News Wrap 12-03-26 | LPG ಸಿಲಿಂಡರ್ ದಾಸ್ತಾನು ಸಾಕಷ್ಟಿದೆ: ಆತಂಕ ಬೇಡ; ವಾಣಿಜ್ಯ ಗ್ಯಾಸ್ ಕೊರತೆ ವರದಿ: CBI ತನಿಖೆ; BJP ಶಾಸಕ ಭೈರತಿ ಬಸವರಾಜುಗೆ ಜಾಮೀನು!

News Wrap 12-03-26 | LPG ಸಿಲಿಂಡರ್ ದಾಸ್ತಾನು ಸಾಕಷ್ಟಿದೆ: ಆತಂಕ ಬೇಡ; ವಾಣಿಜ್ಯ ಗ್ಯಾಸ್ ಕೊರತೆ ವರದಿ: CBI ತನಿಖೆ; BJP ಶಾಸಕ ಭೈರತಿ ಬಸವರಾಜುಗೆ ಜಾಮೀನು!

1. LPG ಸಿಲಿಂಡರ್ ದಾಸ್ತಾನು ಸಾಕಷ್ಟಿದೆ: ಆತಂಕ ಬೇಡ

ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇರಾನ್‌, ಇಸ್ರೇಲ್‌ ಹಾಗೂ ಅಮೆರಿಕ ನಡುವೆ ಯುದ್ಧ ತೀವ್ರಗೊಂಡಿದ್ದು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಯುದ್ಧದ ಪರಿಣಾಮ ಭಾರತಕ್ಕೂ ತಟ್ಟಿದ್ದು, ಕಚ್ಚಾತೈಲ, ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಗ್ಯಾಸ್ ಕೊರತೆಯಿಂದಾಗಿ ಕೆಲ ಹೋಟೆಲ್‌ಗಳು ಬಂದ್ ಆಗಿವೆ. ಈ ಮಧ್ಯೆ ವಾಣಿಜ್ಯ ಗ್ಯಾಸ್ ಕೊರತೆ ಬೆನ್ನಲ್ಲೇ ರಾಜ್ಯಕ್ಕೆ ಸಿಬಿಐ ಅಧಿಕಾರಿಗಳು ಎಂಟ್ರಿಕೊಟ್ಟಿದ್ದಾರೆ. ಸಿಲಿಂಡರ್ ಕೊರತೆ ಯಾಕೆ ಆಗುತ್ತಿದೆ. ವಾಣಿಜ್ಯ ಗ್ಯಾಸ್ ಡಿಸ್ಟ್ರಿಬ್ಯೂಟರ್ ಗಳು ಕೃತಕ ಅಭಾವ ಸೃಷ್ಟಿಸಿ ಕಳ್ಳಾಟವಾಡುತ್ತಿದ್ದಾರಾ ಎಂಬುದರ ಬಗ್ಗೆ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

2. ಮೂಲಭೂತ ಕಾಮಗಾರಿಗಳಿಂದಾಗಿ ಆನೆ ಕಾರಿಡಾರ್ ನಾಶ

ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರ ಜೊತೆಗೆ ಎಕ್ಸ್ ಪ್ರೆಸ್ ಹೆದ್ದಾರಿ ಮೊದಲಾದ ಮೂಲಭೂತ ಕಾಮಗಾರಿಗೆ ಗಜಪಥ ಛಿದ್ರವಾಗಿ ಆನೆ ಹಾವಳಿಯೂ ಹೆಚ್ಚಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ನರೇಂದ್ರ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಆನೆ-ಮಾನವ ಸಂಘರ್ಷ ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷ 201 ಕೋಟಿ ರೂ. ವೆಚ್ಚದಲ್ಲಿ 116 ಕಿ.ಮೀ. ರೈಲು ಹಳಿ ತಡೆಗೋಡೆ ಕಾಮಗಾರಿಗಳು ನಡೆಯುತ್ತಿದ್ದು, ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಡ್ರೋನ್ ಕ್ಯಾಮರಾ ಬಳಸಿಕೊಂಡು ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡುತ್ತಿದ್ದೇವೆ ಎಂದರು. ಈ ಮಧ್ಯೆ ಕೊಡಗಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ ಮಾಡಿದ್ದು ರೈತ ಗಣಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ 12 ದಿನಗಳಲ್ಲಿ ಜಿಲ್ಲೆಯಲ್ಲಿ ಆನೆ ದಾಳಿಯಿಂದ ಸಂಭವಿಸಿದ ಮೂರನೇ ಸಾವು ಇದಾಗಿದೆ.

3. BJP ಶಾಸಕ ಭೈರತಿ ಬಸವರಾಜುಗೆ ಜಾಮೀನು

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ 20 ದಿನಗಳಿಂದ ಜೈಲಿನಲ್ಲಿದ್ದ ಬೈರತಿ ಬಸವರಾಜುಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ 82ನೇ ವಿಶೇಷ ನ್ಯಾಯಾಲಯ 2 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ, ಸಾಕ್ಷ್ಯಾಧಾರ ನಾಶಪಡಿಸುವಂತಿಲ್ಲ, ಸಾಕ್ಷಿಗಳನ್ನು ಬೆದರಿಸುವಂತಿಲ್ಲ, ಕೋರ್ಟ್ ಅನುಮತಿಯಿಲ್ಲದೇ ರಾಜ್ಯ ಬಿಟ್ಟು ತೆರಳುವಂತಿಲ್ಲ ಎಂದು ಷರತ್ತು ಹಾಕಿ ಜಾಮೀನು ಮಂಜೂರು ಮಾಡಿದೆ.

4. ಬಂಡೀಪುರ-ನಾಗರಹೊಳೆ ಹುಲಿ ಮೀಸಲು ಪ್ರದೇಶಗಳಿಗೆ ಸಫಾರಿ ಸ್ಥಗಿತದಿಂದ 6 ಕೋಟಿ ನಷ್ಟ

ಬಂಡೀಪುರ ಹುಲಿ ಮೀಸಲು ಪ್ರದೇಶ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶಗಳಲ್ಲಿ ನವೆಂಬರ್ 7 ರಿಂದ ಫೆಬ್ರವರಿ 21 ರವರೆಗೆ ವನ್ಯಜೀವಿ ಸಫಾರಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಎರಡು ಪ್ರಮುಖ ವನ್ಯಜೀವಿ ತಾಣಗಳಿಗೆ ಒಟ್ಟಾರೆಯಾಗಿ ಸುಮಾರು 6 ಕೋಟಿ ಆದಾಯ ನಷ್ಟವಾಗಿದೆ. ಎರಡು ಮೀಸಲು ಪ್ರದೇಶಗಳಲ್ಲಿ, ಬಂಡೀಪುರ ಹುಲಿ ಮೀಸಲು ಪ್ರದೇಶವು ಸುಮಾರು 2.5 ಕೋಟಿ ನಷ್ಟವನ್ನು ಅನುಭವಿಸಿದೆ. ಈಮಧ್ಯೆ, ಗುರುವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್‌, ಸಫಾರಿಗಳ ಅಮಾನತುಗೊಳಿಸುವಿಕೆಯಿಂದ 4,000ಕ್ಕೂ ಹೆಚ್ಚು ಜನ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಯಾವುದೇ ಸಮೀಕ್ಷೆ ನಡೆಸದೆ ಸಫಾರಿಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸುವುದು ಸರಿಯಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವರು, ಸಫಾರಿಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಿಲ್ಲ. ಕಳೆದ ನವೆಂಬರ್‌ನಲ್ಲಿ 15 ದಿನಗಳ ಅವಧಿಯಲ್ಲಿ ಮೂರು ಅಮೂಲ್ಯ ಜೀವಗಳು ಬಲಿಯಾಗಿವೆ. ಒಬ್ಬರು ಶಾಶ್ವತವಾಗಿ ಅಂಗವಿಕಲವಾಗಿದ್ದಾರೆ. ಹುಲಿಗಳು ಕಾಡಿನಿಂದ ಹೊರಬಂದು ದಾಳಿ ಮಾಡುತ್ತಿವೆ. ಜನರ ಅಮೂಲ್ಯ ಜೀವಗಳನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

5. ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ; 8 ಆರೋಪಿಗಳ ಬಂಧನ

ಬೆಂಗಳೂರಿನ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಗೋಪಾಲ್ ಎಂಬಾತನನ್ನು ಆನೇಕಲ್ ನ ಕರ್ಪುರ ಗೇಟ್ ಬಳಿ ಅಪಹರಿಸಲಾಗಿತ್ತು. ಅವರನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕನಿಕೊಟ್ಟೈ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಕೊಲೆಯ ಪ್ರಮುಖ ಆರೋಪಿ ಮೋಹನ್ ಬಾಬು ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com