ಕೃಷ್ಣ, ಕಾವೇರಿ, ಅನುಗ್ರಹ ಬೇಡ; ಕುಮಾರಕೃಪಾದತ್ತ ಡಿಕೆಶಿ ಒಲವು, ಮುಖ್ಯಮಂತ್ರಿ ಅಧಿಕೃತ ನಿವಾಸವಾಗಲಿದೆಯೇ 160 ವರ್ಷದ ಐತಿಹಾಸಿಕ ಬಂಗಲೆ..?

ಡಿಕೆ.ಶಿವಕುಮಾರ್ ಅವರು ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳಾಗಿ ಬಳಸಲಾಗುತ್ತಿರುವ ಕೃಷ್ಣ, ಕಾವೇರಿ ಅಥವಾ ಅನುಗ್ರಹ ನಿವಾಸಗಳ ಬದಲು ಐತಿಹಾಸಿಕ ಕುಮಾರಕೃಪಾ ಬಂಗಲೆಯನ್ನು ತಮ್ಮ ಅಧಿಕೃತ ನಿವಾಸ ಹಾಗೂ ಕಾರ್ಯಾಲಯವಾಗಿ ಬಳಸಲು ಆಸಕ್ತಿ ತೋರಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಇತಿಹಾಸ, ಪರಂಪರೆ ಮತ್ತು ರಾಜಕೀಯ ಮಹತ್ವವನ್ನು ಒಂದೇ ಜಾಗದಲ್ಲಿ ಹೊಂದಿರುವ ಕುಮಾರಕೃಪಾ ಬಂಗಲೆ ಇದೀಗ ಮತ್ತೆ ಸುದ್ದಿಯಲ್ಲಿದೆ. ಬೆಂಗಳೂರಿನ ಅತ್ಯಂತ ಹಳೆಯ ಕಟ್ಟಡಗಳಲ್ಲಿ ಒಂದಾಗಿರುವ ಸುಮಾರು 160 ವರ್ಷಗಳ ಇತಿಹಾಸ ಹೊಂದಿರುವ ಈ ಐತಿಹಾಸಿಕ ಬಂಗಲೆಯನ್ನು ಮುಖ್ಯಮಂತ್ರಿ ಅಧಿಕೃತ ನಿವಾಸವನ್ನಾಗಿ ರೂಪಿಸುವ ಸಿದ್ಧತೆಗಳು ನಡೆಯುತ್ತಿದ್ದು, ಡಿಕೆ ಶಿವಕುಮಾರ್ ಅವರ ಒಲವು ಕೂಡ ಇದರತ್ತ ಇದೆ ಎನ್ನಲಾಗಿದೆ.

ಡಿಕೆ.ಶಿವಕುಮಾರ್ ಅವರು ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳಾಗಿ ಬಳಸಲಾಗುತ್ತಿರುವ ಕೃಷ್ಣ, ಕಾವೇರಿ ಅಥವಾ ಅನುಗ್ರಹ ನಿವಾಸಗಳ ಬದಲು ಐತಿಹಾಸಿಕ ಕುಮಾರಕೃಪಾ ಬಂಗಲೆಯನ್ನು ತಮ್ಮ ಅಧಿಕೃತ ನಿವಾಸ ಹಾಗೂ ಕಾರ್ಯಾಲಯವಾಗಿ ಬಳಸಲು ಆಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಅತ್ಯಂತ ಹಳೆಯ ಕಟ್ಟಡಗಳಲ್ಲಿ ಒಂದಾದ 160 ವರ್ಷ ಹಳೆಯದಾದ ಪಾರಂಪರಿಕ ರಚನೆಯು ಪ್ರಸ್ತುತ ನವೀಕರಣ ಹಂತದಲ್ಲಿದ್ದು, ಎರಡು ತಿಂಗಳೊಳಗೆ ಸಿದ್ಧವಾಗುವ ನಿರೀಕ್ಷೆಯಿದೆ.

ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿಗಳ ನಿವಾಸಗಳಿಂದ ಸ್ವಲ್ಪ ದೂರದಲ್ಲಿರುವ ಈ ಬಂಗಲೆ ಇಲ್ಲಿಯವರೆಗೆ ಸರ್ಕಾರಿ ಅತಿಥಿ ಗೃಹವಾಗಿ ಕಾರ್ಯನಿರ್ವಹಿಸುತ್ತಿದೆ.

ವಿಶಾಲವಾದ ಈ ಬಂಗಲೆಯಲ್ಲಿ 12 ಕೊಠಡಿಗಳು, ದೊಡ್ಡ ಸಭಾಂಗಣಗಳು, ಅಡುಗೆಮನೆ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಹಳೆಯ ತೇಗದ ಮರದ ಬಾಗಿಲುಗಳು, ಕಿಟಕಿಗಳು, ಕಲ್ಲಿನ ರಚನೆ ಈ ಕಟ್ಟಡದ ವಿಶಿಷ್ಟ ಆಕರ್ಷಣೆಯಾಗಿದೆ.

ಪೂರ್ವಾಭಿಮುಖವಾಗಿರುವ ಈ ಬಂಗಲೆ ಡಿಕೆ ಶಿವಕುಮಾರ್ ಅವರ ವಾಸ್ತು ನಂಬಿಕೆಗಳಿಗೆ ಅನುಕೂಲಕರವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ವಿಧಾನಸೌಧದಲ್ಲಿನ ಅವರ ಆಸನ ವ್ಯವಸ್ಥೆಯನ್ನೂ ವಾಸ್ತು ಸಲಹೆಗಾರರ ಸೂಚನೆಯಂತೆ ಪೂರ್ವಾಭಿಮುಖವಾಗಿ ಬದಲಿಸಲಾಗಿತ್ತು. ಪ್ರಮಾಣ ವಚನ ಸ್ವೀಕರಿಸುವಾಗಲೂ ಅವರು ಪೂರ್ವ ದಿಕ್ಕಿಗೆ ಮುಖ ಮಾಡಿದ್ದರು, ಇದನ್ನು ಶುಭವೆಂದು ಪರಿಗಣಿಸಲಾಗಿದೆ.

File photo
ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ: ಗದಗ ಅಭಿಮಾನಿಯಿಂದ ಗ್ರಾಮಸ್ಥರಿಗೆ ಭರ್ಜರಿ ಬಾಡೂಟ!

ಪ್ರಸ್ತುತ ಕುಮಾರಕೃಪಾ ಅತಿಥಿಗೃಹದ ಒಂದು ಕೊಠಡಿಯಲ್ಲಿ ಉಪಸಭಾಪತಿ ರುದ್ರಪ್ಪ ಲಮಾಣಿ ವಾಸವಿದ್ದು, ಅವರನ್ನು ಹೊಸ ಕುಮಾರಕೃಪಾ ಅತಿಥಿಗೃಹಕ್ಕೆ ಸ್ಥಳಾಂತರಿಸುವ ಯೋಜನೆ ಇದೆ.

ಕೋವಿಡ್ ಅವಧಿಯಲ್ಲಿನ ಹಗರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರುವ ಮೂರು ಕೊಠಡಿಗಳಲ್ಲಿನ ಕಡತಗಳನ್ನು ಆರೋಗ್ಯ ಸೌಧಕ್ಕೆ ವರ್ಗಾಯಿಸುವ ಪ್ರಕ್ರಿಯೆಯೂ ನಡೆಯಲಿದೆ ಎಂದು ತಿಳಿದುಬಂದಿದೆ.

ಇದೀಗ ಕಾವೇರಿ ನಿವಾಸದಲ್ಲಿ ವಾಸಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಕಾವೇರಿ ನಿವಾಸವನ್ನು ತಮ್ಮ ಪುತ್ರ ಹಾಗೂ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡುವಂತೆ ಅವರು ಮನವಿ ಮಾಡಬಹುದು ಎಂಬ ಮಾಹಿತಿಯೂ ಲಭ್ಯವಾಗಿದೆ.

ಕುಮಾರಕೃಪಾ ಬಂಗಲೆಗೆ ವಿಶೇಷ ಐತಿಹಾಸಿಕ ಹಿನ್ನೆಲೆಯೂ ಇದೆ. ಈ ಬಂಗಲೆಯು 1883 ಮತ್ತು 1901 ರ ನಡುವೆ ಮಹಾರಾಜ ಚಾಮರಾಜ ಒಡೆಯರ್ ಮತ್ತು ಕೃಷ್ಣರಾಜ ಒಡೆಯರ್ IV ರ ಅಡಿಯಲ್ಲಿ ಸೇವೆ ಸಲ್ಲಿಸಿದ ಮೈಸೂರಿನ ದಿವಾನರಾದ ಸರ್ ಕೆ ಶೇಷಾದ್ರಿ ಅಯ್ಯರ್ ಅವರ ಖಾಸಗಿ ನಿವಾಸವಾಗಿತ್ತು.

ಆ ಸಮಯದಲ್ಲಿ ಇದು ಬೆಂಗಳೂರಿನ ಹೊರವಲಯವಾಗಿತ್ತು ಮತ್ತು ಎತ್ತರದ ನೆಲದಲ್ಲಿತ್ತು. ಶೇಷಾದ್ರಿ ಅಯ್ಯರ್ ಆಧುನಿಕ ಬೆಂಗಳೂರಿಗೆ ಅಡಿಪಾಯ ಹಾಕಿದ ಪ್ರಗತಿಪರ ದಿವಾನರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ, ನಗರವು ಏಷ್ಯಾದಲ್ಲಿ ಮೊದಲ ಬಾರಿಗೆ ವಿದ್ಯುತ್ ಬೀದಿ ದೀಪಗಳನ್ನು ಪಡೆಯಿತು. ಅಲ್ಲದೆ, ಹೆಸರಘಟ್ಟದಿಂದ ನೀರನ್ನು ಪಂಪ್ ಮಾಡಲಾಗುತ್ತಿತ್ತು. ಶೇಷಾದ್ರಿಪುರಂ ಮತ್ತು ಶೇಷಾದ್ರಿ ರಸ್ತೆಗೆ ಅವರ ಹೆಸರಿಡಲಾಗಿದೆ" ಎಂದು ಇತಿಹಾಸಕಾರ ಸುರೇಶ್ ಮೂನಾ ಅವರು ತಿಳಿಸಿದ್ದಾರ.

ಶೇಷಾದ್ರಿ ಅಯ್ಯರ್ ಅವರು ಕುಮಾರಸ್ವಾಮಿ ದೇವರ ಭಕ್ತರಾಗಿದ್ದರಿಂದ ತಮ್ಮ ನಿವಾಸಕ್ಕೆ ‘ಕುಮಾರಕೃಪಾ’ ಎಂದು ಹೆಸರಿಟ್ಟಿದ್ದರು. ಅಲ್ಲದೆ, ಮಹಾತ್ಮ ಗಾಂಧಿ ಅವರು 1927ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ವೇಳೆ ಇದೇ ಬಂಗಲೆಯಲ್ಲಿ ತಂಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಕೂಡ ಒಂದು ಅವಧಿಯಲ್ಲಿ ಈ ಬಂಗಲೆಯನ್ನು ತಮ್ಮ ನಿವಾಸವನ್ನಾಗಿ ಬಳಸಿದ್ದರು.

ಆದರೆ, ಈ ಪರಂಪರೆಯ ಕಟ್ಟಡವನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಪರಿವರ್ತಿಸುವ ಯೋಚನೆಗೆ ಕೆಲ ವಲಯಗಳಿಂದ ವಿರೋಧ ವ್ಯಕ್ತವಾಗಿದೆ.

ಹೆಚ್ಚುವರಿ ಭದ್ರತಾ ವ್ಯವಸ್ಥೆಗಳು, ವಿಐಪಿ ಸಂಚಾರ ಹಾಗೂ ವಾಹನಗಳ ದಟ್ಟಣೆ ಹೆಚ್ಚುವುದರಿಂದ ಸುತ್ತಮುತ್ತಲಿನ ಹಸಿರು ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಭವಿಷ್ಯದಲ್ಲಿ ಪಾರ್ಕಿಂಗ್ ಮತ್ತು ಇತರ ಮೂಲಸೌಕರ್ಯಗಳ ಅಗತ್ಯ ಹೆಚ್ಚಾದರೆ ಅಲ್ಲಿನ ಮರಗಳಿಗೆ ಅಪಾಯ ಎದುರಾಗಬಹುದು ಎಂದು ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com