

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ(BSWML)ದಲ್ಲಿ ಕೆಲಸ ಮಾಡುತ್ತಿರುವ ನೂರಾರು ಲಿಂಕ್ ಕಾರ್ಮಿಕರು ತಮ್ಮ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಗುರುವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA)ದ ಮುಖ್ಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
BSWML ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಮಾಮಣಿ ಅವರಿಗೆ ಮುತ್ತಿಗೆ ಹಾಕಿ, ತಮ್ಮ ಎಂಟು ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಲಿಂಕ್ ವರ್ಕರ್ಸ್ ಪರವಾಗಿ ಮಾತನಾಡಿದ ರಾಜಾಜಿನಗರ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೂನಿಯನ್ ನಾಯಕಿ ಶಶಿಕಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಭಾರತೀಯ ಜನಸಂಖ್ಯಾ ಯೋಜನಾ ಘಟಕದಲ್ಲಿ ಕೆಲಸ ಮಾಡುತ್ತಿರುವ 284 ಕಾರ್ಮಿಕರನ್ನು ಸುಮಾರು 25 ವರ್ಷಗಳ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಿಯೋಜಿಸಲಾಗಿತ್ತು ಎಂದು ಹೇಳಿದರು.
ಅವರು ಪುರಸಭೆಯ ಚಿಕಿತ್ಸಾಲಯಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಸಾರ್ವಜನಿಕರಲ್ಲಿ ಪಲ್ಸ್ ಪೋಲಿಯೊ ಬಗ್ಗೆ ಜಾಗೃತಿ, ಸಮೀಕ್ಷೆಗಳು ಮತ್ತು ಲಸಿಕೆ ಕಾರ್ಯಕ್ರಮಗಳಿಗಾಗಿ ಮನೆಗಳಿಗೆ ಭೇಟಿ ನೀಡುವುದು ಮತ್ತು ಸಾರ್ವಜನಿಕರಲ್ಲಿ ಮಾಹಿತಿ ಶಿಕ್ಷಣ ಸಂವಹನ (IEC) ಸಂದೇಶಗಳನ್ನು ಹರಡುವಂತಹ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು 300 ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದರು ಎಂದರು.
ಆದಾಗ್ಯೂ, ಅವರನ್ನು ಹಿಂದಿನ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ನಿಯೋಜಿಸಲ್ಪಟ್ಟ ನಂತರ, ಅವರು ತ್ಯಾಜ್ಯವನ್ನು ಬೇರ್ಪಡಿಸುವುದು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ನಡೆಸುವುದು, ದೈನಂದಿನ ತ್ಯಾಜ್ಯ ಸಂಗ್ರಹಣೆಯ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡುವುದು, ಚುನಾವಣೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದಾರೆ. ಇವೆಲ್ಲಕ್ಕೂ 2014 ರಲ್ಲಿ ಕೇವಲ 6,000 ರೂ. ಮಾತ್ರ ಪಾವತಿ ಮಾಡಿದ್ದಾರೆ.
ನಿರಂತರ ಹೋರಾಟ ಮತ್ತು ಪರಿಷ್ಕರಣೆಗಳ ನಂತರ, 2020 ರಲ್ಲಿ ವೇತನವನ್ನು 14,884 ರೂ.ಗೆ ಹೆಚ್ಚಿಸಲಾಯಿತು. ಆದರೆ ಅದನ್ನು ಸರಿಯಾಗಿ ಪಾವತಿ ಮಾಡಿಲ್ಲ.
"ಈಗ BSWML ನಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಲಿಂಕ್ ವರ್ಕರ್ ಅನ್ನು ಮೂರು ವರ್ಷಗಳ ಒಪ್ಪಂದದ ಅವಧಿಗೆ ಸೇರಿಸಲಾಗುತ್ತಿರುವುದರಿಂದ ಹೆಚ್ಚಿನ ಕಳವಳ ವ್ಯಕ್ತವಾಗುತ್ತಿದೆ. ಯುಗಾದಿ ಹಬ್ಬ ಸಮೀಪಿಸುತ್ತಿರುವುದರಿಂದ ಎಂಟು ತಿಂಗಳ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಮತ್ತು GBA ಅಡಿಯಲ್ಲಿ 'ನೇರ ಪಾವತಿ' ಯೋಜನೆಯಡಿಯಲ್ಲಿ ನಮ್ಮನ್ನು ಸೇರಿಸಿಕೊಳ್ಳುವಂತೆ ನಾವು BSWML ಮುಖ್ಯ ಕಾರ್ಯಾಚರಣಾ ಅಧಿಕಾರಿಗೆ ಕೇಳಿಕೊಂಡಿದ್ದೇವೆ" ಎಂದರು.
ಬೆಂಗಳೂರು ಉತ್ತರ ನಗರ ನಿಗಮದ ಲಿಂಕ್ ವರ್ಕರ್ ತೇಜಸ್ವಿನಿ, ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದ್ದು, ಕಾರ್ಮಿಕರು ಬೆಳಗ್ಗೆ 6 ಗಂಟೆಗೆ ತಮ್ಮ ಕೆಲಸವನ್ನು ಪ್ರಾರಂಭಿಸಿ ಸಂಜೆ 4 ಗಂಟೆಯವರೆಗೆ ಕ್ಷೇತ್ರದಲ್ಲಿಯೇ ಇರುತ್ತಾರೆ ಎಂದರು.
"ತ್ಯಾಜ್ಯ ವಿಂಗಡಣೆಯ ಜೊತೆಗೆ, ನಮ್ಮನ್ನು ಒಬಿಸಿ ಮೀಸಲಾತಿ ಸಮೀಕ್ಷೆ, ಬೂತ್ ಮಟ್ಟದ ಅಧಿಕಾರಿಗಳಾಗಿ ಚುನಾವಣೆಗೆ ಸಂಬಂಧಿಸಿದ ಕೆಲಸ ಮತ್ತು ಶಾಲಾ ಜಾಗೃತಿ ಕಾರ್ಯಕ್ರಮಗಳಿಗೂ ಬಳಸಲಾಗುತ್ತದೆ. ನಾವು ಕ್ಷೇತ್ರದಲ್ಲಿರುವಾಗ ನಮಗೆ ಶೌಚಾಲಯ ಸೌಲಭ್ಯಗಳಿಲ್ಲ. ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿಎಂ ಸಿದ್ದರಾಮಯ್ಯ ಬಡ ಲಿಂಕ್ ವರ್ಕರ್‌ಗಳನ್ನು ನಿರ್ಲಕ್ಷಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ" ಎಂದರು.
ಇನ್ನು ಕಾರ್ಮಿಕರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಮತ್ತು ಯೂನಿಯನ್ ಸದಸ್ಯರಿಂದ ಪ್ರಾತಿನಿಧ್ಯವನ್ನು ಸ್ವೀಕರಿಸಿದ ಸಿಒಒ ರಮಾಮಣಿ, ಮೂರು ತಿಂಗಳ ವೇತನ ಬಾಕಿಯನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಮತ್ತು ಇತರ ಬೇಡಿಕೆಗಳ ಕುರಿತು ಉನ್ನತ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
Advertisement