

ಬೆಂಗಳೂರು: ಆನ್‌ಲೈನ್ ರಮ್ಮಿ ಮತ್ತು ರಿಯಲ್ ಮನಿ ಗೇಮಿಂಗ್ (RMG) ವ್ಯವಹಾರ ನಡೆಸುತ್ತಿದ್ದ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕರಾಳ ಮುಖ ಅನಾವರಣಗೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ನಡೆಸಿದ ಸರಣಿ ದಾಳಿಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಕಂಪನಿಯ ಮೂವರು ನಿರ್ದೇಶಕರನ್ನು ಬಂಧಿಸಲಾಗಿದೆ.
ಮೇ 7ರಿಂದ 13ರವರೆಗೆ ಬೆಂಗಳೂರಿನಲ್ಲಿರುವ ಕಂಪನಿಯ ಕಚೇರಿ, ನಿರ್ದೇಶಕರ ನಿವಾಸಗಳು ಹಾಗೂ ಎನ್‌ಸಿಆರ್ ಪ್ರದೇಶದ ಕೆಲವು ಪ್ರಮುಖ ಉದ್ಯೋಗಿಗಳ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರೂ.526.49 ಕೋಟಿ ಮೌಲ್ಯದ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA), 2002 ಅಡಿಯಲ್ಲಿ ಈ ಕಾರ್ಯಾಚರಣೆ ನಡೆಸಿದೆ.
ED ಪ್ರಕಟಣೆಯ ಪ್ರಕಾರ, ಶೋಧ ಕಾರ್ಯಾಚರಣೆ ವೇಳೆ ಮಹತ್ವದ ದಾಖಲೆಗಳು, ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಪತ್ತೆಯಾಗಿದ್ದು, ಜೊತೆಗೆ ಬ್ಯಾಂಕ್ ಖಾತೆಗಳು, ಪೇಮೆಂಟ್ ಗೇಟ್‌ವೇ ಬ್ಯಾಲೆನ್ಸ್, ಮ್ಯೂಚುವಲ್ ಫಂಡ್, ಬಾಂಡ್ ಹಾಗೂ ಫಿಕ್ಸ್ಡ್ ಡೆಪಾಸಿಟ್ ಸೇರಿದಂತೆ ಕೂ.526.49 ಕೋಟಿ ಮೌಲ್ಯದ ಚರಾಸ್ತಿಗಳನ್ನು ಫ್ರೀಜ್ ಮಾಡಲಾಗಿದೆ ಎಂದು ತಿಳಿಸಿದೆ.
ಇದಲ್ಲದೆ ಸುಮಾರು 2.30 ಕೆಜಿ ಚಿನ್ನ, ವಜ್ರಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೌಲ್ಯ ಸುಮಾರು ರೂ3.50 ಕೋಟಿ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ರೂ.11 ಲಕ್ಷ ನಗದು ಹಣವನ್ನೂ ಜಪ್ತಿ ಮಾಡಲಾಗಿದೆ. ಬಹು ರಾಜ್ಯಗಳಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳ ಎಫ್ಐಆರ್ ಆಧಾರವಾಗಿ ತನಿಖೆ ಆರಂಭಿಸಲಾಗಿದೆ ಎಂದು ಇಡಿ ತಿಳಿಸಿದೆ.
ಕಂಪನಿಯು ರಮ್ಮಿಕಲ್ಚರ್, ರಮ್ಮಿಪ್ರೈಮ್, ಪ್ಲೇಶಿಪ್ ಮತ್ತು ರಮ್ಮಿಟೈಮ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಮೂಲಕ ಮೊಬೈಲ್ ಆ್ಯಪ್‌ನಲ್ಲಿ ಆನ್‌ಲೈನ್ ರಮ್ಮಿ ಆಟಗಳು ಮತ್ತು ಟೂರ್ನಿಗಳನ್ನು ನಡೆಸುತ್ತಿತ್ತು. ಜೊತೆಗೆ ರಮ್ಮಿಕಾರ್ನರ್ ಎಂಬ ಬಿ2ಬಿ ಆ್ಯಪ್‌ನನ್ನೂ ನಿರ್ವಹಿಸುತ್ತಿತ್ತು.
ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ನಿಷೇಧಿತ ರಾಜ್ಯಗಳಿಂದಲೂ ದೊಡ್ಡ ಪ್ರಮಾಣದ ಬಳಕೆದಾರರನ್ನು ಕಂಪನಿ ಸೆಳೆದಿತ್ತು. ಇದಕ್ಕಾಗಿ ಬಳಕೆದಾರರ ಜಿಯೋ-ಲೊಕೇಶನ್ ಮಾಹಿತಿಯನ್ನು ತಿರುಚಲಾಗಿತ್ತು.
ಆಟಗಾರರು ಪಂದ್ಯಕ್ಕೆ ಇಡುವ ಹಣದ ಮೇಲೆ 10 ರಿಂದ 15 ಶೇಕಡಾವರೆಗೆ ಕಮಿಷನ್ ರೂಪದಲ್ಲಿ ಕಂಪನಿ ಹಣ ವಸೂಲಿ ಮಾಡುತ್ತಿತ್ತು ಎಂದು ಇಡಿ ಹೇಳಿದೆ.
ಕಂಪನಿಯು ತನ್ನ ಗೇಮಿಂಗ್ ಪ್ಲಾಟ್‌ಫಾರ್ಮ್ ಸುರಕ್ಷಿತ ಮತ್ತು ಪಾರದರ್ಶಕವಾಗಿದೆ, ಯಾವುದೇ BOTಗಳಿಲ್ಲ (ಕಂಪ್ಯೂಟರ್ ಪ್ರೋಗ್ರಾಂ) ಎಂದು ಬಳಕೆದಾರರಿಗೆ ಭರವಸೆ ನೀಡುತ್ತಿತ್ತು. ಆದರೆ, ತನಿಖೆಯಲ್ಲಿ ಬಳಕೆದಾರರ ಅರಿವಿಲ್ಲದೆ BOTಗಳ ವಿರುದ್ಧ ಆಟ ಆಡಿಸುವ ಮೂಲಕ ಅಕ್ರಮ ಚಟುವಟಿಕೆ ನಡೆಸಲಾಗಿದೆ ಎಂದು ಇಡಿ ಆರೋಪಿಸಿದೆ.
ಆರಂಭದಲ್ಲಿ ಬಳಕೆದಾರರಿಗೆ ಸಣ್ಣ ಪ್ರಮಾಣದ ಬಹುಮಾನಗಳನ್ನು ನೀಡಿ ಗೆಲ್ಲುವಂತೆ ಮಾಡಿ, ನಂತರ ದೊಡ್ಡ ಮೊತ್ತ ಹೂಡಿಕೆ ಮಾಡಲು ಪ್ರೇರೇಪಿಸಲಾಗುತ್ತಿತ್ತು. ಇದರಿಂದ ಅನೇಕರು ಭಾರೀ ಆರ್ಥಿಕ ನಷ್ಟ ಅನುಭವಿಸಿದ್ದು, ಮಾನಸಿಕ ಒತ್ತಡಕ್ಕೂ ಒಳಗಾಗಿದ್ದಾರೆ ಎಂದು ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮೂವರು ನಿರ್ದೇಶಕರಾದ ಪೃಥ್ವಿರಾಜ್ ಸಿಂಗ್, ವಿಕಾಸ್ ತನೇಜಾ ಹಾಗೂ ದೀಪಕ್ ಸಿಂಗ್ ಅಹ್ಲಾವತ್ ಅವರನ್ನು PMLA ಕಾಯ್ದೆಯ ಸೆಕ್ಷನ್ 19 ಅಡಿಯಲ್ಲಿ ಬಂಧಿಸಲಾಗಿದೆ.
ಕಂಪನಿ ಮತ್ತು ಅದರ ನಿರ್ದೇಶಕರು ಪಡೆದ ಅಪರಾಧದ ಆದಾಯವನ್ನು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ, ಅದರ ಷೇರುದಾರರಿಗೆ ಲಾಭಾಂಶ ಪಾವತಿ, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು ಮತ್ತು ಚರ/ಸ್ಥಿರ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಕ್ರಮವಾಗಿ ವರ್ಗಾಯಿಸಿದ್ದಾರೆಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ತಿಳಿಸಿದೆ.
Advertisement