ಕೇರಳಂ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ: ಮಂಗಳೂರಿನಲ್ಲಿ ಕಾರ್ಮಿಕರ ಕೊರತೆ ನೀಗುವ ನಿರೀಕ್ಷೆ

ರಾಜ್ಯದ ಗಡಿ ಭಾಗದ ಹೊರಗಿನ ಆಯ್ದ ಸ್ಥಳಗಳಿಗೆ ವಿಸ್ತರಿಸುವ ಕೇರಳಂ ಸರ್ಕಾರದ ನಿರ್ಧಾರವು, ಕಾಸರಗೋಡು ಜಿಲ್ಲೆಯ ಮಹಿಳೆಯರಿಗೆ ಮಂಗಳೂರಿನಲ್ಲಿ ಉದ್ಯೋಗಾವಕಾಶಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ.
Representational image
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಪ್ರಿಯದರ್ಶಿನಿ ಯೋಜನೆಯನ್ನು ನೆರೆಯ ಕೇರಳಂ ರಾಜ್ಯ ಸರ್ಕಾರವು ಗಡಿ ಭಾಗದ ನಿರ್ದಿಷ್ಟ ಪ್ರದೇಶಗಳಿಗೂ ವಿಸ್ತರಿಸಲು ನಿರ್ಧರಿಸಿರುವುದರಿಂದ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಉದ್ಯಮ ವಲಯಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿದ್ದ ಮಹಿಳಾ ಕಾರ್ಮಿಕರ ಕೊರತೆ ಶೀಘ್ರದಲ್ಲೇ ನೀಗುವ ನಿರೀಕ್ಷೆಯಿದೆ.

ರಾಜ್ಯದ ಗಡಿ ಭಾಗದ ಹೊರಗಿನ ಆಯ್ದ ಸ್ಥಳಗಳಿಗೆ ವಿಸ್ತರಿಸುವ ಕೇರಳಂ ಸರ್ಕಾರದ ನಿರ್ಧಾರವು, ಕಾಸರಗೋಡು ಜಿಲ್ಲೆಯ ಮಹಿಳೆಯರಿಗೆ ಮಂಗಳೂರಿನಲ್ಲಿ ಉದ್ಯೋಗಾವಕಾಶಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ. ಜೊತೆಗೆ, ಗಡಿ ಪ್ರದೇಶದ ವ್ಯಾಪಾರ ವಹಿವಾಟು ಮತ್ತು ಸಂಚಾರ ಹೆಚ್ಚುವ ಮೂಲಕ ಸ್ಥಳೀಯ ಉದ್ಯಮಗಳಿಗೂ ಲಾಭವಾಗುವ ನಿರೀಕ್ಷೆಯಿದೆ.

ಮಂಗಳೂರು–ಕಾಸರಗೋಡು ಮಾರ್ಗವು ಬಹುಕಾಲದಿಂದ ಒಂದೇ ಸಾಮಾಜಿಕ-ಆರ್ಥಿಕ ವಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆ ಮತ್ತು ವ್ಯಾಪಾರ ಉದ್ದೇಶಗಳಿಂದ ಪ್ರತಿದಿನ ಸಾವಿರಾರು ಜನರು ಕರ್ನಾಟಕ–ಕೇರಳಂ ಗಡಿ ದಾಟಿ ಪ್ರಯಾಣಿಸುತ್ತಿರುತ್ತಾರೆ. ಉಚಿತ ಪ್ರಯಾಣ ಯೋಜನೆಯ ವಿಸ್ತರಣೆಯಿಂದ ಈ ಬಾಂಧವ್ಯ ಇನ್ನಷ್ಟು ಬಲಗೊಳ್ಳಲಿದೆ, ವಿಶೇಷವಾಗಿ ಗಡಿಯಾಚೆ ಉದ್ಯೋಗ ಹುಡುಕುತ್ತಿರುವ ಮಹಿಳೆಯರಿಗೆ ಇದು ಹೆಚ್ಚು ಅನುಕೂಲಕರವಾಗಲಿದೆ.

Representational image
ಮಂಗಳೂರು ಕರಾವಳಿಯಲ್ಲಿ ಭಾರೀ ಕಡಲ್ಕೊರೆತ, ನಿವಾಸಿಗಳ ಸ್ಥಳಾಂತರ: ಕುಡಿಯುವ ನೀರಿಗೆ ಹಾಹಾಕಾರ

ಕಾಸರಗೋಡಿನಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಅನೇಕರು ಮಂಗಳೂರಿನಲ್ಲಿ ಕೆಲಸ ಹುಡುಕುವ ಪರಿಸ್ಥಿತಿ ಇದೆ. ವಿಶೇಷವಾಗಿ ಚಿಲ್ಲರೆ ವ್ಯಾಪಾರ, ಆತಿಥ್ಯ, ಆರೋಗ್ಯ ಸೇವೆ ಹಾಗೂ ಗೃಹಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನವರು ಮಂಗಳೂರಿನಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ. ಬಸ್ಸಿನಲ್ಲಿ ಮಹಿಳೆಯರಿಗೆ ಪ್ರಯಾಣ ವೆಚ್ಚವನ್ನು ತೆಗೆದುಹಾಕುವುದರಿಂದ ಕಡಿಮೆ ಸಂಬಳ ಪಡೆಯುವ ಮಹಿಳೆಯರಿಗೂ ಗಡಿಯಾಚೆ ಪ್ರಯಾಣಿಸಿ ಕೆಲಸ ಮಾಡುವುದು ಆರ್ಥಿಕವಾಗಿ ಸಾಧ್ಯವಾಗಲಿದೆ.

ಉದ್ಯಮ ವಲಯದ ಮೂಲಗಳ ಪ್ರಕಾರ, ಮಂಗಳೂರಿನ ಚಿಲ್ಲರೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಕಾರ್ಮಿಕರ ಕೊರತೆ ಇರುತ್ತದೆ. ಮಂಜೇಶ್ವರ, ಉಪ್ಪಳ, ಬಂದ್ಯೋಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರು ಉದ್ಯೋಗಕ್ಕೆ ಬರಲು ಅನುಕೂಲವಾಗುವುದರಿಂದ ಉದ್ಯೋಗದಾತರಿಗೆ ಸಹ ಲಾಭವಾಗಲಿದೆ.

ಈ ಕ್ರಮದಿಂದ ಕಾಸರಗೋಡಿನ ಮಹಿಳೆಯರು ಮಂಗಳೂರಿಗೆ ಶಾಪಿಂಗ್ ಹಾಗೂ ಮನರಂಜನೆಗಾಗಿ ಹೆಚ್ಚಾಗಿ ಭೇಟಿ ನೀಡುವ ಸಾಧ್ಯತೆಯಿದ್ದು, ನಗರದ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಇದರಿಂದ ನೆರೆಯ ಎರಡು ಜಿಲ್ಲೆಗಳ ನಡುವಿನ ಆರ್ಥಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.

Representational image
ಕೊಲ್ಲೂರಿಗೆ ಬಂದು ಮರಳಿ ಮಂಗಳೂರು ಏರ್ ಪೋರ್ಟ್ ಗೆ ಸ್ವತಃ ಡ್ರೈವಿಂಗ್ ಮಾಡಿಕೊಂಡು ಹೋದ ದಳಪತಿ ವಿಜಯ್ ಕ್ರೇಜ್ ನೋಡಿ... Viral Video

ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ಮಾಜಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಗಿರಿಧರ ರಾವ್ ಎಂ.ಎಸ್, ಈ ಯೋಜನೆಯು ಮಹಿಳೆಯರನ್ನು ಮಂಗಳೂರಿನಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಅನ್ವೇಷಿಸಲು ಪ್ರೇರೇಪಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಸರಗೋಡಿನಲ್ಲಿ ಕೆಲ ಶಿಕ್ಷಕರು ತಿಂಗಳಿಗೆ 10,000 ರೂಪಾಯಿಗಳಿಂದ 12,000 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಉಚಿತ ಬಸ್ ಪ್ರಯಾಣ ಸೌಲಭ್ಯದಿಂದ ಅವರು ಮಂಗಳೂರಿನಲ್ಲಿ ಹೆಚ್ಚು ಸಂಬಳದ ಉದ್ಯೋಗಗಳನ್ನು ಹುಡುಕುವ ಬಗ್ಗೆ ಯೋಚಿಸಬಹುದು ಎಂದು ಹೇಳಿದರು.

ಆದರೆ, ಉನ್ನತ ಶಿಕ್ಷಣಕ್ಕಾಗಿ ಕಾಸರಗೋಡಿನ ವಿದ್ಯಾರ್ಥಿಗಳು ಈಗಾಗಲೇ ಮಂಗಳೂರಿನ ಮೇಲೆ ಅವಲಂಬಿತರಾಗಿರುವುದರಿಂದ, ಈ ಯೋಜನೆಯು ಕಾಲೇಜು ಪ್ರವೇಶದ ಪ್ರವೃತ್ತಿಯಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದು ತೋರುವುದಿಲ್ಲ ಎಂದು ಹೇಳಿದರು.

ಕನ್ನಡಪರ ಹೋರಾಟಗಾರ ಶಿವರಾಮ್, ಈ ಯೋಜನೆಯಿಂದ ಎರಡೂ ಜಿಲ್ಲೆಗಳಿಗೆ ಲಾಭವಾಗಲಿದೆ ಎಂದರು. ಕಾಸರಗೋಡಿನ ಜನರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುವುದರ ಜೊತೆಗೆ, ಮಂಗಳೂರಿನ ಉದ್ಯೋಗದಾತರಿಗೆ ವಿಶೇಷವಾಗಿ ಸೇವಾ ಕ್ಷೇತ್ರದಲ್ಲಿ ಇರುವ ಕಾರ್ಮಿಕರ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಗಡಿ ಪ್ರದೇಶದ ಆರ್ಥಿಕತೆಗೆ ಇದು ಲಾಭದಾಯಕವಾಗಲಿದೆ ಎಂದು ಹೇಳಿದರು.

ಆರಂಭದಲ್ಲಿ ಈ ಯೋಜನೆಯಲ್ಲಿ ಮಂಗಳೂರು ಹಾಗೂ ದಕ್ಷಿಣ ಕನ್ನಡದ ಇತರ ಪ್ರದೇಶಗಳನ್ನು ಸೇರಿಸಲಾಗಿರಲಿಲ್ಲ. ಆದರೆ ಗಡಿಯ ಪ್ರಮುಖ ಕೇಂದ್ರಗಳಿಗೆ ಯೋಜನೆಯನ್ನು ವಿಸ್ತರಿಸುವಂತೆ ಮನವಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವ್ಯಾಪ್ತಿಯನ್ನು ಹೆಚ್ಚಿಸಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆ ಹಾಗೂ ಇತರ ಅಗತ್ಯಗಳಿಗಾಗಿ ನಿಯಮಿತವಾಗಿ ಮಂಗಳೂರು ಮತ್ತು ದಕ್ಷಿಣ ಕನ್ನಡದ ಇತರ ಭಾಗಗಳಿಗೆ ಪ್ರಯಾಣಿಸುವ ಕಾಸರಗೋಡು ಜಿಲ್ಲೆಯ ಸಾವಿರಾರು ಜನರಿಗೆ ಈ ನಿರ್ಧಾರದಿಂದ ಪ್ರಯೋಜನವಾಗಲಿದೆ ಎಂದು ಮಂಜೇಶ್ವರ ತಾಲ್ಲೂಕು ಶಾಸಕ ಆಶ್ರಫ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com