ಡೀಪ್-ಟೆಕ್, ನಾವೀನ್ಯತೆ ಕ್ಷೇತ್ರಗಳಲ್ಲಿ ಪಾಲುದಾರಿಕೆ: ಸಚಿವ ಪ್ರಿಯಾಂಕ್‌ ಖರ್ಗೆ ಜೊತೆ ಚಿಲಿ ನಿಯೋಗದ ಚರ್ಚೆ!

ಸಾಂಪ್ರದಾಯಿಕ ವಲಯಗಳನ್ನು ಮೀರಿ ನಾವೀನ್ಯತೆ-ನೇತೃತ್ವದಲ್ಲಿನ ಬೆಳವಣಿಗೆ, ಪ್ರತಿಭಾ ವಿನಿಮಯ ಮತ್ತು ಮಾರುಕಟ್ಟೆ ವಿಸ್ತರಣೆ ಕ್ಷೇತ್ರಗಳಲ್ಲಿ ಪಾಲುದಾರಿಕೆ ಹೆಚ್ಚಿಸುವ ಸಾಧ್ಯತೆಗಳನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
Priyank Kharge meets Chile Foreign Minister
ಚಿಲಿ ನಿಯೋಗದೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ, ಶುದ್ಧ ಇಂಧನ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ಕರ್ನಾಟಕದ ಜೊತೆಗಿನ ವಾಣಿಜ್ಯ ಬಾಂಧವ್ಯ ಬಲಪಡಿಸಲು ಚಿಲಿ ಒಲವು ವ್ಯಕ್ತಪಡಿಸಿದೆ.

ವಿದೇಶಾಂಗ ಸಚಿವ ಫ್ರಾನ್ಸಿಸ್ಕೊ ಪೆರೆಜ್ ಮೆಕೆನ್ನಾ ನೇತೃತ್ವದಲ್ಲಿನ ಚಿಲಿ ಗಣರಾಜ್ಯದ ಉನ್ನತ ಮಟ್ಟದ ನಿಯೋಗವು ಇಂದು ವಿಧಾನಸೌಧದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಸಾಂಪ್ರದಾಯಿಕ ವಲಯಗಳನ್ನು ಮೀರಿ ನಾವೀನ್ಯತೆ-ನೇತೃತ್ವದಲ್ಲಿನ ಬೆಳವಣಿಗೆ, ಪ್ರತಿಭಾ ವಿನಿಮಯ ಮತ್ತು ಮಾರುಕಟ್ಟೆ ವಿಸ್ತರಣೆ ಕ್ಷೇತ್ರಗಳಲ್ಲಿ ಪಾಲುದಾರಿಕೆ ಹೆಚ್ಚಿಸುವ ಸಾಧ್ಯತೆಗಳನ್ನು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ʼಡೀಪ್-ಟೆಕ್, ಕೃತಕ ಬುದ್ಧಿಮತ್ತೆ (ಎಐ), ಜೈವಿಕ ತಂತ್ರಜ್ಞಾನ, ವೈಮಾಂತರಿಕ್ಷ ಮತ್ತು ಅತ್ಯಾಧುನಿಕ ಸಂಶೋಧನೆಗೆ ಜಾಗತಿಕ ಕೇಂದ್ರವಾಗಿ ಕರ್ನಾಟಕವು ವಿಶ್ವದ ಗಮನ ಸೆಳೆಯುತ್ತಿದೆ. ಕುಶಲ ಮಾನವ ಸಂಪನ್ಮೂಲದ ಲಭ್ಯತೆಯೂ ನಮ್ಮಲ್ಲಿ ಗರಿಷ್ಠ ಮಟ್ಟದಲ್ಲಿ ಇದೆ. ಜಾಗತಿಕ ನಾವೀನ್ಯತೆ ಮೈತ್ರಿಕೂಟದ ಪಾಲುದಾರಿಕೆಯಡಿ ರಾಜ್ಯವು ಕಾಗದದ ಮೇಲಿನ ಒಪ್ಪಂದಗಳನ್ನು ಮೀರಿ ಕಾರ್ಯಸಾಧ್ಯ ಸಹಯೋಗದತ್ತ ದಾಪುಗಾಲು ಹಾಕುತ್ತಿದೆ ಎಂದರು.

ನವೋದ್ಯಮ ವಿನಿಮಯ, ಮಾರುಕಟ್ಟೆ ವಿಸ್ತರಣೆ ಕಾರ್ಯಕ್ರಮಗಳು, ಸಂಶೋಧನೆ ಹಾಗೂ ಅಭಿವೃದ್ಧಿ (ಆರ್‌ಆ್ಯಂಡ್‌ಡಿ) ಕೇಂದ್ರಗಳು, ನವೋದ್ಯಮ ಪೋಷಣಾ ಕೇಂದ್ರಗಳು ಸೇರಿದಂತೆ ಜಂಟಿ ನಾವೀನ್ಯತೆ ಕಾರಿಡಾರ್‌ಗಳನ್ನು ನಿರ್ಮಿಸಲು ಚಿಲಿ ಜೊತೆಗೆ ಕೆಲಸ ಮಾಡಲು ಕರ್ನಾಟಕ ಉತ್ಸುಕತೆ ಹೊಂದಿದೆ. ಲ್ಯಾಟಿನ್ ಅಮೆರಿಕಕ್ಕೆ ಪ್ರವೇಶ ದ್ವಾರವಾಗಿರುವ ಚಿಲಿ-ಯು ರಾಜ್ಯದ ನವೋದ್ಯಮಗಳು ಜಾಗತಿಕವಾಗಿ ತಮ್ಮ ವಹಿವಾಟು ವಿಸ್ತರಿಸಲು ಮಹತ್ವದ ಅವಕಾಶ ಒದಗಿಸಲಿದೆ ಎಂದು ಹೇಳಿದರು.

ಚಿಲಿ ಗಣರಾಜ್ಯದ ವಿದೇಶಾಂಗ ಸಚಿವ ಫ್ರಾನ್ಸಿಸ್ಕೊ ಪೆರೆಜ್ ಮೆಕೆನ್ನಾ ಅವರು ಮಾತನಾಡಿ, "ಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಆರ್ಥಿಕತೆಯತ್ತ ವೇಗವಾಗಿ ಸಾಗುವುದನ್ನು ಚಿಲಿ ಮುಂದುವರಿಸುತ್ತಿದೆ. ತಂತ್ರಜ್ಞಾನ ವಿನಿಮಯ, ಪ್ರತಿಭಾ ಸಹಯೋಗ, ನವೋದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಕರ್ನಾಟಕದ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಚಿಲಿ ಉತ್ಸುಕವಾಗಿದೆ. ಶುದ್ಧ ಇಂಧನ, ಡಿಜಿಟಲ್ ತಂತ್ರಜ್ಞಾನಗಳು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಸಾಧ್ಯತೆಗಳನ್ನು ಚಿಲಿ ಎದುರು ನೋಡುತ್ತಿದೆ. ಭಾರತ ಮತ್ತು ಲ್ಯಾಟಿನ್ ಅಮೆರಿಕದ ನಡುವಣ ಸೇತುವೆಯಾಗಿ ಚಿಲಿಯ ಪಾತ್ರವನ್ನು ನಾವು ಬಲಪಡಿಸುತ್ತೇವೆ" ಎಂದು ಹೇಳಿದರು.

Priyank Kharge meets Chile Foreign Minister
ರಾಜ್ಯದ ಆರು ಗ್ರಾಮ ಪಂಚಾಯತಿಗಳಿಗೆ ಕೇಂದ್ರದ ನಗದು ಪುರಸ್ಕಾರ: ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ!

ಸಭೆಯ ಮುಖ್ಯಾಂಶಗಳು

ನಾವೀನ್ಯತೆ ಪಾಲುದಾರಿಕೆ ಬಲಪಡಿಸುವಿಕೆ: ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು, ನವೋದ್ಯಮಗಳು ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಪಾಲುದಾರಿಕೆ ಹೆಚ್ಚಿಸುವ ಬದ್ಧತೆ ಪುನರುಚ್ಚಾರ

ಲ್ಯಾಟಿನ್ ಅಮೆರಿಕಕ್ಕೆ ನವೋದ್ಯಮ ಮಹಾದ್ವಾರ: ಲ್ಯಾಟಿನ್ ಅಮೆರಿಕದ ಮಾರುಕಟ್ಟೆಗಳನ್ನು ಪ್ರವೇಶಿಸಲು ಕರ್ನಾಟಕದ ನವೋದ್ಯಮಗಳಿಗೆ ಚಿಲಿ ಮಹಾದ್ವಾರವಾಗಿದೆ.

ಶುದ್ಧ ಇಂಧನ ಕ್ಷೇತ್ರದಲ್ಲಿ ಸಹಯೋಗ: ಹಸಿರು ಜಲಜನಕ ಮತ್ತು ಸುಸ್ಥಿರ ಕೈಗಾರಿಕಾ ನಾವೀನ್ಯತೆ ಸೇರಿದಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಅವಕಾಶಗಳ ಚರ್ಚೆ

ಹೊಸ-ಯುಗದ ವಲಯಗಳ ಗುರುತಿಸುವಿಕೆ: ಸಾಗರ ಜೈವಿಕ ತಂತ್ರಜ್ಞಾನ, ಜಲಚರ ಸಾಕಣೆ ತಂತ್ರಜ್ಞಾನಗಳು ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ

ಒಪ್ಪಂದದಿಂದ ಅನುಷ್ಠಾನದವರೆಗೆ: ನವೋದ್ಯಮ ವಿನಿಮಯ ಮತ್ತು ಮಾರುಕಟ್ಟೆ ಪ್ರವೇಶ ಕಾರ್ಯಕ್ರಮಗಳು ಸೇರಿದಂತೆ ಒಪ್ಪಂದಗಳನ್ನು ಮೀರಿ ಕಾರ್ಯಸಾಧ್ಯ ಪಾಲುದಾರಿಕೆ ಕಾರ್ಯಗತಗೊಳಿಸುವುದಕ್ಕೆ ಒತ್ತು.

ಜಾಗತಿಕ ನಾವೀನ್ಯತಾ ಮೈತ್ರಿಕೂಟ (ಜಿಐಎ) ವಿಸ್ತರಣೆ: ರಚನಾತ್ಮಕ ಕಾರ್ಯಕ್ರಮಗಳು ಮತ್ತು ಸಂಪರ್ಕಗಳ ಮೂಲಕ ಜಾಗತಿಕ ನಾವೀನ್ಯತೆ ಮೈತ್ರಿಕೂಟ (ಜಿಐಎ) ಅಡಿಯಲ್ಲಿ ಸಹಯೋಗ ಬಲಪಡಿಸಲು ನಿರ್ಧಾರ

ಕರ್ನಾಟಕದ ಜಾಗತಿಕ ಮನ್ನಣೆ: ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಮುಖ ಜಾಗತಿಕ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮುತ್ತಿರುವುದರ ಮೇಲೆ ಬೆಳಕು ಚೆಲ್ಲಿದ ಚರ್ಚೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com