ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ Good News: 72 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್; 6 ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸಲು ಸೂಚನೆ..!

ವಿವಿಧ ಇಲಾಖೆಗಳಲ್ಲಿನ 72,186 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದೆ. ಇದರಲ್ಲಿ 40,009 ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ನೇರ ಅನುಮೋದನೆ ನೀಡಿದೆ.
Vidhana Soudha
ವಿಧಾನಸೌಧ
Updated on

ಬೆಂಗಳೂರು: ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ಒಟ್ಟು 72,186 ಹುದ್ದೆಗಳ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದೆ.

ಹಲವು ವರ್ಷಗಳಿಂದ ಖಾಲಿ ಉಳಿದಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಎಲ್ಲಾ ಸಂಬಂಧಿತ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಮೂಲಕ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ನೇಮಕಾತಿ ಪ್ರಕ್ರಿಯೆ ವಿಳಂಬವಾಗದಂತೆ ಸ್ಪಷ್ಟ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಅದರಂತೆ, ಎಲ್ಲಾ ಇಲಾಖೆಗಳು ಮುಂದಿನ ಎರಡು ತಿಂಗಳೊಳಗೆ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಬೇಕು, ನಾಲ್ಕು ತಿಂಗಳೊಳಗೆ ಲಿಖಿತ ಪರೀಕ್ಷೆ ಹಾಗೂ ಇತರ ಆಯ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಮತ್ತು ಆರು ತಿಂಗಳೊಳಗೆ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿ ನೇಮಕಾತಿ ಆದೇಶಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ.

ನೇಮಕಾತಿ ಪ್ರಕ್ರಿಯೆಯು ಸಮಯಕ್ಕೆ ಸರಿಯಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (Additional Chief Secretary) ಹುದ್ದೆಯ ಹಿರಿಯ ಐಎಎಸ್ ಅಧಿಕಾರಿಗೆ ನೀಡಲಾಗಿದೆ. ನೇಮಕಾತಿಯ ಪ್ರತಿಯೊಂದು ಹಂತದ ಪ್ರಗತಿಯನ್ನು ಅವರು ಪರಿಶೀಲಿಸಲಿದ್ದು, ಅನಗತ್ಯ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಿದ್ದಾರೆ.

ಸರ್ಕಾರದ ಆದೇಶದ ಪ್ರಕಾರ, ವಿವಿಧ ಇಲಾಖೆಗಳಲ್ಲಿನ 72,186 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದೆ. ಇದರಲ್ಲಿ 40,009 ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ನೇರ ಅನುಮೋದನೆ ನೀಡಿದೆ. ಉಳಿದ 32,177 ಹುದ್ದೆಗಳು ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ವೃಂದಕ್ಕೆ ಸೇರಿದ್ದು, ಇವುಗಳಿಗೆ 'ಡೀಮ್ಡ್ ಅಪ್ರೂವಲ್' ನೀಡಲಾಗಿದೆ. ಈ ನೇಮಕಾತಿ ಪ್ರಸ್ತಾವನೆಗೆ ಸಚಿವ ಸಂಪುಟವೂ ಈಗಾಗಲೇ ಅನುಮೋದನೆ ನೀಡಿದೆ.

Vidhana Soudha
ನಕಲಿ ನೇಮಕಾತಿ ವಂಚನೆಗೆ ಬಲಿಯಾಗದಿರಿ: ಜನತೆಗೆ ಆರೋಗ್ಯ ಇಲಾಖೆ ಮನವಿ

ನೇಮಕಾತಿ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಎಲ್ಲ ನೇಮಕಾತಿ ಪ್ರಾಧಿಕಾರಗಳಿಂದ ಕಾರ್ಯಯೋಜನೆ (Action Plan) ಪಡೆದುಕೊಂಡಿದೆ. ಈ ಕಾರ್ಯಯೋಜನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆದ ನಂತರವೇ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರ ಜವಾಬ್ದಾರಿಗಳನ್ನೂ ಸ್ಪಷ್ಟವಾಗಿ ಹಂಚಿಕೆ ಮಾಡಿದೆ. 17 ಇಲಾಖೆಗಳಲ್ಲಿನ ನೇರ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವ ಹೊಣೆಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ನೀಡಲಾಗಿದೆ. ಇನ್ನು 34 ಇಲಾಖೆಗಳ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಮತ್ತೊಬ್ಬ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವಹಿಸಲಾಗಿದೆ. ಇದರಿಂದ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ನೇಮಕಾತಿ ಪ್ರಕ್ರಿಯೆ ವೇಗವಾಗಿ ಸಾಗುವ ನಿರೀಕ್ಷೆಯಿದೆ.

ರಾಜ್ಯದಲ್ಲಿ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀಳುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿದ್ದವು. ಆರೋಗ್ಯ, ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಉದ್ಯೋಗಾಕಾಂಕ್ಷಿಗಳು ಬಹುಕಾಲದಿಂದ ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಹೊಸ ನಿರ್ಧಾರ ಮಹತ್ವ ಪಡೆದುಕೊಂಡಿದ್ದು, ಆಡಳಿತದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಸರ್ಕಾರಿ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಇದೇ ವೇಳೆ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು, ಪರೀಕ್ಷೆಗಳನ್ನು ಸಮಯಕ್ಕೆ ನಡೆಸುವುದು ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿತ ಅವಧಿಯೊಳಗೆ ನೇಮಕಾತಿ ಆದೇಶ ನೀಡುವುದು ಸಂಬಂಧಪಟ್ಟ ಇಲಾಖೆಗಳ ಹೊಣೆಗಾರಿಕೆಯಾಗಿದ್ದು, ಸರ್ಕಾರ ಕಾಲಮಿತಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಒತ್ತು ನೀಡಿದೆ. ಈ ಆದೇಶದಿಂದ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com