

ಬೆಂಗಳೂರು: ನಗರದ ಡಿಕೆನ್ಸನ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿದಲ್ಲದೇ, ಕಾರಿಗೆ ಡಿಕ್ಕಿ ಹೊಡೆದು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬನಶಂಕರಿ ನಿವಾಸಿ ಸೈಯದ್ ಸಮೀರ್ ಎಂದು ಗುರುತಿಸಲಾಗಿದ್ದು, ಈತ ಕಿಡಿಗೇಡಿತನದ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 26 ರಂದು ಈ ಘಟನೆ ನಡೆದಿದ್ದು, ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಡಿಕೆನ್ಸನ್ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮುಂದೆ, ಸಿಗ್ನಲ್ ಜಂಪ್ ಮಾಡಿದ ಸಮೀರ್, ಪ್ರವೀಣ್ ಎಂಬುವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ನಂತರ ಪ್ರವೀಣ್ ಪ್ರಶ್ನೆ ಮಾಡಿದಾಗ, ನೀನ್ಯಾರೋ ಮಾತಾಡೋಕೆ, ನನ್ನ ಬೈಕ್, ನನ್ನ ಇಷ್ಟ ಎಂದು ಅವಾಜ್ ಹಾಕಿದ್ದಾನೆ.
ಪೊಲೀಸರ ಮುಂದೆ ಈ ಹೇಳಿಕೆ ನೀಡು ಅಂತಾ ಪ್ರವೀಣ್ ಕೇಳಿದಾಗ, ಯಾವ ಪೋಲೀಸ್? ನಾನು ಯಾಕೆ ಬರಬೇಕು? ಕೇಳಲು ನೀವು ಯಾರು?" ಎಂದು ಪ್ರತ್ಯುತ್ತರ ನೀಡಿದ್ದಾನೆ.
ಅಲ್ಲದೇ ಮಣಿಪಾಲ ಸೆಂಟರ್ ಬಳಿ ಕಾರು ಚಾಲಕನನ್ನು ಅಡ್ಡಗಟ್ಟಿದ್ದು, ನಿಂದಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ನಂತರ ವಿಡಿಯೋದಲ್ಲಿ ಕ್ಷಮೆಯಾಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement