

ಬೆಂಗಳೂರು: ಕರ್ನಾಟಕ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ಸ್ವೀಕರಿಸುತ್ತಿರುವ ಬೆನ್ನಲ್ಲೇ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಂಗಳೂರು ಶಾಸಕ ಯುಟಿ ಖಾದರ್ ಬುಧವಾರ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನೂತನ ಡಿ.ಕೆ. ಶಿವಕುಮಾರ್ ಸರ್ಕಾರದ ಭಾಗವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಸ್ಪೀಕರ್ ಹುದ್ದೆಗೆ ಯು.ಟಿ. ಖಾದರ್ ರಾಜೀನಾಮೆ ನೀಡಿದ್ದು, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಲೋಕಭವನದಲ್ಲೇ ಡೆಪ್ಯುಟಿ ಸ್ಪೀಕರ್ಗೆ ಖಾದರ್ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬರುವಂತೆ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಕರೆ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ ಎನ್ನಲಾಗಿದೆ.
ಸಚಿವ ಸ್ಥಾನದ ವಿಚಾರವಾಗಿ ಪ್ರತಿಕ್ರಿಯಿಸಿರುವ ಯು.ಟಿ. ಖಾದರ್, 'ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ. ಆದರೆ ಆರೋಗ್ಯ ಖಾತೆ ಅಥವಾ ವಸತಿ ಖಾತೆ ಸಿಕ್ಕರೆ ಒಳಿತೆಂಬ ಬಯಕೆ ಇದೆ. ನಾಯಕರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ತಾನು ಸಿದ್ಧ. ಯಾವ ಬಾಲ್ ಬಂದರೂ ಬ್ಯಾಟಿಂಗ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರಿಗೆ ಧನ್ಯವಾದ
ಸ್ಪೀಕರ್ ಆಗಿ ಮೂರು ವರ್ಷಗಳ ಅವಧಿಯಲ್ಲಿ ಸಹಕಾರ ನೀಡಿದ್ದಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ಗೆ ಯು.ಟಿ. ಖಾದರ್ ಧನ್ಯವಾದ ತಿಳಿಸಿದ್ದಾರೆ. ಲೋಕಭವನಕ್ಕೆ ತೆರಳಿ ಗವರ್ನರ್ ಭೇಟಿಯಾಗಿರುವ ಅವರು, ರಾಜ್ಯಪಾಲರಿಗೆ ರಾಜೀನಾಮೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಹಿಂದೆ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಖಾದರ್ಗೆ ಡಿಕೆಶಿ ಸರ್ಕಾರದಲ್ಲೂ ಅದೇ ಖಾತೆ ಸಿಗಬಹುದೆಂಬ ನಿರೀಕ್ಷೆ ಇದೆ.
ಇನ್ನು ಯು.ಟಿ. ಖಾದರ್ ಸಚಿವರಾಗುವುದು ಖಚಿತವಾಗಿರುವ ಹಿನ್ನೆಲೆ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆದಿದೆ. ಬೆಂಗಳೂರಿನ ಗಾಲ್ಫ್ ಗ್ರೌಂಡ್ ಬಳಿ ಇರುವ ಖಾದರ್ ನಿವಾಸಕ್ಕೆ ಆಗಮಿಸಿ ಹಲವರು ಶುಭ ಕೋರುತ್ತಿದ್ದಾರೆ.
Advertisement