

ಬೆಂಗಳೂರು: ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡಗಳನ್ನು ಪಾವತಿಸಲು ವಾಹನ ಮಾಲೀಕರಿಗೆ ರಾಜ್ಯ ಸಾರಿಗೆ ಇಲಾಖೆ ಸುವರ್ಣಾವಕಾಶ ನೀಡಿದೆ.
ಜೂನ್ 21ರಿಂದ ಜುಲೈ 10ರವರೆಗೆ ಬಾಕಿ ಇರುವ ದಂಡದ ಮೊತ್ತದ ಮೇಲೆ ಶೇ.50ರಷ್ಟು ರಿಯಾಯಿತಿ ನೀಡುವ ವಿಶೇಷ ಯೋಜನೆ ಜಾರಿಯಾಗಲಿದೆ.
ಈ ಯೋಜನೆಯಡಿ 1991ರಿಂದ 2022ರವರೆಗೆ ದಾಖಲಾಗಿರುವ 1.87 ಲಕ್ಷಕ್ಕೂ ಹೆಚ್ಚು ಡಿಪಾರ್ಟ್‌ಮೆಂಟ್ ಸ್ಟ್ಯಾಟ್ಯುಟರಿ ಆಕ್ಷನ್ (DSA) ಪ್ರಕರಣಗಳು ಒಳಪಡಲಿವೆ.
ಪರವಾನಗಿ ಷರತ್ತು ಉಲ್ಲಂಘನೆ, ಅವಧಿ ಮುಗಿದ ಅಥವಾ ಅಮಾನ್ಯ ಚಾಲನಾ ಪರವಾನಗಿ (DL), ಫಿಟ್ನೆಸ್ ಸರ್ಟಿಫಿಕೇಟ್ (FC), ವಿಮೆ (Insurance) ಹಾಗೂ ಮಾಲಿನ್ಯ ಪರೀಕ್ಷಾ ಪ್ರಮಾಣಪತ್ರ (Emission Test Certificate) ಸಂಬಂಧಿತ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ.
ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತೆ (ಜಾರಿ-ದಕ್ಷಿಣ) ಹಾಗೂ ಯೋಜನೆಯ ನೋಡಲ್ ಅಧಿಕಾರಿ ಓಂಕಾರೇಶ್ವರಿ ಅವರು ಮಾತನಾಡಿ, ಉಲ್ಲಂಘನೆ ನಡೆದ ಸಮಯದಲ್ಲಿ ಜಾರಿಯಲ್ಲಿದ್ದ ದಂಡದ ದರದ ಆಧಾರದ ಮೇಲೆ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ, 1992ರಲ್ಲಿ ಪ್ರಕರಣ ದಾಖಲಾಗಿದ್ದರೆ, ಅಂದಿನ ದಂಡದ ದರವೇ ಅನ್ವಯವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ಒಂದು ಬಾರಿಯ ಇತ್ಯರ್ಥ (One-Time Settlement) ಯೋಜನೆಯ ಮೂಲಕ ವಾಹನ ಮಾಲೀಕರು ಬಾಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಅವಕಾಶ ಸಿಗಲಿದೆ. ಬಾಕಿ ಪ್ರಕರಣಗಳನ್ನು ಹೊಂದಿರುವ ಎಲ್ಲರೂ ಮುಂದೆ ಬಂದರೆ ಸುಮಾರು ರೂ.74.44 ಕೋಟಿ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ 76,487 ಬಾಕಿ ಪ್ರಕರಣಗಳಿದ್ದು, ಸುಮಾರು ರೂ.21.59 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 31,918 ಪ್ರಕರಣಗಳು ಬಾಕಿ ಇದ್ದು, ಅಲ್ಲಿಂದ ರೂ.9.12 ಕೋಟಿ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ಮೂರು ದಶಕಗಳಲ್ಲಿ ರಾಜ್ಯದಾದ್ಯಂತ ನಡೆದ ವಿವಿಧ ಜಾರಿ ಕಾರ್ಯಾಚರಣೆಗಳ ವೇಳೆ ಈ ಪ್ರಕರಣಗಳು ದಾಖಲಾಗಿದ್ದವು. ಇದೀಗ ವಾಹನ ಮಾಲೀಕರು ತಮ್ಮ ದಾಖಲೆಗಳನ್ನು ಸಕ್ರಮಗೊಳಿಸಿ, ಬಾಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಈ ಯೋಜನೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಕಿ ಇರುವ DSA ಪ್ರಕರಣಗಳನ್ನು ಹೊಂದಿರುವ ವಾಹನ ಮಾಲೀಕರು ಮತ್ತು ನಿರ್ವಾಹಕರು ತಮ್ಮ ಸಮೀಪದ ಪ್ರಾದೇಶಿಕ ಸಾರಿಗೆ ಕಚೇರಿ (RTO)ಗೆ ಭೇಟಿ ನೀಡಿ, ಈ ಸೀಮಿತ ಅವಧಿಯ ರಿಯಾಯಿತಿಯ ಪ್ರಯೋಜನ ಪಡೆದುಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
Advertisement