

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಸಿದ್ದರಾಮಯ್ಯ ಅವರು ತಮ್ಮ ವಿದಾಯದ ಕೊನೇ ಕ್ಷಣದಲ್ಲೂ ಮಹತ್ವದ ಕ್ರಮ ಕೈಗೊಂಡಿದ್ದು, ತಮ್ಮ ಆಪ್ತ ಕಾರ್ಯದರ್ಶಿ ಮತ್ತು ವಿಶೇಷಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹೌದು.. ಸಿಎಂ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಮತ್ತು ವಿಶೇಷ ಕರ್ತವ್ಯ ಅಧಿಕಾರಿ (Officer on Special Duty-OSD) ರಮೇಶ್ ಪಿ ಕೋನಾರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮೂಲಗಳ ಪ್ರಕಾರ ಡಾ.ವೆಂಕಟೇಶಯ್ಯ ಅವರನ್ನು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾಗಿ ಮತ್ತು ರಮೇಶ್ ಪಿ ಕೋನಾರೆಡ್ಡಿ ಅವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯ ನಿರ್ದೇಶಕರಾಗಿದ್ದ ವಿಜಯ್ ಬಿ.ಪಿ ಅವರಿಗೆ ಸ್ಥಳ ನಿಯುಕ್ತಿಗಾಗಿ ಸಂಬಂಧ ಇಲಾಖೆಗೆ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಮಾಂಡ್ ನಿರ್ದೇಶನದ ಮೇರೆಗೆ ಇಂದು ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇಂದು ಮಧ್ಯಾಹ್ನ ಲೋಕಭವನಕ್ಕೆ ಆಗಮಿಸಿದ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ಸಲ್ಲಿಸಿದರು. ಈ ಮೂಲಕ ಕಳೆದ ಮೂರು ವರ್ಷಗಳ ಅವರ ಆಡಳಿತ ಅಂತ್ಯಗೊಂಡಿತು.
ರಾಜ್ಯಪಾಲರು ಇಂದೋರ್ ಗೆ ತೆರಳಿರುವ ಕಾರಣ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು. ಸದ್ಯಕ್ಕೆ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ಬಳಿಕವೇ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಲಿದೆ.
Advertisement