ಸಿಎಂ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಕಾಯುತ್ತೇನೆ: Ramalinga Reddy

ರಾಮಲಿಂಗಾ ರೆಡ್ಡಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಈ ರಾಜಿನಾಮೆಯನ್ನು ಸಿಎಂ ಡಿಕೆ ಶಿವಕುಮಾರ್ ಇನ್ನೂ ಅಂಗೀಕರಿಸಿಲ್ಲ. ಈ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕಾಗಿ ಕಾಯುತ್ತೇನೆ ಎಂದಿದ್ದಾರೆ.
Ramalinga Reddy
ರಾಮಲಿಂಗಾ ರೆಡ್ಡಿ
Updated on

ಬೆಂಗಳೂರು: ತಮ್ಮ ರಾಜೀನಾಮೆ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ನಡೆಯಲಿರುವ ಚರ್ಚೆಯ ಫಲಿತಾಂಶಕ್ಕಾಗಿ ಕಾಯುವುದಾಗಿ ಕರ್ನಾಟಕ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ತಿಳಿಸಿದ್ದಾರೆ.

ಖಾತೆ ಹಂಚಿಕೆ ವಿಚಾರವಾಗಿ ಬಹಿರಂಗವಾಗಿಯೇ ಬಂಡಾಯವೆದ್ದಿದ್ದ ರಾಮಲಿಂಗಾ ರೆಡ್ಡಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಈ ರಾಜಿನಾಮೆಯನ್ನು ಸಿಎಂ ಡಿಕೆ ಶಿವಕುಮಾರ್ ಇನ್ನೂ ಅಂಗೀಕರಿಸಿಲ್ಲ. ಈ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕಾಗಿ ಕಾಯುತ್ತೇನೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಅಭಿವೃದ್ಧಿ ಖಾತೆ (ಬೆಂಗಳೂರು ಡೆವಲಪ್‌ಮೆಂಟ್) ಬದಲಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ ಖಾತೆ ನೀಡಿದ್ದನ್ನು ವಿರೋಧಿಸಿ ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ, ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಿರಿಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

Ramalinga Reddy
ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ; ಪಕ್ಷ ಬಿಟ್ಟು ಹೋಗುವೆ ಎಂದು ರಾಮಲಿಂಗಾರೆಡ್ಡಿ ಎಲ್ಲಾದರೂ ಹೇಳಿದ್ದಾರೆಯೇ?

ರಾಮಲಿಂಗಾರೆಡ್ಡಿ ಹೇಳಿದ್ದೇನು?

ತಾವು ಯಾವುದೇ ನಿರ್ದಿಷ್ಟ ಖಾತೆಯನ್ನು ಕೇಳಿಕೊಂಡಿರಲಿಲ್ಲ. ಆದರೆ, ಪಕ್ಷದ ನಾಯಕತ್ವ ನೀಡಿದ್ದ ಭರವಸೆ ಈಡೇರದ ಕಾರಣ ಬೇಸರಗೊಂಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಸುರ್ಜೇವಾಲಾ ಅವರು ನನ್ನ ರಾಜೀನಾಮೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಪಕ್ಷದ ನಾಯಕತ್ವವೂ ನನ್ನ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ತಿಳಿಸಿದೆ. ಶುಕ್ರವಾರ ಮುಖ್ಯಮಂತ್ರಿ ಶಿವಕುಮಾರ್ ಅವರೊಂದಿಗೆ ಹೋಟೆಲ್‌ನಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿರುವುದಾಗಿ ಅವರು ಹೇಳಿದರು.

ನಿನ್ನೆ ಶಿವಕುಮಾರ್ ಅವರು ನನ್ನ ಮನೆಗೆ ಬರುತ್ತೇನೆ ಎಂದಿದ್ದರು. ಆದರೆ ನಾನು ಮನೆಯಲ್ಲಿರಲಿಲ್ಲ. ನಂತರ ನಾವು ಹೋಟೆಲ್‌ನಲ್ಲಿ ಭೇಟಿಯಾಗಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು. ಇಂದು ಕೂಡ ನಿನ್ನೆ ಚರ್ಚಿಸಿದ ವಿಷಯಗಳ ಬಗ್ಗೆ ಸುರ್ಜೇವಾಲಾ ಅವರೊಂದಿಗೆ ಮಾತನಾಡಿದ್ದೇನೆ. ಈಗ ಮುಖ್ಯಮಂತ್ರಿ ಹಾಗೂ ಸುರ್ಜೇವಾಲಾ ಭೇಟಿಯಾಗಲಿದ್ದಾರೆ. ನಿನ್ನೆ ನಾವು ಚರ್ಚಿಸಿದ ಎಲ್ಲ ವಿಷಯಗಳ ಬಗ್ಗೆ ಅವರು ಮಾತುಕತೆ ನಡೆಸಲಿದ್ದಾರೆ. ಅದರ ನಂತರ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ," ಎಂದು ಅವರು ಹೇಳಿದರು.

ಹೆಚ್ಚುವರಿ ಖಾತೆ ನೀಡಿಕೆ ಬಗ್ಗೆ ನನಗೆ ಗೊತ್ತಿಲ್ಲ

ನೀರಾವರಿ ಖಾತೆಯ ಜೊತೆಗೆ ಹೆಚ್ಚುವರಿ ಖಾತೆ ನೀಡುವ ಸಾಧ್ಯತೆ ಇದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. "ಆ ವಿಷಯದ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ," ಎಂದು ಪುನಃ ಪುನಃ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಅಂತೆಯೇ ತಮಗೆ ಯಾವುದೇ ಪರ್ಯಾಯ ಪ್ರಸ್ತಾವನೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಅಭಿಪ್ರಾಯವನ್ನು ಈಗಾಗಲೇ ಪಕ್ಷದ ನಾಯಕತ್ವಕ್ಕೆ ತಿಳಿಸಿರುವುದಾಗಿ ಹೇಳಿದರು. 'ನಿನ್ನೆ ನಡೆದ ಮಾತುಕತೆಯಲ್ಲಿ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ನಾನು ಯಾವುದೇ ಹುದ್ದೆ ಅಥವಾ ಖಾತೆಗಾಗಿ ಕೇಳಿಕೊಂಡಿಲ್ಲ. ಅವರೇ ನನಗೆ ಆಫರ್ ಮಾಡಿದ್ದರು. ನಂತರ ಅನಿವಾರ್ಯ ಕಾರಣಗಳಿಂದ ಪರಿಸ್ಥಿತಿ ಬದಲಾಯಿತು," ಎಂದು ಹೇಳಿದರು.

Ramalinga Reddy
ಖಾತೆ ಹಂಚಿಕೆ ಕಿಚ್ಚು: ರಾಮಲಿಂಗಾ ರೆಡ್ಡಿ ಬೆನ್ನಲ್ಲೇ ಮುನಿಯಪ್ಪ ಅಸಮಾಧಾನ; ಹೈಕಮಾಂಡ್ ಮನವೊಲಿಕೆ ಬಳಿಕ 'I am happy' ಎಂದ ಸಚಿವ

ಮಂತ್ರಿಗಿರಿ ಎಂದಿಗೂ ಆಸೆ ಪಟ್ಟವನಲ್ಲ

ತಾವು ಎಂದಿಗೂ ಸಚಿವ ಸ್ಥಾನ ಅಥವಾ ನಿರ್ದಿಷ್ಟ ಖಾತೆಗಾಗಿ ಲಾಬಿ ನಡೆಸಿಲ್ಲ ಎಂದು ಪುನರುಚ್ಚರಿಸಿದ ಅವರು, "ಈಗ ಮಾತ್ರವಲ್ಲ, 1993ರಲ್ಲಿ ಮೊದಲ ಬಾರಿಗೆ ಸಚಿವನಾದಾಗಲೂ ನಾನು ಯಾವುದೇ ಮುಖ್ಯಮಂತ್ರಿಯನ್ನು ಸಂಪರ್ಕಿಸಿ ಖಾತೆ ಕೇಳಿಕೊಂಡಿರಲಿಲ್ಲ," ಎಂದರು.

ಮುಖ್ಯಮಂತ್ರಿ ಹಾಗೂ ಸುರ್ಜೇವಾಲಾ ನಡುವಿನ ಮಾತುಕತೆಯಿಂದ ಸಕಾರಾತ್ಮಕ ಫಲಿತಾಂಶ ನಿರೀಕ್ಷಿಸುತ್ತೀರಾ ಎಂಬ ಪ್ರಶ್ನೆಗೆ, "ಗೊತ್ತಿಲ್ಲ. ನಂತರ ಕರೆ ಮಾಡಿ ವಿಚಾರಿಸುತ್ತೇನೆ," ಎಂದು ಉತ್ತರಿಸಿದರು.

ಇಬ್ಬರೂ ನಾಯಕರು ತಮ್ಮ ರಾಜೀನಾಮೆಯನ್ನು ಮುಂದುವರಿಸದಂತೆ ಮನವಿ ಮಾಡಿದ್ದಾರೆ. ಇಬ್ಬರೂ ನನ್ನ ರಾಜೀನಾಮೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನನ್ನ ಅಭಿಪ್ರಾಯವನ್ನು ಅವರಿಗೆ ತಿಳಿಸಿ ನಾನು ಹಿಂದಿರುಗಿದ್ದೇನೆ ಎಂದರು.

ತಾವು ಇನ್ನೂ ರಾಜೀನಾಮೆ ನಿರ್ಧಾರದಲ್ಲಿ ದೃಢವಾಗಿದ್ದೀರಾ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ, ಹಿರಿಯ ನಾಯಕರ ನಡುವಿನ ಚರ್ಚೆಗಳತ್ತ ಗಮನ ಸೆಳೆದರು.

"ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಈಗಾಗಲೇ ಭೇಟಿಯಾಗಿದ್ದಾರೆ. ನಿನ್ನೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ ವಿಷಯಗಳನ್ನೆಲ್ಲ ಅವರಿಗೆ ತಿಳಿಸಲಾಗುತ್ತದೆ. ನಂತರ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಈ ಬೆಳವಣಿಗೆಗಳಿಂದ ತಾಳ್ಮೆ ಕಳೆದುಕೊಂಡಿದ್ದೀರಾ ಎಂಬ ಪ್ರಶ್ನೆಗೆ, "ಈಗಲೂ ನಾನು ತಾಳ್ಮೆ ಕಳೆದುಕೊಂಡಿಲ್ಲ. ತಾಳ್ಮೆ ಕಳೆದುಕೊಂಡಿದ್ದರೆ ನಿಮ್ಮೊಂದಿಗೆ ಇಷ್ಟು ಶಾಂತವಾಗಿ ಮಾತನಾಡುತ್ತಿದ್ದೇನಾ?. ಸಮಸ್ಯೆಯನ್ನು ಪರಿಹರಿಸುವಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

"ಹೌದು.. ಅವರು ಮತ್ತೊಮ್ಮೆ ಸಭೆ ನಡೆಸಿದ ಬಳಿಕ ನಿಮಗೆ ತಿಳಿಸುತ್ತೇನೆ. ಮೊದಲು ಸುರ್ಜೇವಾಲಾ ಹಾಗೂ ಮುಖ್ಯಮಂತ್ರಿಯವರ ಚರ್ಚೆ ಮುಗಿಯಲಿ," ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ವಿವಾದವು ಕೇವಲ ಮೂರು ದಿನಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಮೊದಲ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಅವರನ್ನು ಸಚಿವ ಸಂಪುಟದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀವ್ರ ಪ್ರಯತ್ನ ನಡೆಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com