

ಬೆಂಗಳೂರು: ಕುಟುಂಬ ಕಲಹದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಹೊಯ್ಸಳ ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ನಗರದ ನಾಗರಭಾವಿಯಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಸೋಮವಾರ ಸಂಜೆ ಸುಮಾರು 5.30ರ ವೇಳೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಭಾವಿಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರು 112 ಗೆ ಕರೆ ಮಾಡಿ, ಕುಟುಂಬ ಕಲಹದಿಂದ ಮನನೊಂದಿದ್ದ ತನ್ನ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಮಾಹಿತಿಯನ್ನು ತಕ್ಷಣವೇ ಕಾಮಾಕ್ಷಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಯ್ಸಳ-85 ಸಿಬ್ಬಂದಿಗೆ ರವಾನಿಸಲಾಗಿತ್ತು.
ಸಹಾಯಕ ಪೊಲೀಸ್ ಉಪನಿರೀಕ್ಷಕ ಕೆಂಪರಾಜು ಹಾಗೂ ಪೊಲೀಸ್ ಸಿಬ್ಬಂದಿ ಹಸನ್‌ಬಾಷಾ ಕೇವಲ 16 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ, ಮನೆಯ ಕೊಠಡಿಯ ಬಾಗಿಲು ಒಡೆದು ಒಳನುಗ್ಗಿದ್ದಾರೆ.
ಆ ವೇಳೆ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತಕ್ಷಣವೇ ರಕ್ಷಿಸಿ ಜೀವ ಉಳಿಸಿದ್ದಾರೆ. ಬಳಿಕ ಆತನಿಗೆ ಸಮಾಧಾನ ಹೇಳಿ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಬಳಿಕ ಪೊಲೀಸರು ಕುಟುಂಬ ಸದಸ್ಯರೊಂದಿಗೂ ಮಾತುಕತೆ ನಡೆಸಿ, ಕುಟುಂಬ ಕಲಹ ಹಾಗೂ ಮಾನಸಿಕ ಒತ್ತಡದ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ವರ್ತಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಆತ್ಮಹತ್ಯೆ ಯೋಚನೆಗಳು ಅಥವಾ ಮಾನಸಿಕ ಒತ್ತಡ ಎದುರಾಗುತ್ತಿದ್ದರೆ ಸಹಾಯ ಪಡೆಯುವುದು ಅತ್ಯಂತ ಮುಖ್ಯ. ತುರ್ತು ಮಾನಸಿಕ ಸಹಾಯಕ್ಕಾಗಿ ಸ್ನೇಹ ಫೌಂಡೇಶನ್ - 04424640050, ಟೆಲಿ ಮಾನಸ್ - 14416 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 02225521111 ಗೆ ಕರೆ ಮಾಡಿ, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿರಲಿದೆ.
Advertisement