ಬೆಂಗಳೂರು: ಕಾನೂನು ರಕ್ಷಿಸಬೇಕಾದ ಪೊಲೀಸರೇ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಗೆ ಇಳಿದರೆ ಸಾರ್ವಜನಿಕರ ಗತಿ ಏನು? ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಒನ್‌ವೇಗೆ ನುಗ್ಗಿದ್ದ ಕೆಎಸ್‌ಆರ್‌ಪಿ ಬಸ್ ಸಿಬ್ಬಂದಿ, ಅದನ್ನು ಸೌಜನ್ಯದಿಂದ ಪ್ರಶ್ನಿಸಿದ ಸವಾರನಿಗೆ ಬೆದರಿಕೆ ಹಾಕಿ ದರ್ಪ ಮೆರೆದ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಕಿ ಧರಿಸಿದವರ ಈ ಪುಂಡಾಟಿಕೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಬೆಂಗಳೂರಿನ ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕಿತಿಮ್ಮನಹಳ್ಳಿ - ನಂಜಪ್ಪ ಸರ್ಕಲ್ ಮಾರ್ಗದಲ್ಲಿ ಸೋಮವಾರ ರಾತ್ರಿ ಸುಮಾರು 7 ಗಂಟೆಗೆ, ಕೆಎಸ್‌ಆರ್‌ಪಿ ಸಿಬ್ಬಂದಿ ಇದ್ದ ಬಸ್ ನಿಯಮಗಳನ್ನು ಗಾಳಿಗೆ ತೂರಿ ಅಕ್ಕಿತಿಮ್ಮನಹಳ್ಳಿ ಮಾರ್ಗವಾಗಿ ನಂಜಪ್ಪ ಸರ್ಕಲ್ ಕಡೆಗಗೆ ಒನ್‌ವೇ (ವಿರುದ್ಧ ದಿಕ್ಕಿನಲ್ಲಿ) ರಸ್ತೆಗೆ ನುಗ್ಗಿದೆ. ಇದರಿಂದಾಗಿ ಆ ರಸ್ತೆಯಲ್ಲಿ ಕೆಲಕಾಲ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದೇ ಮಾರ್ಗವಾಗಿ ರೇಂಜ್ ರೋವರ್ ಕಾರಿನಲ್ಲಿ ಬರುತ್ತಿದ್ದ ಚಾಲಕರೊಬ್ಬರು, ಬಸ್ ಒನ್‌ವೇನಲ್ಲಿ ಬಂದಿರುವುದನ್ನು ಮತ್ತು ಸಂಚಾರ ನಿಯಮ ಉಲ್ಲಂಘಿಸಿರುವುದನ್ನು ಪ್ರಶ್ನಿಸಿದ್ದಾರೆ.
ಮುಂದುವರೆದು ಕಾರು ಚಾಲಕ ಪ್ರಶ್ನಿಸಿದ್ದರಿಂದ ಆಕ್ರೋಶಗೊಂಡ ಕೆಎಸ್‌ಆರ್‌ಪಿ ಸಿಬ್ಬಂದಿ, ಬಸ್‌ನಿಂದ ಕೆಳಗಿಳಿದು ಕಾರನ್ನು ಸುತ್ತುವರಿದಿದ್ದಾರೆ. ಚಾಲಕನನ್ನು ಕೆಳಗೆ ಇಳಿಯುವಂತೆ ಗದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷವೆಂದರೆ, ಸ್ಥಳದಲ್ಲಿ ಅಶೋಕನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಇದ್ದರೂ ಸಹ ಕೆಎಸ್‌ಆರ್‌ಪಿ ಸಿಬ್ಬಂದಿಯ ದರ್ಪವನ್ನು ತಡೆಯದೆ ಮೂಕಪ್ರೇಕ್ಷಕರಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಏತನ್ಮಧ್ಯೆ, ಕಾರಿನಲ್ಲಿದ್ದವರು ಪೊಲೀಸರ ಈ ದರ್ಪದ ವರ್ತನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಪ್ರಸ್ತುತ ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿಯಮ ಉಲ್ಲಂಘಿಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲಿಸುವಂತೆ ಪಾಠ ಮಾಡುವ ಪೊಲೀಸರೇ ಈ ರೀತಿ ನಿಯಮ ಮೀರಿ ದರ್ಪ ತೋರಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.