

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸ್ ಐಡಿ ಕಾರ್ಡ್ ತೋರಿಸಿ 20 ಲಕ್ಷ ರೂ. ದರೋಡೆ ಮಾಡಿರೋ ಘಟನೆ ನಗರದಲ್ಲಿ ನಡೆದಿದೆ.
ಸಿಐಡಿ ಪೊಲೀಸ್ ಜೀಪ್ ನಲ್ಲಿ ಬಂದಿದ್ದವರು ನಮ್ಮಿಂದ 20 ಲಕ್ಷ ರೂ. ತೆಗೆದುಕೊಂಡು ಹೋಗಿದ್ದಾರೆ ಎಂದು ಕೇರಳ ಮೂಲದ ಯುವಕರು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಡಿವಾಳದ ಖಾಸಗಿ ಹೋಟೆಲ್ ಬಳಿ ಈ ರಾಬರಿ ಘಟನೆ ನಡೆದಿದೆ. ಮನಿ ಟ್ರೇಡಿಂಗ್ ಮಾಡಲಿಕ್ಕೆ ಹಣ ತಂದಿದ್ದೀರಾ ಅಂತ ಖಾಸಗಿ ವ್ಯಕ್ತಿಗಳಿಂದ ಧಮ್ಕಿ ಹಾಕಿದ್ದು, ನಾವು ಪೊಲೀಸರು ಅಂತ ಪೊಲೀಸ್ ಐಡಿ ಕಾರ್ಡ್ ತೋರಿಸಿ ಹಣ ರಾಬರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರೆಂದು ಹಣ ಕೊಟ್ಟಿದ್ದ ಕೇರಳ ಮೂಲದ ಯುವಕರು ನಂತರ ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ಸಿಐಡಿಗೆ ಸೇರಿದ್ದ ಅಸಲಿ ಪೊಲೀಸ್ ಜೀಪ್ನಲ್ಲಿ ಬಂದ ಖಾಸಗಿ ವ್ಯಕ್ತಿಗಳು ಹಣ ಕಿತ್ತುಕೊಂಡಿದ್ದಾರೆ. ಹಣ ಕೊಟ್ಟವರು ಈ ವೇಳೆ ವಿಡಿಯೋ ಮಾಡ್ಕೊಂಡಿದ್ದರು.
ಕೇಸ್ ದಾಖಲಿಸಿ ತನಿಖೆಗಿಳಿದಿದ್ದ ಡಿಸಿಪಿ ಮೊಹಮ್ಮದ್ ಸಜೀತ, ಹಣ ದರೋಡೆ ಮಾಡಿದ್ದ ಓರ್ವ ಖಾಸಗಿ ವ್ಯಕ್ತಿಯನ್ನ ಬಂಧಿಸಿದ್ದಾರೆ. ಈ ವೇಳೆ ಸಿಐಡಿ ಇನ್ಸ್‌ಪೆಕ್ಟರ್ ಸಹ ಜೀಪ್ ನಲ್ಲಿದ್ರು. ನಾವು ಮಾತ್ರ ಹೋಟೆಲ್ ಗೆ ಹೋಗಿ ಹಣಪಡೆದಿದ್ದೇವೆ ಎಂದು ಆತ ಹೇಳಿರುವುದಾಗಿ ತಿಳಿದುಬಂದಿದೆ.
ಪೊಲೀಸ್ ಜೀಪ್ ಸೀಜ್ : ಸದ್ಯ ಸಿಐಡಿ ಇನ್ಸ್ಪೆಕ್ಟರ್ಗೆ ಸೇರಿದ ಪೊಲೀಸ್ ಜೀಪ್ ಸೀಜ್ ಮಾಡಲಾಗಿದೆ. ಪ್ರಕರಣ ದಾಖಲಾಗ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಸ್ಕೇಪ್ ಆಗಿದ್ದಾರೆ. ಇದೀಗ ಅವರಿಗಾಗಿ ಶೋಧ ಕಾರ್ಯ ನಡೆದಿದೆ.
ಸದ್ಯ ಹಣ ಸೀಜ್ ಮಾಡಿದ್ದು, ಮಡಿವಾಳ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆದಿದೆ. ಇನ್ಸ್ ಪೆಕ್ಟರ್ ಮೇಲೆ ಗಂಭೀರ ಆರೋಪವಿದ್ದು, ಜೀಪ್ ನಲ್ಲಿ ಇನ್ಸ್ ಪೆಕ್ಟರ್ ಇದ್ರಾ? ಇಲ್ವಾ? ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ಕೇಸ್ ಬಗ್ಗೆ ಕಮಿಷನರ್ ಹೇಳಿದ್ದೇನು? ಪ್ರಕರಣ ಸಂಬಂಧ ಮಾತಾಡಿದ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ , ನಿನ್ನೆ ತಡರಾತ್ರಿ ಮಡಿವಾಳ ಪೊಲೀಸ್ ಠಾಣೆಗೆ ದೂರು ಬಂದಿದೆ. ಇಬ್ಬರು ವ್ಯಕ್ತಿಗಳು ಹೋಟೆಲ್ ನಲ್ಲಿ ಹಣ ಇಟ್ಟುಕೊಂಡು ಇದ್ರು. ಪೊಲೀಸರು ಅಂತ ಹೇಳಿ ಹೋಟೆಲ್ ಗೆ ಒಳಗೆ ನುಗ್ಗಿದ ಇಬ್ಬರು ತೆಗೆದುಕೊಂಡು ಹೋಗಿದ್ದಾರೆ ಎಂದು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇನ್ಸ್‌ಪೆಕ್ಟರ್ ಒಬ್ಬರ ಪಾತ್ರ ಬಗ್ಗೆ ಮಾಹಿತಿ ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಹಣವನ್ನು ರಿಕವರಿ ಮಾಡಲಾಗಿದೆ ಎಂದು ತಿಳಿಸಿದರು.
ಕೃತ್ಯಕ್ಕೆ ಪೊಲೀಸ್ ಇಲಾಖೆಯ ವಾಹನ ಬಳಕೆ ಆಗಿದೆ ಅದನ್ನ ವಶಕ್ಕೆ ಪಡೆಯಲಾಗಿದ್ದು, ದೂರುದಾರರ ಹಿನ್ನಲೆಯನ್ನ ಸಹ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಇನ್ಸ್‌ಪೆಕ್ಟರ್ ಪರಾರಿಯಾಗಿದ್ದು ಅವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಕಮಿಷನರ್ ಹೇಳಿದ್ದಾರೆ.
Advertisement