಾವಣೆಗೆ ನಮೂನೆ 8 (Form 8) ಮೂಲಕ ಸೆಪ್ಟೆಂಬರ್ 23 ರೊಳಗೆ ಅರ್ಜಿ ಸಲ್ಲಿಸಬಹುದು.

Chief Electoral Officer V Anbukkumar speaks at a meeting.
SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್; ಬೆಂಗಳೂರಲ್ಲೇ ಅತಿ ಹೆಚ್ಚು!

ನೈಜ ಮತದಾರರನ್ನು ಮರಳಿ ಪಟ್ಟಿಗೆ ಸೇರಿಸಲು ಹೆಚ್ಚು ASDDO ಹೊಂದಿರುವ ಪ್ರದೇಶಗಳಲ್ಲಿ ವಿಶೇಷ ಮತದಾರರ ನೋಂದಣಿ ಅಭಿಯಾನವನ್ನು (ನಮೂನೆ 6) ನಡೆಸಲಾಗುವುದು. ಸೆಪ್ಟೆಂಬರ್ 23 ರ ಮೊದಲು ನಮೂನೆ 6 (Form 6) ನ್ನು ಯಾರು ಸಲ್ಲಿಸುತ್ತಾರೋ, ಅವರನ್ನು ಪರಿಶೀಲನೆಯ ನಂತರ ಅಕ್ಟೋಬರ್ 27 ರಂದು ಪ್ರಕಟವಾಗುವ ಅಂತಿಮ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ಮತದಾರರ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, ಸೆಪ್ಟೆಂಬರ್ 23 ರ ನಂತರ ಅರ್ಜಿ ಸಲ್ಲಿಸುವವರನ್ನು ಮುಂದಿನ ಪೂರಕ ಪಟ್ಟಿಯಲ್ಲಿ ಸೇರಿಸಲಾಗುತ್ತದೆಯೇ ಹೊರತು ಅಂತಿಮ SIR ಪಟ್ಟಿಯಲ್ಲಲ್ಲ. ಬೂತ್ ಮಟ್ಟದ ಏಜೆಂಟರು (BLA) ಮತದಾರರ ಸೇರ್ಪಡೆಗಾಗಿ ದಿನಕ್ಕೆ 10 ನಮೂನೆಗಳನ್ನು ಸಲ್ಲಿಸಬಹುದು.

ASDDO ಪಟ್ಟಿಯಲ್ಲಿರುವವರು ಬೇರೆಲ್ಲೂ ಹೆಸರು ನೋಂದಾಯಿಸದಿದ್ದರೆ ಮಾತ್ರ ನಮೂನೆ 6 ನ್ನು ಸಲ್ಲಿಸಬಹುದು. ಹೊಸ ಮತದಾರರು (ಅಕ್ಟೋಬರ್ 1 ಕ್ಕೆ ಅಥವಾ ಅದಕ್ಕಿಂತ ಮೊದಲು 18 ವರ್ಷ ತುಂಬುವವರು) ನಮೂನೆ 6 ಅನ್ನು ಸಲ್ಲಿಸಬಹುದು ಎಂದು ಸಿಇಒ ತಿಳಿಸಿದ್ದಾರೆ.

ಈಗಾಗಲೇ ಕರಡು ಪಟ್ಟಿಯಲ್ಲಿರುವ ಮ್ಯಾಪಿಂಗ್ ಇಲ್ಲದ ಮತ್ತು ತಾರ್ಕಿಕ ವ್ಯತ್ಯಾಸದ ಪ್ರಕರಣಗಳಿಗೆ ಮಾತ್ರ ನೋಟಿಸ್‌ಗಳನ್ನು ನೀಡಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಮುದ್ರಿತ ಪ್ರತಿಯನ್ನು ಮತದಾರರ ಮನೆಬಾಗಿಲಿಗೆ ತಲುಪಿಸಲಿದ್ದಾರೆ.

ERO ಗಳು ಸಮಸ್ಯೆಯ ಪ್ರಕಾರ, ವಿಚಾರಣೆಯ ದಿನಾಂಕ, ಸಮಯ, ಸ್ಥಳ ಮತ್ತು ಅಗತ್ಯವಿರುವ ದಾಖಲೆಗಳನ್ನು ನಮೂದಿಸುತ್ತಾರೆ. ಮತದಾರರು ವಿಚಾರಣೆಗೆ ಗೈರುಹಾಜರಾದರೆ, ಎರಡನೇ (ಅಂತಿಮ) ನೋಟಿಸ್ ನೀಡಲಾಗುವುದು, ಅದರ ನಂತರ ಅವರು ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನೀಡಲಾದ ನೋಟಿಸ್‌ಗಳ ಪಟ್ಟಿಯನ್ನು ಒಂದೆರಡು ದಿನಗಳಲ್ಲಿ ಪೋಲಿಂಗ್ ಬೂತ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ.

ನೋಟಿಫಿಕೇಶನ್ ಪಡೆಯುವ ಮ್ಯಾಪಿಂಗ್ ಆಗದ ಮತದಾರರು ಭಾರತದ ಯಾವುದೇ ರಾಜ್ಯದಿಂದ ಮ್ಯಾಪಿಂಗ್ ಡೇಟಾವನ್ನು ಒದಗಿಸಬಹುದು. ಹಲವು ಬಾರಿ ವಲಸೆಯ ಕಾರಣದಿಂದಾಗಿ, ಮತದಾರರು 2002 ರ ಕರ್ನಾಟಕ SIR ಮತದಾರರ ಪಟ್ಟಿಯಲ್ಲಿ ಇಲ್ಲದಿರಬಹುದು.

ಮ್ಯಾಪಿಂಗ್ ಡೇಟಾವು ವೇಗದ ಪರಿಶೀಲನೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಮ್ಯಾಪಿಂಗ್ ಡೇಟಾವನ್ನು ಹುಡುಕಲು BLO ಗಳು ಸಹಾಯ ಮಾಡಬಹುದು. ಯಾವುದೇ ಮ್ಯಾಪಿಂಗ್ ಡೇಟಾ ಲಭ್ಯವಿಲ್ಲದಿದ್ದರೆ, ಮತದಾರರು ಭಾರತೀಯ ಚುನಾವಣಾ ಆಯೋಗ (ECI) ಪಟ್ಟಿ ಮಾಡಿದ 12 ದಾಖಲೆಗಳಲ್ಲಿ ಯಾವುದನ್ನಾದರೂ ಸಲ್ಲಿಸಬೇಕು ಎಂದು ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ನೋಟಿಸ್‌ಗಳು ಮತ್ತು ನಮೂನೆ 6 ಅರ್ಜಿಗಳನ್ನು (ಪ್ರತಿ AERO ಗೆ ಸರಾಸರಿ 1,026 ನೋಟಿಸ್‌ಗಳು) ನಿರ್ವಹಿಸಲು 224 ERO ಗಳು ಮತ್ತು 332 ಸಹಾಯಕ ERO ಗಳ (AERO) ಜೊತೆಗೆ, ಚುನಾವಣಾ ಆಯೋಗವು 3,926 ಹೆಚ್ಚುವರಿ ERO ಗಳನ್ನು ನೇಮಿಸಿದೆ.

ದೂರಿನ ಆಧಾರದ ಮೇಲೆ ಅಥವಾ ನಮೂನೆ 6 ರ ಜೊತೆಗೆ ಸಲ್ಲಿಸಲಾದ ದಾಖಲೆಗಳ ಅಧಿಕೃತತೆಯ ಬಗ್ಗೆ ಸಂಶಯವಿದ್ದರೆ ERO ಗಳು ನೋಟಿಸ್‌ಗಳನ್ನು ಜಾರಿಗೊಳಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com