ಶಾಲೆಯಲ್ಲೇ ಕುಸಿದು ಬಿದ್ದು 12 ವರ್ಷದ ವಿದ್ಯಾರ್ಥಿ ಸಾವು: 45 ನಿಮಿಷ ಚಿಕಿತ್ಸೆ ವಿಳಂಬ ಆರೋಪ, CCTV ವಿಡಿಯೊ ವೈರಲ್

ಅರ್ಹಾನ್ ತರಗತಿ ನಡೆಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದ. ಆದರೆ ಶಾಲಾ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಸುಮಾರು 45 ನಿಮಿಷಗಳ ಕಾಲ ವಿಳಂಬ ಮಾಡಿದ್ದಾರೆ ಎನ್ನಲಾಗಿದೆ.
student died after collapsing inside his classroom at a private school
ಶಾಲೆಯಲ್ಲೇ ವಿದ್ಯಾರ್ಥಿ ಸಾವು
Updated on

ಬೆಂಗಳೂರು: ಖಾಸಗಿ ಶಾಲೆಯೊಂದರಲ್ಲಿ 12 ವರ್ಷದ ವಿದ್ಯಾರ್ಥಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದ್ದು, ಶಾಲೆ ವಿರುದ್ಧ ಪೋಷಕರು ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನಿ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ ಈ ದುರ್ಘಟನೆ ಸಂಭವವಿಸಿದ್ದು, 5ನೇ ತರಗತಿಯಲ್ಲಿ ಓದುತ್ತಿದ್ದ ಅರ್ಹಾನ್ ಪಾಷಾ ಎಂಬ 12 ವರ್ಷದ ವಿದ್ಯಾರ್ಥಿ ಶಾಲಾ ಕೊಠಡಿಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಘಟನೆಯ ವಿಡಿಯೋ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶಾಲಾ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಜೂನ್ 10ರಂದೇ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಆಡಳಿತದ ನಿರ್ಲಕ್ಷ್ಯದಿಂದಲೇ ಮಗನ ಜೀವ ಹೋಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

student died after collapsing inside his classroom at a private school
ರಾಯಚೂರಲ್ಲಿ ದಾರುಣ ಘಟನೆ: ಆರೇಳು ಬೀದಿ ನಾಯಿಗಳು ಏಕಕಾಲಕ್ಕೆ ದಾಳಿ; ಒಂದೂವರೆ ವರ್ಷದ ಕಂದಮ್ಮ ಬಲಿ!

45 ನಿಮಿಷ ಚಿಕಿತ್ಸೆ ವಿಳಂಬ

ಕುಟುಂಬಸ್ಥರು ಆರೋಪಿಸಿರುವಂತೆ ಅರ್ಹಾನ್ ತರಗತಿ ನಡೆಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದ. ಆದರೆ ಶಾಲಾ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಸುಮಾರು 45 ನಿಮಿಷಗಳ ಕಾಲ ವಿಳಂಬ ಮಾಡಿದ್ದಾರೆ ಎನ್ನಲಾಗಿದೆ. ತುರ್ತು ಚಿಕಿತ್ಸೆ ನೀಡುವ ಬದಲು ವಿದ್ಯಾರ್ಥಿಯನ್ನು ವಿವಿಧ ಕೊಠಡಿಗಳಿಗೆ ಸ್ಥಳಾಂತರಿಸುತ್ತಾ ಕಾಲಹರಣ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.

ಶಾಲಾ ವಾಹನವಿದ್ದರೂ ಬಳಸಲಿಲ್ಲ?

ಇನ್ನು, ಶಾಲೆಯ ಆವರಣದಲ್ಲೇ ವಾಹನಗಳು ಇದ್ದರೂ ಅವುಗಳನ್ನು ಬಳಸದೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಕುಟುಂಬಸ್ಥರೇ ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದೂ ಕುಟುಂಬಸ್ಥರು ದೂರಿದ್ದಾರೆ.

ಪೋಷಕರು ಬೈಕ್‌ನಲ್ಲಿ ಮಗನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ತಲುಪಿದಾಗ ವೈದ್ಯರು ಅರ್ಹಾನ್ ಪಾಷಾನನ್ನು ಪರೀಕ್ಷಿಸಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಘಟನೆ ಮೊದಲು ಬೆಳಕಿಗೆ ಬರದಂತೆ ಶಾಲಾ ಸಿಬ್ಬಂದಿ ಸುಮ್ಮನಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ‘ಮಗು ಸಹಜವಾಗಿ ಮೃತಪಟ್ಟಿದೆ’ ಎಂದು ಹೇಳಿ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆಯ ನಿಜ ಸ್ವರೂಪ ತಿಳಿದುಬಂದಿದೆ ಎಂದು ಆರೋಪಿಸಲಾಗಿದೆ.

ಶಿಕ್ಷಕಿ ಹೇಳಿದ್ದೇನು?

ಪೋಷಕರ ಈ ಆರೋಪಕ್ಕೆ ತರಗತಿ ಶಿಕ್ಷಕಿ ರಂಜು ಪ್ರತಿಕ್ರಿಯೆ ನೀಡಿದ್ದು, ಅಂದು ಎಂದಿನಂತೆ ಅರ್ಹನ್ ತರಗತಿಗೆ ಹಾಜರಾಗಿದ್ದ. ಯೋಗ ಬಳಿಕ ಮಧ್ಯಾಹ್ನ ಆಹಾರ ಸೇವಿಸಿದ್ದ. ಲಂಚ್ ಬಳಿಕ ವಾಶ್ ರೂಮ್‌ ಗೆ ಕೇಳಿ ಹೋಗಿದ್ದ. ಎರಡು ದಿನ ಶಾಲೆಗೆ ಗೈರು ಆಗಿದ್ದರಿಂದ, ಸ್ನೇಹಿತರ ಬಳಿ ಬರೆದುಕೊಳ್ಳುತ್ತಿದ್ದ. ಕೆಲ ಹೊತ್ತಿನಲ್ಲಿಯೇ ಅರ್ಹನ್ ಕುಸಿದು ಬಿದ್ದ.

ಕೂಡಲೇ ವಿದ್ಯಾರ್ಥಿಗಳ ನೆರವಿನಿಂದ ಪ್ರಥಮ ಚಿಕಿತ್ಸೆ ನೀಡಿದೆವು. ಪೋಷಕರಿಗೆ ಮಾಹಿತಿ ನೀಡಿದಾಗ ಲೋ ಬಿಪಿ ಆಗಿರಬಹುದು. ಸಿಹಿ ಮತ್ತು ಉಪ್ಪು ಮಿಶ್ರಣದ ನೀರು ಕುಡಿಸಿ ಎಂದರು. ಲಂಚ್ ಸಮಯ ಆಗಿದ್ದರಿಂದ ಡ್ರೈವರ್ ಊಟಕ್ಕೆ ತೆರಳಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಎನ್ನುವಷ್ಟರಲ್ಲಿ ಪೋಷಕರು ಬಂದ್ರು, ತಮ್ಮದೇ ಬೈಕ್ ನಲ್ಲಿ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ನಾವುಗಳು ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ, ವಿದ್ಯಾರ್ಥಿ ಅಸ್ವಸ್ಥನಾಗುತ್ತಿದ್ದಂತೆ ಸ್ಪಂದಿಸಿದ್ದೇವೆ ಎಂದು ಹೇಳಿದ್ದಾರೆ.

ಪೊಲೀಸ್ ದೂರು ದಾಖಲು

ಇದೀಗ ಪ್ರಕರಣ ಸಂಬಂಧ ಕೋಣನಕುಂಟೆ ಪೊಲೀಸರು ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಿಸಿಕೊಂಡಿದ್ದು, ಶಾಲೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಕುಟುಂಬ ಮಾಡಿರುವ ನಿರ್ಲಕ್ಷ್ಯದ ಆರೋಪಗಳ ಬಗ್ಗೆಯೂ ತನಿಖೆ ಮುಂದುವರಿದಿದೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವುಗಳ ಸತ್ಯಾಸತ್ಯತೆ ಹಾಗೂ ಘಟನೆ ನಡೆದ ಸಂದರ್ಭಗಳ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com