

ಬೆಂಗಳೂರು: ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿದ ಆರೋಪದ ಮೇರೆಗೆ ಸೈಬರ್ ಸೆಂಟರ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಸೈಯದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಯುವತಿ ರಜೆ ಹಾಕಿದ್ದಕ್ಕೆ ಸೈಬರ್ ಸೆಂಟರ್ ಮಾಲೀಕ ಸೈಯದ್ ಸಾರ್ವಜನಿಕವಾಗಿ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಐದು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದರೂ, ಕೆಲಸಕ್ಕೆ ರಜೆ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಸೈಬರ್ ಸೆಂಟರ್ ಮಾಲೀಕನೋರ್ವ ಯುವತಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ರಾಜಧಾನಿಯ ಕೆಂಗೇರಿಯಲ್ಲಿ ನಡೆದಿದೆ. ಯುವತಿಯ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಮುಸ್ಕಾನ್ ಟೈಮ್ಸ್ ಸೈಬರ್ ಸೆಂಟರ್ ಮಾಲೀಕ ಸೈಯದ್‌ನನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ ಕಳೆದ ಐದು ವರ್ಷಗಳಿಂದ ಲಕ್ಷ್ಮಿ ಎಂಬ ಯುವತಿ ಕೆಂಗೇರಿಯಲ್ಲಿರುವ ಸೈಯದ್ ಎಂಬುವವರಿಗೆ ಸೇರಿದ 'ಮುಸ್ಕಾನ್ ಟೈಮ್ಸ್' ಸೈಬರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಲಕ್ಷ್ಮಿ ಅವರು ಕಳೆದ ಕೆಲವು ದಿನಗಳಿಂದ ಕೆಲಸಕ್ಕೆ ಗೈರಾಗಿದ್ದರು. ಇದರಿಂದ ತೀವ್ರವಾಗಿ ಕೆರಳಿದ್ದ ಮಾಲೀಕ ಸೈಯದ್, ಯುವತಿಯ ವಿರುದ್ಧಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಅಲ್ಲದೆ ಆಕೆಯ ವಿರುದ್ಧ ದ್ವೇಷ ಸಾಧಿಸಲು ಶುರು ಮಾಡಿದ್ದ ಎನ್ನಲಾಗಿದೆ.
ನಡುರಸ್ತೆಯಲ್ಲಿ ಸಂಘರ್ಷ
ಜನವರಿ 22 ರಂದು ರಾತ್ರಿ ಸುಮಾರು 7:30 ರ ಹೊತ್ತಿಗೆ ಲಕ್ಷ್ಮಿ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಅವರನ್ನು ಅಡ್ಡಗಟ್ಟಿದ ಸೈಯದ್ ಸಾರ್ವಜನಿಕವಾಗಿ ನಿಂದಿಸಲು ಶುರು ಮಾಡಿದ್ದಾನೆ. 'ನಿನಗೆ ಬಟ್ಟೆ ಬಿಚ್ಚಿ ಹೊಡೆಯುತ್ತೇನೆ, ರಸ್ತೆಯಲ್ಲಿಯೇ ಕತ್ತರಿಸಿ ಹಾಕುತ್ತೇನೆ' ಎಂಬ ಅತಿ ವಿಕೃತ ಮಾತುಗಳನ್ನಾಡಿ ಯುವತಿಯನ್ನು ಬೆದರಿಸಿದ್ದ. '"ನಿನ್ನಿಂದ ನನ್ನ ದುಡ್ಡೆಲ್ಲಾ ಹೋಯಿತು, ನನ್ನ ತಲೆ ಕೆಡಿಸಬೇಡ' ಎಂದು ಕೂಗಾಡಿ ಅಸಭ್ಯವಾಗಿ ವರ್ತಿಸಿದ್ದಾನೆ.
ಸ್ಥಳೀಯರ ಮಧ್ಯಪ್ರವೇಶ
ಸೈಯದ್ ಅರಚಾಟ ಮತ್ತು ಬೆದರಿಕೆ ಮಾತುಗಳನ್ನು ಕೇಳಿ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಆತನ ವರ್ತನೆಯನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಬ್ಬ ಮಹಿಳೆಯ ಜೊತೆ ವರ್ತಿಸುವ ರೀತಿ ಇದಲ್ಲ ಎಂದು ಬುದ್ಧಿ ಹೇಳಿದ ಸ್ಥಳೀಯರು, ಸೈಯದ್‌ನನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಪ್ರಕರಣ
ಇನ್ನು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಪೊಲೀಸರು ಆರೋಪಿ ಸೈಯದ್‌ನನ್ನು ವಶಕ್ಕೆ ಪಡೆದಿದ್ದಾರೆ. ಯುವತಿಗೆ ಪ್ರಾಣ ಬೆದರಿಕೆ ಮತ್ತು ಮಾನಹಾನಿ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಸದ್ಯದ ಮಾಹಿತಿಯ ಪ್ರಕಾರ ಆರೋಪಿಯು ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಡಿಯೋ ವೈರಲ್
ಸ್ಥಳೀಯರೊಬ್ಬರು ಈ ಸಂಘರ್ಷವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
Advertisement