

ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯ ಅಂಗವಾಗಿ ಕರ್ನಾಟಕದ ಒಟ್ಟು 5.54 ಕೋಟಿ ನೋಂದಾಯಿತ ಮತದಾರರಲ್ಲಿ ಶೇ.95.58 ಮಂದಿಗೆ ಗಣತಿ (Enumeration) ನಮೂನೆಗಳನ್ನು ವಿತರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 5,54,32,314 ನೋಂದಾಯಿತ ಮತದಾರರಲ್ಲಿ 5,29,82,909 ಮಂದಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈವರೆಗೆ ಮರಳಿದ ನಮೂನೆಗಳ ಪೈಕಿ ಸುಮಾರು ಶೇ.39.83ರಷ್ಟು ಅರ್ಜಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಈವರೆಗೆ 2,20,77,772 ಮತದಾರರ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಇದು ಒಟ್ಟು ಮತದಾರರ ಶೇ.39.83ಕ್ಕೆ ಸಮನಾಗಿದೆ. ಇದಲ್ಲದೆ, 4,26,233 ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.
13 ಜಿಲ್ಲೆಗಳಲ್ಲಿ ಶೇ.100ರಷ್ಟು ನಮೂನೆ ವಿತರಣೆ
ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ಉತ್ತರ ಕನ್ನಡ, ವಿಜಯನಗರ, ಯಾದಗಿರಿ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಗಣತಿ ನಮೂನೆ ವಿತರಣೆಯು ಶೇ.100ರಷ್ಟು ಪೂರ್ಣಗೊಂಡಿದೆ ಎಂದು ಅನ್ಬುಕುಮಾರ್ ತಿಳಿಸಿದರು. ಅಲ್ಲದೆ ಇನ್ನೂ ಸುಮಾರು 11 ಜಿಲ್ಲೆಗಳು ಶೇ.99ರ ಗಡಿ ದಾಟಿದ್ದು, ಒಂದು ಅಥವಾ ಎರಡು ದಿನಗಳಲ್ಲಿ ವಿತರಣಾ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
ಡಿಜಿಟಲೀಕರಣದಲ್ಲಿ ಚಿಕ್ಕಬಳ್ಳಾಪುರ ಮುನ್ನಡೆ
ಅರ್ಜಿಗಳ ಡಿಜಿಟಲೀಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶೇ.64ರೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹಾವೇರಿ (ಶೇ.62), ದಾವಣಗೆರೆ (ಶೇ.59), ಕೊಪ್ಪಳ (ಶೇ.58), ಹಾಸನ (ಶೇ.57) ಹಾಗೂ ಚಿತ್ರದುರ್ಗ (ಶೇ.56) ಜಿಲ್ಲೆಗಳಿವೆ. ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಯಕೊಂಡ ಕ್ಷೇತ್ರದಲ್ಲಿ ಶೇ.83.36ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು. ಅಂತೆಯೇ ಕಣಗಲ್ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ತಲಾ ಶೇ.76 ಹಾಗೂ ಹರಿಹರದಲ್ಲಿ ಶೇ.72ರಷ್ಟು ಡಿಜಿಟಲೀಕರಣ ಎಂದು ಹೇಳಿದರು.
ಬೆಂಗಳೂರಿನಲ್ಲಿ ವಿತರಣೆ ವೇಗ ಹೆಚ್ಚಳ
ಬೆಂಗಳೂರು ಕುರಿತು ಮಾಹಿತಿ ನೀಡಿದ ಅನ್ಬುಕುಮಾರ್, ಬೆಂಗಳೂರು ನಗರದ 1.03 ಕೋಟಿ ಮತದಾರರಲ್ಲಿ ಸುಮಾರು 82 ಲಕ್ಷ ಮಂದಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.75.8 ಹಾಗೂ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಶೇ.83.13ರಷ್ಟು ವಿತರಣೆ ಪೂರ್ಣಗೊಂಡಿದೆ. ಇತರೆ ಜಿಲ್ಲೆಗಳೊಂದಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಡಿಜಿಟಲೀಕರಣ ಪ್ರಗತಿ ನಿಧಾನವಾಗಿತ್ತು. ಆದರೆ ಈಗ ವೇಗ ಹೆಚ್ಚಾಗಿದ್ದು, ಶೀಘ್ರದಲ್ಲೇ ಇತರ ಜಿಲ್ಲೆಗಳ ಮಟ್ಟ ತಲುಪುವ ವಿಶ್ವಾಸವಿದೆ ಎಂದು ಹೇಳಿದರು.
13.96 ಲಕ್ಷ ಮತದಾರರು ASDO ಪಟ್ಟಿಯಲ್ಲಿ
ರಾಜಕೀಯ ಪಕ್ಷಗಳು ಈವರೆಗೆ 1,31,626 ಬೂತ್ ಲೆವೆಲ್ ಏಜೆಂಟ್‌ಗಳನ್ನು (BLA) ನೇಮಕ ಮಾಡಿವೆ. ಪರಿಶೀಲನೆಗಾಗಿ ASDO (Absent, Shifted, Duplicate, Dead and Others) ಪಟ್ಟಿಯನ್ನು ಅವರಿಗೆ ಹಂಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ASDO ಪಟ್ಟಿಯಲ್ಲಿ 13,96,012 ಹೆಸರುಗಳಿದ್ದು ಅವುಗಳಲ್ಲಿ
1,42,004 ಮಂದಿ ಗೈರುಹಾಜರಿರುವ ಅಥವಾ ಪತ್ತೆಯಾಗದ ಮತದಾರರು
8,02,741 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು
3,71,991 ಮಂದಿ ಮೃತರು
70,136 ಮಂದಿ ಈಗಾಗಲೇ ಬೇರೆಡೆ ಮತದಾರರಾಗಿ ನೋಂದಾಯಿತರಾಗಿರುವವರು
4,140 ಮಂದಿ 'ಇತರೆ' ವಿಭಾಗದಲ್ಲಿದ್ದಾರೆ
ಈ ಪಟ್ಟಿಯನ್ನು ರಾಜಕೀಯ ಪಕ್ಷಗಳು ಹಾಗೂ ಬಿಎಲ್‌ಎಗಳು ಪರಿಶೀಲಿಸಿ ಯಾವುದೇ ಅರ್ಹ ಮತದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಹಿರಿಯ ಅಧಿಕಾರಿಗಳಿಂದ ಜಿಲ್ಲೆಗಳ ಪರಿಶೀಲನೆ
ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರು ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡಿ ಎಸ್‌ಐಆರ್ ಪ್ರಕ್ರಿಯೆ ಪರಿಶೀಲಿಸಿದ್ದಾರೆ ಎಂದು ಅನ್ಬುಕುಮಾರ್ ತಿಳಿಸಿದರು.
ತಾವು ಬೀದರ್, ಯಾದಗಿರಿ, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ಹೇಳಿದರು. ಜಂಟಿ ಮುಖ್ಯ ಚುನಾವಣಾಧಿಕಾರಿಗಳನ್ನೂ ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗಿದ್ದು, ಮತದಾರರ ಭಾವಚಿತ್ರ ಹಾಗೂ ಸಹಿಗಳು ಸೇರಿದಂತೆ ದಾಖಲೆಗಳ ಗುಣಮಟ್ಟದ ಡಿಜಿಟಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದರು.
ಪ್ರತಿ ಎರಡು ಗಂಟೆಗೊಮ್ಮೆ ಮಾಹಿತಿ
ಗುರುತಿಸಲ್ಪಟ್ಟ ರಾಜಕೀಯ ಪಕ್ಷಗಳಿಗೆ ವಾಟ್ಸ್ಆ್ಯಪ್ ಗುಂಪುಗಳ ಮೂಲಕ ಪ್ರತಿ ಎರಡು ಗಂಟೆಗೊಮ್ಮೆ ಪ್ರಗತಿ ಮಾಹಿತಿ ಹಂಚಲಾಗುತ್ತಿದೆ. ಅಲ್ಲದೆ, ಪ್ರತಿದಿನ ಇ-ಮೇಲ್ ಮೂಲಕ ವರದಿ ಕಳುಹಿಸಲಾಗುತ್ತಿದ್ದು, ಮಾಧ್ಯಮಗಳಿಗೂ ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಮತದಾರರಿಗೆ ಮನವಿ
ಇನ್ನೂ ಗಣತಿ ನಮೂನೆ ಪಡೆಯದ ಮತದಾರರಿಗೆ ಮುಂದಿನ ಎರಡು-ಮೂರು ದಿನಗಳಲ್ಲಿ ನಮೂನೆಗಳು ತಲುಪಲಿವೆ ಎಂದು ಅನ್ಬುಕುಮಾರ್ ಹೇಳಿದರು. ನಮೂನೆಗಳನ್ನು ಪಡೆದಿರುವ ಮತದಾರರು ಅವುಗಳನ್ನು ಸರಿಯಾಗಿ ಭರ್ತಿ ಮಾಡಿ, ಸಹಿ ಹಾಕಿ ಸಂಬಂಧಿಸಿದ ಬೂತ್ ಲೆವೆಲ್ ಅಧಿಕಾರಿ (BLO) ಅವರಿಗೆ ಸಲ್ಲಿಸುವಂತೆ ಮನವಿ ಮಾಡಿದರು. ಅಧಿಕಾರಿಗಳು ಪೂರ್ಣಗೊಂಡ ಎಲ್ಲಾ ನಮೂನೆಗಳನ್ನು ತ್ವರಿತವಾಗಿ ಡಿಜಿಟಲೀಕರಣ ಮಾಡಿ ಅಪ್‌ಲೋಡ್ ಮಾಡುವಂತೆ ಸಹ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.