

ಬೆಂಗಳೂರು: ಇತ್ತೀಚೆಗಷ್ಟೇ ಮದುವೆಯಾಗಿದ್ದ ಕನ್ನಡದ ನಟ ಧನುಷ್ ರಾಜ್ ತಮ್ಮ ಪತ್ನಿ ವಿರುದ್ಧವೇ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕಿರುಕುಳ ದೂರು ದಾಖಲಿಸಿದ್ದಾರೆ.
ಹೌದು.. 'ಶಿವಾಜಿ ಸುರತ್ಕಲ್' ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳು ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ಧನುಷ್ ರಾಜ್ ತಮ್ಮ ಪತ್ನಿ ಆಶ್ರಿತಾ ವಿರುದ್ಧ ಕಿರುಕುಳ ಆರೋಪ ಹೊರಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಕೇವಲ ಒಂಬತ್ತು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕನ್ನಡ ನಟ ಧನುಷ್ ರಾಜ್ ಅವರು ತಮ್ಮ ಪತ್ನಿ ಆಶ್ರಿತಾ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಗಿರಿನಗರ ಪೊಲೀಸ್ ಠಾಣೆಗೆ ನಟ ಧನುಷ್ ದೂರು ನೀಡಿದ್ದು, ಮತ್ತೊಂದೆಡೆ ಪತಿಯ ವಿರುದ್ಧ ಆಶ್ರಿತಾ ಕೂಡಾ ಬೆಂಗಳೂರು ದಕ್ಷಿಣ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹೊಡಿತಾಳೆ.. ಬಡಿತಾಳೆ
ತಾನು ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಪತ್ನಿ ಆಶ್ರಿತಾ, ಅನಗತ್ಯವಾಗಿ ಅನುಮಾನ ಪಡುತ್ತಿದ್ದಾರೆ. ಮನೆಯವರ ಸಮ್ಮುಖದಲ್ಲೇ ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಹೊರಗಿನಿಂದ ಗೂಂಡಾಗಳನ್ನು ಕರೆಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ತಾನೇ ಬಾತ್ ರೂಮ್‌ನ ಗಾಜಿಗೆ ಕೈ ಒಡೆದುಕೊಂಡು ಗಾಯ ಮಾಡಿಕೊಂಡು, ಅದನ್ನು ನನ್ನ ಮೇಲೆ ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಧನುಷ್ ಆರೋಪಿಸಿದ್ದಾರೆ.
ಪತ್ನಿಯಿಂದಲೂ ಪ್ರತಿದೂರು
ಇತ್ತ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವ ಆಶ್ರಿತಾ, ಧನುಷ್ ಬೇರೆ ಹುಡುಗಿಯರ ಸಹವಾಸದಲ್ಲಿದ್ದಾರೆ. ಅವರ ಫೋನ್ ಚೆಕ್ ಮಾಡಿದಾಗ ಇನ್‌ಸ್ಟಾಗ್ರಾಂ ಫೋಟೋಗಳು ಹಾಗೂ ಇತರ ಸಂಬಂಧಗಳ ಬಗ್ಗೆ ತಿಳಿದಿದ್ದು, ಇತ್ತೀಚಿಗೆ ಸುಳ್ಳು ಹೇಳಿ ಬೇರೆಯವರ ಜೊತೆ ವಿದೇಶಕ್ಕೆ ಹೋಗಿದ್ದಾರೆ.
ಅದನ್ನು ಪ್ರಶ್ನಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಮದುವೆ ಸಮಯದಲ್ಲಿ 50 ಗ್ರಾಂ ಚಿನ್ನ ನೀಡಿದ್ದರೂ ಸಹ ಈಗ ಹೆಚ್ಚುವರಿಯಾಗಿ 8 ಲಕ್ಷ ರೂ. ಹಣ ತರುವಂತೆ ಪೀಡಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಇಬ್ಬರ ಆರೋಪ ಪ್ರತ್ಯಾರೋಪದ ಕುರಿತು ಎರಡೂ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ. ಹಲ್ಲೆ ಹಾಗೂ ಬೆದರಿಕೆ ಕುರಿತು ಆಶ್ರಿತಾ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಧನುಷ್ ವಿರುದ್ಧವೂ ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಹಿಂಸೆ ಕುರಿತು ದಕ್ಷಿಣ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement