

ಬೆಂಗಳೂರು: ಕರ್ನಾಟಕ ಅಮೂಲಾಗ್ರ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದಾರೆ ಎಂದು ಖ್ಯಾತ ಉದ್ಯಮಿ, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕರ್ನಾಟಕದ ಅಭಿವೃದ್ಧಿಗೆ ಬದ್ಧರಾಗಿದ್ದು, ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿ ಹಾಗೂ ಕರ್ನಾಟಕವನ್ನು ದೇಶದ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವ ಅವರ ದೃಷ್ಟಿಕೋನಕ್ಕೆ ತಮ್ಮ ಬೆಂಬಲವಿದೆ ಎಂದರು.
ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಮುಖ್ಯಮಂತ್ರಿಯವರ ಹೊಸ ಉಪಕ್ರಮಗಳನ್ನು ಕಾನ್ಸುಲ್‌ಗಳ ಗುಂಪು ಬೆಂಬಲಿಸಿದೆ. ಮುಖ್ಯಮಂತ್ರಿಗಳು ಕೇವಲ ಬೆಂಗಳೂರಿನಷ್ಟೇ ಅಲ್ಲ, ಇಡೀ ಕರ್ನಾಟಕದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿಯೂ, ಕರ್ನಾಟಕವನ್ನು ದೇಶದ ಪ್ರಮುಖ ರಾಜ್ಯವನ್ನಾಗಿಯೂ ರೂಪಿಸಲು ಅವರು ಶ್ರಮಿಸುತ್ತಿದ್ದಾರೆ" ಎಂದು ಕಿರಣ್ ಮಜುಂದಾರ್-ಶಾ ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಶಿವಕುಮಾರ್ ಅವರ ಬದ್ಧತೆಯನ್ನು ಶ್ಲಾಘಿಸಿದ ಕಿರಣ್ ಮಜುಂದಾರ್-ಶಾ, 'ಪ್ರಸ್ತಾವಿತ ಸುರಂಗ ರಸ್ತೆ (ಟನಲ್ ರೋಡ್), ಎಲಿವೇಟೆಡ್ ಕಾರಿಡಾರ್‌ಗಳು, ಪೆರಿಫೆರಲ್ ರಿಂಗ್ ರೋಡ್ (PRR) ಹಾಗೂ ಔಟರ್ ರಿಂಗ್ ರೋಡ್ (ORR) ಅಭಿವೃದ್ಧಿ ಯೋಜನೆಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಈ ಯೋಜನೆಗಳಿಗೆ ವಿಶೇಷ ಬಜೆಟ್ ಮೀಸಲಿಡಲಾಗಿದೆ ಎಂದರು.
ಬೆಂಗಳೂರಿಗೆ ಉತ್ತಮ ಮೂಲಸೌಕರ್ಯಗಳ ಅಗತ್ಯವಿದೆ
"ಅವರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಈಗ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಬೆಂಗಳೂರಿಗೆ ಉತ್ತಮ ಮೂಲಸೌಕರ್ಯಗಳ ಅಗತ್ಯವಿದೆ. ಸುರಂಗ ರಸ್ತೆ, ಎಲಿವೇಟೆಡ್ ಹೆದ್ದಾರಿಗಳು ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಬೇಕಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ" ಎಂದು ಕಿರಣ್ ಮಜುಂದಾರ್ ಶಾ ಹೇಳಿದರು.
ಅವರು ನಗರದ ಕಸ ನಿರ್ವಹಣೆ ಹಾಗೂ ಘನ ತ್ಯಾಜ್ಯ ವಿಲೇವಾರಿ ಕ್ಷೇತ್ರಗಳಲ್ಲಿ ಡಿಕೆ ಶಿವಕುಮಾರ್ ಕೈಗೊಂಡಿರುವ ಕ್ರಮಗಳನ್ನೂ ಪ್ರಶಂಸಿಸಿದರು. ಜೊತೆಗೆ ನಾಗರಿಕರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
Advertisement