

ಬೆಂಗಳೂರು: ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೇ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿರುವುದು ರಾಜ್ಯ ಆಭರಣ ಮಳಿಗೆಗಳಿಗೆ ಹೊಸ ಚೈತನ್ಯ ಸಿಕ್ಕಂತಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನದ ಮಾರಾಟದಲ್ಲಿ ಏರಿಕೆ ಕಂಡುಬಂದಿದ್ದು, ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ ಅವರು ಮಾತನಾಡಿ, ಕಳೆದ ಎರಡು ದಿನಗಳಲ್ಲಿ ಚಿನ್ನದ ಮಾರಾಟವು ಸುಮಾರು ಶೇ.25 ರಷ್ಟು ಹೆಚ್ಚಾಗಿದೆ. ಹಿಂದೆ ಬೆಲೆ ಗರಿಷ್ಠ ಮಟ್ಟ ತಲುಪಿದ್ದರಿಂದ ಗ್ರಾಹಕರು ಬೆಲೆ ಇಳಿಕೆಗಾಗಿ ಕಾಯುತ್ತಿದ್ದರು. ಈಗ ಸ್ವಲ್ಪ ಇಳಿಕೆಯಾದ ಮೇಲೆ ಖರೀದಿ ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ಮುಂಬರುವ ಮದುವೆ ಸೀಸನ್ ಮತ್ತು ಅಕ್ಷಯ ತೃತೀಯದಂತಹ ಹಬ್ಬಗಳಿಂದಾಗಿ ಮುಂಬರುವ ದಿನಗಳಲ್ಲಿ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಈ ಸಮಯದಲ್ಲಿ ವಿಶೇಷವಾಗಿ ಲೈಟ್‌ವೇಟ್ ಮತ್ತು ಆಂಟಿಕ್ ಆಭರಣಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಆದಾಗ್ಯೂ, ಇತರ ಆಭರಣ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಮಾರಾಟದಲ್ಲಿನ ಏರಿಕೆ ಸ್ಥಿರವಾಗಿಲ್ಲ ಎಂದು ತಿಳಿಸಿದ್ದಾರೆ.
ಪಂಚಕೇಸರಿ ಬದೇರಾ ಜ್ಯುವೆಲ್ಲರ್ಸ್‌ನ ಮಾಲೀಕ ಗೌತಮ್ ಬದೇರಾ ಅವರು ಮಾತನಾಡಿ, ಬೆಲೆ ಇಳಿದಾಗ ಶೇ.10-15 ಮಟ್ಟಿಗೆ ಮಾತ್ರ ಮಾರಾಟ ಹೆಚ್ಚಳ ಕಂಡುಬಂದಿದೆ. ಇದೀಗ ಬೆಲೆ ಮತ್ತೆ ಏರಿಕೆಯಾಗುತ್ತಿದೆ. ಗ್ರಾಹಕರಲ್ಲಿ ಗೊಂದಲ ಇನ್ನೂ ಇದೆ ಎಂದು ಹೇಳಿದ್ದಾರೆ.
ಇನ್ನೂ ಹಲವಾರು ಗ್ರಾಹಕರು ಚಿನ್ನದ ಬೆಲೆ ಇನ್ನಷ್ಟು ಇಳಿಯಬಹುದು ಎಂಬ ನಿರೀಕ್ಷೆಯಲ್ಲಿ ಖರೀದಿಯನ್ನು ಮುಂದೂಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ದಿನನಿತ್ಯ ಏರಿಳಿತ ಕಾಣುತ್ತಿರುವುದರಿಂದ ಗ್ರಾಹಕರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆಂದು ತಿಳಿಸಿದ್ದಾರೆ.
ಎಸ್‌ಕೆ ಜ್ಯುವೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ಗನ್ನಾ ಅವರು ಮಾತನಾಡಿ, “ಚಿನ್ನದ ಬೆಲೆ ಸ್ಥಿರವಾಗದಿರುವುದು ಗ್ರಾಹಕರನ್ನು ಗೊಂದಲಕ್ಕೀಡು ಮಾಡುತ್ತಿದೆ. ಸ್ವಲ್ಪ ಮಟ್ಟಿನ ಮಾರಾಟ ಏರಿಕೆ ಕಂಡರೂ, ಜನರು ಇನ್ನೂ ಜಾಗರೂಕರಾಗಿದ್ದಾರೆ ಎಂದು ಹೇಳಿದ್ದಾರೆ.
Advertisement