

ಕಲಬುರಗಿ: ಅಧಿಕಾರಿಗಳು ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತ ವಿದ್ಯಾರ್ಥಿಗಳೇ ಖುದ್ದಾಗಿ ರಸ್ತೆಗಿಳಿದು ಹೆದ್ದಾರಿ ಗುಂಡಿಗಳನ್ನು ಮುಚ್ಚಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಸುಮಾರು 20 ಯುವ ವಿದ್ಯಾರ್ಥಿಗಳ ತಂಡವೊಂದು ರಾಜ್ಯ ಹೆದ್ದಾರಿಯಲ್ಲಿದ್ದ ಅಪಾಯಕಾರಿ ಗುಂಡಿಗಳನ್ನು ಮುಚ್ಚುವ ಮೂಲಕ ಸ್ಥಳೀಯ ಆಡಳಿತದ ಕಣ್ಣು ತೆರೆಸುವ ಕೆಲಸ ಮಾಡಿದೆ.
ಕಲ್ಯಾಣ ಕರ್ನಾಟಕದ ಕಲಾಮಂದರ್ಗಿ ಗ್ರಾಮದಲ್ಲಿ ಕಳೆದ ಭಾನುವಾರ ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಕೈಹಾಕಿದ್ದಾರೆ.
ಕಲಾಮಂದರ್ಗಿಯಿಂದ ಬಸವಕಲ್ಯಾಣಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ದುಸ್ಥಿತಿಯಿಂದ ಬೇಸತ್ತ ಸುಮಾರು 20 ವಿದ್ಯಾರ್ಥಿಗಳು ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಇದರಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಉಳಿದ 17 ಮಂದಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.
ಹಿರೇನಗಾಂವ್, ಮುಡಬಿ ಮತ್ತು ಕಲಾಮಂದರ್ಗಿ ಗ್ರಾಮಗಳ ವಿದ್ಯಾರ್ಥಿಗಳು ಒಗ್ಗೂಡಿ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ. ರಸ್ತೆ ದುರಸ್ತಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಥಳೀಯ ಆಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಮಾಜಿಕ ಕಳಕಳಿಯಿಂದ ಪ್ರೇರಿತರಾದ ಗ್ರಾಮಸ್ಥರೂ ಅವರೊಂದಿಗೆ ಕೈಜೋಡಿಸಿದ್ದಾರೆ.
ಈ ಕುರಿತು ಮಾತನಾಡಿದ ಬಸವಕಲ್ಯಾಣದ ಅತಿಥಿ ಉಪನ್ಯಾಸಕಿ ಹಾಗೂ ಕಲಾಮಂದರ್ಗಿ ನಿವಾಸಿ ಜಗದೇವಿ ಅವರು, ಕಲಾಮಂದರ್ಗಿಯಲ್ಲಿ ಕೇವಲ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ನಾಲ್ಕನೇ ತರಗತಿ ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಹಿರೇನಗಾಂವ್ ಮತ್ತು ಮುಡಬಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ ಬಸವಕಲ್ಯಾಣದ ಖುಬಾ ಕಾಲೇಜಿಗೆ ತೆರಳಬೇಕಾಗುತ್ತದೆ.
ಆದರೆ, ರಸ್ತೆ ಸಂಪೂರ್ಣ ಹದಗೆಟ್ಟಿರುವ ಕಾರಣ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಹಿರೇನಗಾಂವ್, ಮುಡಬಿ ಹಾಗೂ ಬಸವಕಲ್ಯಾಣ ತಾಲೂಕಿಗೆ ಸಂಚರಿಸುವುದನ್ನೇ ಬಹುತೇಕ ನಿಲ್ಲಿಸಿವೆ.
ಈ ಸಮಸ್ಯೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಗಿತ್ತು. ಬಳಿಕ ವಿದ್ಯಾರ್ಥಿಗಳು ಒಟ್ಟಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾದರು ಎಂದು ಹೇಳಿದ್ದಾರೆ.
ಈ ರಸ್ತೆ ಲೋಕೋಪಯೋಗಿ ಇಲಾಖೆಯ ಕಮಲಾಪುರ ವಿಭಾಗದ ವ್ಯಾಪ್ತಿಗೆ ಬರಲಿದ್ದು, ಈ ಕುರಿತು ಪ್ರತಿಕ್ರಿಯೆ ಪಡೆಯಲು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯವಾಗಲಿಲ್ಲ.