

ಬೆಂಗಳೂರು: ನಗರದ ಗೊಟ್ಟಿಗೆರೆ ಸಮೀಪ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಓರ್ವ ಆರೋಪಿಯನ್ನು ಹುಳಿಮಾವು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮೇ 12ರಂದು ಬನಶಂಕರಿಯಿಂದ ಬನ್ನೇರುಘಟ್ಟ ಕಡೆಗೆ ತೆರಳುತ್ತಿದ್ದ ಬಿಎಂಟಿಸಿ (BMTC) ಬಸ್‌ನ್ನು ಗೊಟ್ಟಿಗೆರೆ ಬಳಿ ಸ್ಕೂಟರ್‌ನಲ್ಲಿ ಬಂದ ಮೂವರು ಯುವಕರು ಅಡ್ಡಗಟ್ಟಿದ್ದರು. ಓವರ್‌ಟೇಕ್ ವಿಚಾರಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ಯುವಕರ ನಡುವೆ ವಾಗ್ವಾದ ಶುರುವಾಗಿತ್ತು.
ಪೊಲೀಸರ ಮಾಹಿತಿ ಪ್ರಕಾರ, ವಾಗ್ವಾದ ತೀವ್ರಗೊಂಡ ನಂತರ ಆರೋಪಿಗಳು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕಬ್ಬಿಣದ ರಾಡ್ ಹಾಗೂ ಇತರ ಉಪಕರಣಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆ ರಸ್ತೆ ಮಧ್ಯೆಯೇ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಅಬ್ದುಲ್ ಶೋಯಬ್ (26) ಎಂದು ಗುರುತಿಸಲಾಗಿದ್ದು, ಈತ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ವೀಡಿಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಘಟನೆಯ ಗಂಭೀರತೆಯನ್ನು ಗಮನಿಸಿ ಹುಳಿಮಾವು ಪೊಲೀಸರು ಸ್ವಯಂಪ್ರೇರಿತವಾಗಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು.
ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಮೇ 17ರಂದು ಬಿಲ್ವಾರದಹಳ್ಳಿಯ ಟಿಪ್ಪು ವೃತ್ತದ ಬಳಿ ಅಬ್ದುಲ್ ಶೋಯಬ್‌ನನ್ನು ಬಂಧಿಸಿದ್ದಾರೆ.
ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
Advertisement