

ಕೊಪ್ಪಳ: ಸಾರಾಯಿಮುಕ್ತ ಗ್ರಾಮಗಳ ಕನಸು ಕಂಡ ಮಹಾತ್ಮ ಗಾಂಧಿ ಅವರ ಕನಸು ಈವರೆಗೂ ಈಡೇರಿಲ್ಲ. ಆಧುನಿಕ ಜಗತ್ತಿನ ಹೆಸರಿನಲ್ಲಿ ಮದ್ಯಪಾನ ಹೆಚ್ಚಾಗುತ್ತಲೇ ಇದ್ದು, ಈ ನಡುವೆ ಕೊಪ್ಪಳ ಜಿಲ್ಲೆಯ ಕುಂಟೋಜಿ ಎಂಬ ಸಣ್ಣ ಗ್ರಾಮವೊಂದು ಕಠಿಣ ನಿರ್ಣಯ ಕೈಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.
ಇತ್ತೀಚೆಗೆ, ಕುಂಟೋಜಿ ಗ್ರಾಮದ ಗ್ರಾಮಸ್ಥರು ದುರ್ಗಾದೇವಿ ದೇವಸ್ಥಾನದಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ.
ಮದ್ಯ ಮಾರಾಟ ಅಥವಾ ಸೇವನೆ, ಗುಟ್ಕಾ ಅಗಿಯುವುದು ಅಥವಾ ಮಟ್ಕಾ ಆಡುವುದು ಮುಂತಾದ ವ್ಯಸನಿಗಳಿಗೆ ದೈಹಿಕವಾಗಿ ಥಳಿಸಿ ನಂತರ 25,000 ರೂ. ದಂಡ ವಿಧಿಸುವುದಾಗಿ ನಿರ್ಣಯ ಕೈಗೊಂಡಿದೆ.
ಮಟ್ಕಾ, ಇಸ್ಪೀಟ್, ಜೂಜಾಟದಿಂದ ಸಂಸಾರಗಳು ಬೀದಿ ಪಾಲಾಗುತ್ತವೆ. ಮದ್ಯಪಾನ, ಗುಟ್ಕಾದಿಂದ ಆರೋಗ್ಯ ಹಾಳಾಗುತ್ತಿದೆ. ಸಾಲ ಹೆಚ್ಚಾಗಿ ಆರ್ಥಿಕ ಸಮಸ್ಯೆಗಳು ಎದುರಾಗುತ್ತಿದೆ. ವ್ಯಸನಗಳು ಯುವ ಪೀಳಿಗೆಯ ಭವಿಷ್ಯವನ್ನೂ ಹಾಳು ಮಾಡುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದು, ಈ ಹಿನ್ನೆಲೆಯಲ್ಲಿ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಇಂದ್ರವೆಲ್ಲಿ ತಾಲ್ಲೂಕಿನ ಬುಡಕಟ್ಟು ಗ್ರಾಮಸ್ಥರ ನಿಯಮವನ್ನು ಅನುಸರಿಸಬೇಕೆಂದು ಒತ್ತಾಯಗಳು ಕೇಳಿ ಬಂದಿದೆ.
ಇದಕ್ಕೆ ಹಲವರು ಒಪ್ಪಿಗೆ ಸೂಚಿಸಿದ್ದು, ನಿಯಮವನ್ನು ಜಾರಿಗೆ ತರಲಾಗಿದೆ. ಇದರಂತೆ ಇನ್ನು ಮುಂದೆ ಈ ಗ್ರಾಮದಲ್ಲಿ , ಮಟ್ಕಾ, ಇಸ್ಪೀಟ್, ಗುಟ್ಕಾ ಮಾರಾಟ ಮಾಡುವಂತಿಲ್ಲ. ಮಾಡಿದ್ದೇ ಆದರೆ, ಸಾರ್ವಜನಿಕವಾಗಿ ಥಳಿಸಿ ರೂ.25 ಸಾವಿರ ದಂಡ ವಿಧಿಸುವುದಾಗಿ ಗ್ರಾಮದ ಹಿರಿಯಲು ಹೇಳಿದ್ದಾರೆ.
ಕುಂಟೋಜಿಗೆ ಭೇಟಿ ನೀಡಿದ ಕೊಪ್ಪಳ ನಿವಾಸಿ ದೇವಪ್ಪ ಕಮಲಾಪುರ ಅವರು ಮಾತನಾಡಿ, “ನಾನು ವೈಯಕ್ತಿಕ ಕೆಲಸದ ಮೇಲೆ ಗ್ರಾಮಕ್ಕೆ ಹೋದಾಗ ಸಭೆ ನಡೆಯುತ್ತಿರುವುದು ತಿಳಿದುಬಂದಿತ್ತು. ಅಲ್ಲಿಗೆ ಹೋದಾಗ ಗ್ರಾಮಸ್ಥರು ವ್ಯಸನಗಳಿಂದ ತಾವು ಅನುಭವಿಸಿದ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಈ ದುಶ್ಚಟಗಳು ಕುಟುಂಬಗಳಿಗೆ ಮತ್ತು ಗ್ರಾಮದ ಪರಿಸರಕ್ಕೂ ಹಾನಿ ಮಾಡುತ್ತಿವೆ. ಇದನ್ನು ತಡೆಯಲು ತೆಲಂಗಾಣದ ಹಳ್ಳಿಯ ಉದಾಹರಣೆಯನ್ನು ತೆಗೆದುಕೊಂಡು ಕಪಾಳಮೋಕ್ಷ ಶಿಕ್ಷೆ ಮತ್ತು ದಂಡ ವಿಧಿಸಲು ನಿರ್ಧರಿಸಿದರು. ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಇದು ಒಳ್ಳೆಯ ಉಪಕ್ರಮ ಮತ್ತು ಇದು ಇತರರಿಗೂ ಮಾದರಿಯಾಗಬೇಕು ಎಂದು ಹೇಳಿದ್ದಾರೆ.
ಗಂಗಾವತಿ ತಾಲ್ಲೂಕು ಪಂಚಾಯತ್ ಅಧಿಕಾರಿಯೊಬ್ಬರು ಮಾತನಾಡಿ, ನಾವು ಇದರ ಬಗ್ಗೆ ಕೇಳಿದ್ದೇವೆ, ಆದರೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಇದು ಉತ್ತಮ ನಿರ್ಧಾರವಾಗಿದ್ದು, ಇದನ್ನು ಪರಿಶೀಲಿಸುತ್ತೇವೆಂದು ಹೇಳಿದ್ದಾರೆ.
Advertisement