sextortion ಪ್ರಕರಣಗಳಲ್ಲಿ ತಕ್ಷಣ FIR ದಾಖಲಿಸಿ: ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ DG-IGP ಸಲೀಂ ಕಟ್ಟುನಿಟ್ಟಿನ ಸೂಚನೆ

ಫೋಟೋ ಅಥವಾ ವಿಡಿಯೊ ಚಿತ್ರೀಕರಣಕ್ಕೆ ವ್ಯಕ್ತಿಯು ಒಪ್ಪಿಗೆ ನೀಡಿರುವುದು, ಅದನ್ನು ಸಾರ್ವಜನಿಕವಾಗಿ ಪ್ರಕಟಿಸಲು ಅಥವಾ ಇತರರಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡಿದಂತೆ ಅಲ್ಲ. ಹೀಗಾಗಿ, ಸಂತ್ರಸ್ತರು ಮೊದಲೇ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ನೀಡಿ ಎಫ್‌ಐಆರ್ ದಾಖಲಿಸಲು ನಿರಾಕರಿಸುವಂತಿಲ್ಲ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಖಾಸಗಿ ಅಥವಾ ಆಪ್ತ ಕ್ಷಣಗಳ ಫೋಟೋ ಹಾಗೂ ವಿಡಿಯೊಗಳನ್ನು ಅನುಮತಿಯಿಲ್ಲದೆ ಹಂಚಿಕೆ ಮಾಡುವುದು, ‘ರಿವೆಂಜ್ ಪೋರ್ನ್’, ‘ಸೆಕ್ಸ್‌ಟಾರ್ಷನ್’ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಎಂಎ ಸಲೀಂ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಮಂಗಳವಾರ ಸುತ್ತೋಲೆ ಹೊರಡಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಕೆಲ ಪೊಲೀಸ್ ಠಾಣೆಗಳು ದೂರು ದಾಖಲಿಸಲು ನಿರಾಕರಿಸುತ್ತಿರುವುದು ಅಥವಾ ಅನಗತ್ಯ ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ಸಂದರ್ಭಗಳಲ್ಲಿ ಸಂತ್ರಸ್ತರು ಆರಂಭದಲ್ಲಿ ಫೋಟೋ ಅಥವಾ ವಿಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣವನ್ನು ಮುಂದಿಟ್ಟು ದೂರುಗಳನ್ನು ತಿರಸ್ಕರಿಸಲಾಗುತ್ತಿದೆ. ಇದು ಕಾನೂನುಬದ್ಧವಾಗಿ ಸರಿಯಲ್ಲ ಎಂದು ಹೇಳಿದ್ದಾರೆ.

ಫೋಟೋ ಅಥವಾ ವಿಡಿಯೊ ಚಿತ್ರೀಕರಣಕ್ಕೆ ವ್ಯಕ್ತಿಯು ಒಪ್ಪಿಗೆ ನೀಡಿರುವುದು, ಅದನ್ನು ಸಾರ್ವಜನಿಕವಾಗಿ ಪ್ರಕಟಿಸಲು ಅಥವಾ ಇತರರಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡಿದಂತೆ ಅಲ್ಲ. ಹೀಗಾಗಿ, ಸಂತ್ರಸ್ತರು ಮೊದಲೇ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ನೀಡಿ ಎಫ್‌ಐಆರ್ ದಾಖಲಿಸಲು ನಿರಾಕರಿಸುವಂತಿಲ್ಲ ಅಥವಾ ವಿಳಂಬ ಮಾಡುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಖಾಸಗಿ ಚಿತ್ರಗಳು ಅಥವಾ ವಿಡಿಯೊಗಳನ್ನು ಬಳಸಿಕೊಂಡು ಹಣ, ಲೈಂಗಿಕ ಅನುಕೂಲ ಅಥವಾ ಇತರ ಯಾವುದೇ ಲಾಭ ಪಡೆಯಲು ಯತ್ನಿಸಿದರೆ, ಭಾರತೀಯ ನ್ಯಾಯ ಸಂಹಿತೆ (BNS)-2023ರ ಅಡಿಯಲ್ಲಿ ಸುಲಿಗೆ ಹಾಗೂ ಕ್ರಿಮಿನಲ್ ಬೆದರಿಕೆ ಸಂಬಂಧಿತ ವಿಧಿಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಜೊತೆಗೆ ಅನ್ವಯಿಸಬೇಕು.

ಅಪರಾಧ ಘಟನೆ ಸಂಬಂಧಿತ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊರಗೆ ನಡೆದಿದ್ದರೂ, ಮೊದಲು ‘ಜೀರೋ ಎಫ್‌ಐಆರ್’ ದಾಖಲಿಸಿ ಬಳಿಕ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು.

Representational image
ಬೆಂಗಳೂರು: 6 ತಿಂಗಳ ಮಗುವಿನ ಬೆರಳು ಕಟ್; ಖಾಸಗಿ ಆಸ್ಪತ್ರೆ, ನರ್ಸ್, ವೈದ್ಯರ ವಿರುದ್ಧ ಎಫ್ಐಆರ್ ದಾಖಲು

ಸಾಮಾಜಿಕ ಜಾಲತಾಣಗಳು ಅಥವಾ ಇತರೆ ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೆಯಾದ ಆಪ್ತ ವಿಷಯಗಳನ್ನು ತಕ್ಷಣ ತೆಗೆದುಹಾಕಲು ಅಥವಾ ನಿರ್ಬಂಧಿಸಲು ಸಂಬಂಧಿತ ವೇದಿಕೆಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಐಟಿ ನಿಯಮಗಳು-2021ರ ಅಡಿಯಲ್ಲಿ ನೋಟಿಸ್ ನೀಡಬೇಕು. ಜೊತೆಗೆ ತನಿಖೆಗೆ ಅಗತ್ಯವಿರುವ ಎಲ್ಲಾ ಡಿಜಿಟಲ್ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕು.

ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಬೇಕು. ದೂರುದಾರರೊಂದಿಗೆ ಗೌರವಯುತ ಹಾಗೂ ಸಂವೇದನಾಶೀಲವಾಗಿ ವರ್ತಿಸಬೇಕು. ಅವಮಾನ ಅಥವಾ ಕಳಂಕ ಉಂಟುಮಾಡುವ ಯಾವುದೇ ವರ್ತನೆಗೆ ಅವಕಾಶ ನೀಡಬಾರದು.

ತನಿಖೆ ವೇಳೆ ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಹಾಗೂ ಸಿಐಡಿ ಸೈಬರ್ ವಿಭಾಗದೊಂದಿಗೆ ಸಮನ್ವಯ ಸಾಧಿಸಿ ತಾಂತ್ರಿಕ ತನಿಖೆ ನಡೆಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸೆಕ್ಸ್‌ಟಾರ್ಷನ್, ರಿವೆಂಜ್ ಪೋರ್ನ್ ಅಥವಾ ಆಪ್ತ ಚಿತ್ರಗಳ ದುರ್ಬಳಕೆ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಅಥವಾ “ಹಿಂದಿನ ಒಪ್ಪಿಗೆ” ಕಾರಣ ನೀಡಿ ವಿಳಂಬ ಮಾಡಿದರೆ ಸಂಬಂಧಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com