Hate Speech Bill: ಕಾಯ್ದೆ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಹರಣ ಸರಿಯಲ್ಲ; ಅಂಕಿತಕ್ಕೆ ರಾಜ್ಯಪಾಲ ನಕಾರ, ಮಸೂದೆ ರಾಷ್ಟ್ರಪತಿ ಅಂಗಳಕ್ಕೆ..!

ಸಂವಿಧಾನಬದ್ಧತೆ, ಕಾನೂನು ವ್ಯಾಪ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಸೂದೆಯ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
Governor
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಕೈಕುಲುಕಿದ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ದ್ವೇಷ ಭಾಷಣ’ ವಿಧೇಯಕಕ್ಕೆ ಅಂಗೀಕಾರ ಹಾಕುವುದಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರುರು ನಿರಾಕರಿಸಿದ್ದು, ಸಮಾಜದಲ್ಲಿ ದ್ವೇಷ ಭಾಷಣ ಹಾನಿಕಾರಕವಾದರೂ, ಅದನ್ನು ತಡೆಯುವ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಹರಣ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಸೂದೆಯ ಸಂವಿಧಾನಬದ್ಧತೆ, ಕಾನೂನು ವ್ಯಾಪ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅದರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಸಂವಿಧಾನದ ವಿಧಿ 200, 201 ಮತ್ತು 254ರ ಅಡಿಯಲ್ಲಿ ಅಧಿಕಾರ ಚಲಾಯಿಸಿರುವ ರಾಜ್ಯಪಾಲರು, ಸಮಾಜದಲ್ಲಿ ದ್ವೇಷ ಭಾಷಣ ಹಾನಿಕಾರಕವಾದರೂ, ಅದನ್ನು ತಡೆಯುವ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಹರಣ ಮಾಡುವುದು ಸೂಕ್ತವಲ್ಲ. ದ್ವೇಷಕ್ಕೆ ಉತ್ತರವಾಗಿ ದಮನಕಾರಿ ಕಾನೂನುಗಳ ಬದಲು ಶಿಕ್ಷಣ, ಸಂಸ್ಕೃತಿ ಮತ್ತು ಜಾಗೃತಿಯೇ ಪರಿಣಾಮಕಾರಿ ಮಾರ್ಗವಾಗಬೇಕು ಎಂದು ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.

ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರಗೊಂಡಿತ್ತು.

ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ ಅಥವಾ ಲಿಂಗದ ಆಧಾರದ ಮೇಲೆ ದ್ವೇಷದ ಭಾಷಣ ಮಾಡುವುದು ದ್ವೇಷಾಪರಾಧದ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ, ಯಾವುದೇ ರೀತಿಯ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು ಸಹ ಇದರಲ್ಲಿ ಸೇರಿದೆ. ಯಾವುದೇ ಮಾಧ್ಯಮದ ಮೂಲಕ ದ್ವೇಷವನ್ನು ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದಕ್ಕೆ ಈ ಮಸೂದೆಯ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ.

Governor
ದ್ವೇಷ ಭಾಷಣ ಬಿಟ್ಟು 19 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ; ಎರಡು ಮಸೂದೆ ವಾಪಸ್

ಈ ಮಸೂದೆಯು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಸಮುದಾಯವನ್ನು ಗುರಿಯಾಗಿಸಿಲ್ಲವೆಂದು ಸ್ಪಷ್ಟಪಡಿಸಿರುವ ಸರ್ಕಾರ, ಇದು ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಮತ್ತು ದ್ವೇಷದ ಹರಡುವಿಕೆಯನ್ನು ತಡೆಯುತ್ತದೆ ಎಂದಿದೆ. ಭವಿಷ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಕಾನೂನು ಅನ್ವಯವಾಗಲಿದ್ದು, ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಪ್ರತಿಯೊಬ್ಬ ವ್ಯಕ್ತಿಯು ವೇದಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಾಗ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ.

ಆದರೆ ಮಸೂದೆಯಲ್ಲಿನ ವ್ಯಾಖ್ಯಾನಗಳು ಅಸ್ಪಷ್ಟವಾಗಿದ್ದು, ಅವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

ಸಮಾನತೆ (ವಿಧಿ 14), ಅಭಿವ್ಯಕ್ತಿ ಸ್ವಾತಂತ್ರ್ಯ (ವಿಧಿ 19(1)(ಎ)), ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯ (ವಿಧಿ 21) ಸೇರಿದಂತೆ ಹಲವು ಸಂವಿಧಾನಾತ್ಮಕ ಅಂಶಗಳ ಮೇಲೆ ಮಸೂದೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಕೇಂದ್ರ ಕಾನೂನುಗಳೊಂದಿಗೆ ಸಂಭವಿಸಬಹುದಾದ ಘರ್ಷಣೆ, ಶಾಸನಾತ್ಮಕ ಸಾಮರ್ಥ್ಯ ಮತ್ತು ಕೇಂದ್ರ–ರಾಜ್ಯ ಒಕ್ಕೂಟ ಸಮತೋಲನಕ್ಕೂ ಸಂಬಂಧಿಸಿದ ಕಾನೂನು ವಿಚಾರಗಳನ್ನು ಅವರು ಪರಿಗಣಿಸಿದ್ದಾರೆ.

ಮಸೂದೆ ಅಡಿಯಲ್ಲಿ ಮೊದಲ ಬಾರಿಗೆ ಅಪರಾಧ ಸಾಬೀತಾದರೆ ಏಳು ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ ಪುನರಾವೃತ್ತಿ ಅಪರಾಧಕ್ಕೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸುವುದರ ಜೊತೆಗೆ, ಜಾಮೀನುರಹಿತ ವಿಧಾನಗಳನ್ನು ಒಳಗೊಂಡಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಕಠಿಣ ಶಿಕ್ಷೆಗಳು ಕಾನೂನನ್ನು ದಮನಕಾರಿ ಸ್ವರೂಪಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಮಸೂದೆಗೆ ಸಂಬಂಧಿಸಿ ರಾಜಭವನಕ್ಕೆ 40ಕ್ಕೂ ಹೆಚ್ಚು ಮನವಿ ಪತ್ರಗಳು ಸಲ್ಲಿಕೆಯಾಗಿದ್ದು, ನಾಗರಿಕ ಸಮಾಜ, ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ಹಕ್ಕುಗಳ ಸಂಘಟನೆಗಳು ಹಾಗೂ ಸಂವಿಧಾನ ತಜ್ಞರೊಂದಿಗೆ ಸೂಕ್ತ ಸಮಾಲೋಚನೆ ನಡೆಸದೆ ಮಸೂದೆ ಅಂಗೀಕರಿಸಲಾಗಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.

ಕರ್ನಾಟಕವು ಬೌದ್ಧಿಕ ಮತ್ತು ಸಾಂಸ್ಕೃತಿಕ ಚಳವಳಿಗಳ ತವರೂರಾಗಿದೆ. ಆದರೆ, ಈ ಮಸೂದೆ ಅಂತಹ ಬೌದ್ಧಿಕ ಪರಂಪರೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರಾಜ್ಯಪಾಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜದ ಹಕ್ಕಾಗಿದ್ದು, ಅದನ್ನು ರಕ್ಷಿಸುವುದು ಅತ್ಯಗತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com