

ಬೆಂಗಳೂರು: ನಾನು ತಿನ್ನುವ ಊಟದ ಕುರಿತು ನನ್ನನ್ನೇ ಕೇಳಿ.. ನನ್ನ ಧರ್ಮವನ್ನಲ್ಲ.. ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ಬೇಡ ಎಂದು ಖ್ಯಾತ ನಟ ಡಾಲಿ ಧನಂಜಯ್ ಹೇಳಿದ್ದಾರೆ.
ಈ ಹಿಂದೆ ನಟ ಧನಂಜಯ್ ಹೊಟೆಲ್ ಉದ್ಘಾಟಿಸಿ ಅಲ್ಲಿ ಬಿರಿಯಾನಿ ತಿನ್ನುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿತ್ತು. ಡಾಲಿ ಧನಂಜಯ್ ಬಿರಿಯಾನಿ ತಿನ್ನುತ್ತಿರುವುದನ್ನು ಪ್ರಶ್ನಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷ ಕಿಡಿಕಾರಿದ್ದರು. ಇದು ವ್ಯಾಪಕ ಸುದ್ದಿಗೂ ಗ್ರಾಸವಾಗಿತ್ತು.
ಲಿಂಗಾಯತ ಆಗಿ ಧನಂಜಯ್ ಅವರು ಮಾಂಸ ತಿಂದಿದ್ದು ಚರ್ಚೆಗೆ ಕಾರಣ ಆಯಿತು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಈ ಎಲ್ಲ ಟೀಕೆಗಳಿಗೆ ಸ್ವತಃ ನಟ ಡಾಲಿ ಧನಂಜಯ್ ಖಡಕ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾಲಿ, 'ಸ್ನೇಹಿತನ ಹೋಟೆಲ್‌ಗೆ ಊಟಕ್ಕೆ ಹೋಗಿದ್ದನ್ನು ಜಾತಿ, ಸಮುದಾಯದೊಂದಿಗೆ ತಳುಕು ಹಾಕಿರುವುದು ಬೇಸರ ತಂದಿದೆ. ಚಿತ್ರರಂಗಕ್ಕಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಚರ್ಚೆಯಾಗಬೇಕು. ನಮ್ಮ ವೈಯಕ್ತಿಕ ವಿಚಾರವಲ್ಲ. ಆಹಾರ ಎನ್ನೋದು ಅವರವರ ಆಯ್ಕೆ. ನನ್ನ ಬಳಿ ಬಂದು ಏನು ತಿಂತೀರಿ ಎಂದು ಕೇಳಿದರೆ ನಾನು ಖುಷಿಯಿಂದ ಅದನ್ನು ವಿವರಿಸುತ್ತೇನೆ. ಧನಂಜಯ್ ನಾನ್ವೆಜ್ ತಿಂತಾರಾ ಎಂದು ಕೇಳೋದು ತಪ್ಪಲ್ಲ. ಆದರೆ, ಲಿಂಗಾಯುತರು, ಬ್ರಾಹ್ಮಣರೆಲ್ಲ ಮಾಂಸ ತಿಂತಾರಾ ಎಂದು ಕೇಳೋದು ತಪ್ಪು’ ಎಂದು ಡಾಲಿ ಕಿಡಿಕಾರಿದ್ದಾರೆ.
'ಡಾಲಿ ಧನಂಜಯ್ ಬಿರಿಯಾನಿ ತಿಂದ್ರಾ ಅನ್ನೋದು ಓಕೆ.. ಆದರೆ ಲಿಂಗಾಯತರೆಲ್ಲರೂ ಬಿರಿಯಾನಿ ತಿಂತಾರಾ.. ಮಾಂಸ ತಿಂತಾರ.. ಬ್ರಾಹ್ಮಣರೆಲ್ಲರೂ ಮಾಂಸ ತಿಂತಾರ.. ಎಂದು ಸಮುದಾಯಗಳನ್ನು ಎಳೆದು ತರುವುದು ಬೇಕಿರಲಿಲ್ಲ. ಡಾಲಿ ಧನಂಜಯ್ ತಿಂತಾನಾ ಓಕೆ. ಇದನ್ನು ಮೊದಲು ಶುರು ಮಾಡಿದವರ ಉದ್ದೇಶ ಸಮುದಾಯದವರನ್ನ ಎತ್ತಿಕಟ್ಟುವುದಾ? ನನಗೆ ಗೊತ್ತಿಲ್ಲ. ಆದರೆ ಮೊದಲಾಗಿದ್ರೆ ಈ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುತ್ತಿದ್ದೆ. ಆದ್ರೆ ಈಗ ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಊಟ, ಅಭ್ಯಾಸಗಳು ನನ್ನ ವೈಯುಕ್ತಿಕ. ನಾನೇನು ಮಾಡ್ತೀನಿ ಅದು ನನಗೆ ಬಿಟ್ಟಿದ್ದು, ನನ್ನ ಪ್ರಕಾರ ಬೇರೆ ಯಾರಿಗೂ ತೊಂದರೆ ಕೊಡದ ಚಟಗಳು ತಪ್ಪಲ್ಲ ಎನ್ನುವುದು ನನ್ನ ಭಾವನೆ. ನಾನು ಮಾಡುವ ಕೆಲಸದಿಂದ ಮತ್ತೊಬ್ಬರಿಗೆ ತೊಂದರೆಯಾದರೆ ಅದು ತಪ್ಪು..
ಈ ಹಿಂದೆ ಸಿನಿಮಾ ಪಾತ್ರಕ್ಕೆ ಧೂಮಪಾನ ಮಾಡುತ್ತಿದ್ದೆ. ಬಳಿಕ ಅದು ಮುಂದುವರೆದಿತ್ತು. ಈಗ ಅದನ್ನು ಬಿಟ್ಟಿದ್ದೇನೆ. ಈ ಹಿಂದೆ ನಾನು ಸಾಕಷ್ಟು ಪಾರ್ಟಿಗಳನ್ನು ಮಾಡುತ್ತಿದ್ದ. ಹೆಚ್ಚು ಬಿಯರ್ ಕುಡಿಯುತ್ತಿದ್ದೆ. ಈಗ ಸಾಕಷ್ಟು ನಿಯಂತ್ರಣ ಹೇರಿಕೊಂಡಿದ್ದೇನೆ. ಹಾಗಂತ ಎಲ್ಲರಿಗೂ ಅದನ್ನು ಮಾಡಿ ಎಂದು ಹೇಳಲ್ಲ. ಯಾವುದೇ ಚಟ ಇತಿಮಿತಿಯಲ್ಲಿರಬೇಕು. ಅತಿಯಾಗಬಾರದು ಎಂದು ಡಾಲಿ ಹೇಳಿದರು.
'ನನಗೆ ಸೀ ಫುಡ್ ಬಹಳ ಇಷ್ಟ. ತಮ್ಮ ಆಹಾರದ ಆಯ್ಕೆ ವೈಯಕ್ತಿಕವಾಗಿದ್ದು, ಅದನ್ನು ಬೇರೆ ಬೇರೆ ಕೋನಗಳಲ್ಲಿ ವಿಶ್ಲೇಷಿಸಿ, ಜಾತಿ ಮತ್ತು ಸಮುದಾಯದ ವಿಷಯಗಳನ್ನು, ಇತರೆ ನಟರನ್ನು ಎಳೆದು ತರುವುದು ಸರಿಯಲ್ಲ. ತಾವು ಊಟ ಮಾಡಿದ ವಿಚಾರವನ್ನೂ ಮಾತನಾಡುತ್ತಾರೆ ಎಂದರೆ ತಪ್ಪಲ್ಲವೇ ಎಂದು ಡಾಲಿ ಗರಂ ಆಗಿದ್ದಾರೆ.
Advertisement