

ಬಳ್ಳಾರಿ: ಮೊಹರಂ ಆಚರಣೆ ವೇಳೆ ಮತ್ತೊಂದು ದುರಂತ ಸಂಭವಿಸಿದ್ದು, ವ್ಯಕ್ತಿಯೋರ್ವ ಅಗ್ನಿಕುಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.
ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕ್ಯಾದಿಗೆಹಾಳ್‌ನಲ್ಲಿ ಮುಸ್ಲಿಮರ ಹಬ್ಬ ಮೊಹರಂ ಆಚರಣೆಗಾಗಿ ನಿರ್ಮಿಸಿದ್ದ ಅಲಾಯಿ ಕುಣಿಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ.
ಮೊಹರಂ ಆಚರಣೆಗಾಗಿ ಪೀರಲು ದೇವರ ಪ್ರತಿಷ್ಠಾಪಿಸಿ ಅಲಾಯಿ ಕುಣಿ (ಬೆಂಕಿ ಉರಿಸುವ ಹೊಂಡ) ತೋಡಿ ಬೆಂಕಿ ಹಾಕಲಾಗಿತ್ತು. ಶುಕ್ರವಾರ ಹಬ್ಬದ ಆಚರಣೆ ಸಂದರ್ಭ ಈ ಕುಣಿಯ ಬೆಂಕಿಗೆ ಬಿದ್ದು ಮಡಿವಾಳ ದೇವರಾಜ್ (28) ಗಂಭೀರವಾಗಿ ಗಾಯಗೊಂಡಿದ್ದ.
ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾನೆ. ಮೃತನಿಗೆ ತಂದೆ ತಾಯಿ, ಪತ್ನಿ ಇದ್ದಾರೆ.