

ಉಡುಪಿ: ದುಬೈನ ಪ್ರತಿಷ್ಠಿತ ಲಾಟರಿಯಾದ ಬಿಗ್ ಟಿಕೆಟ್ ನ ಲಕ್ಕಿ ಡ್ರಾದಲ್ಲಿ ಉಡುಪಿಯ ಯುವಕನಿಗೆ ಭರ್ಜರಿ 49 ಕೋಟಿ ರೂ. ಬಹುಮಾನ ಸಿಕ್ಕಿದೆ.
ಓಮನ್ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉಡುಪಿಯ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಅವರಿಗೆ ಬರೋಬ್ಬರಿ 49 ಕೋಟಿ ರೂ. ಲಾಟರಿ ಹೊಡೆದಿದೆ.
33 ವರ್ಷದ ಶಾಂತನು ಅವರು ಓಮನ್ನಲ್ಲಿ ರಿಟೇಲ್ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಬಿಗ್ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಂತನು ಅವರಿಗೆ ಅದೃಷ್ಟ ಖುಲಾಯಿಸಿದೆ.
ಶಾಂತನು ತನ್ನ ಸ್ನೇಹಿತನ ಜೊತೆ ಸೇರಿ ಈ ಟಿಕೆಟ್ ಖರೀದಿಸಿದ್ದರು. ಹೀಗಾಗಿ ಬಹುಮಾನವನ್ನು ಸಹ ಸ್ನೇಹಿತನ ಜೊತೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ.
ಒಟ್ಟು 49 ಕೋಟಿ ರೂಪಾಯಿನಲ್ಲಿ ಇಬ್ಬರೂ ತಲಾ 24.5 ಕೋಟಿ ರೂ. ಹಂಚಿಕೊಳ್ಳಲು ನಿರ್ಧರಿಸಿರುವುದಾಗಿ ಸ್ವತಃ ಶಾಂತನು ಹೇಳಿಕೊಂಡಿದ್ದಾರೆ.
2021ರಿಂದಲೂ ಬಿಗ್ ಟಿಕೆಟ್ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ. ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದಿರುವ ಶಾಂತನು, ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ ಎಂದಿದ್ದಾರೆ.
1992ರಲ್ಲಿ ಯುಎಇನಲ್ಲಿ ಈ ಬಿಗ್ ಟಿಕೆಟ್ ಲಕ್ಕಿ ಡ್ರಾ ಪ್ರಾರಂಭವಾಯಿತು. ಆರಂಭದಲ್ಲಿ ಸುಮಾರು 2 ಕೋಟಿ ರೂ.ನಿಂದ ಆರಂಭವಾದ ಲಾಟರಿ ಇದೀಗ 49 ಕೋಟಿ ರರೂ.ಗೆ ಏರಿಕೆಯಾಗಿದ್ದು, ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದೆನಿಸಿಕೊಂಡಿದೆ.
Advertisement