

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ 'ಭ್ರಷ್ಟಾಚಾರದ ದರಪಟ್ಟಿ' ಜಾಹೀರಾತಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣಾ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಶನಿವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ ಈ ಆದೇಶ ಹೊರಡಿಸಿದ್ದಾರೆ.
ಆಗಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಹಾಗೂ ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಇವರ ವಿರುದ್ಧ ಬಾಕಿ ಉಳಿದಿದ್ದ ವಿಚಾರಣಾ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
2019ರಿಂದ 2023ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದ ಬೆಲೆಗಳ ಕುರಿತು 2023ರ ಮೇ 5ರಂದು ಪ್ರಮುಖ ಪತ್ರಿಕೆಗಳಲ್ಲಿ ಅವಹೇಳನಕಾರಿ ಜಾಹೀರಾತು ಪ್ರಕಟಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕ ದೂರು ದಾಖಲಿಸಿತ್ತು.
ಈ ಸಂಬಂಧ ಬೇಷರತ್ ಕ್ಷಮೆಯಾಚಿಸುವಂತೆ ಅರ್ಜಿದಾರರಿಗೆ ಬಿಜೆಪಿ ಕಾನೂನು ನೋಟಿಸ್ ನೀಡಿತ್ತು. ಆದರೆ, ಅದಕ್ಕೆ ಅವರು ಸ್ಪಂದಿಸಿರಲಿಲ್ಲ. ಹೀಗಾಗಿ, ಮೇ 9, 2023ರಂದು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 200ರ ಅಡಿಯಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು.
ದೂರನ್ನು ಪರಿಗಣನೆಗೆ ತೆಗೆದುಕೊಂಡಿದ್ದ ವಿಶೇಷ ನ್ಯಾಯಾಲಯ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಕೀಲರು, ಸಿಆರ್‌ಪಿಸಿ ಸೆಕ್ಷನ್ 199ರ ಅಡಿಯಲ್ಲಿ ನಿಗದಿಪಡಿಸಿರುವ ಕಾನೂನು ಪ್ರಕ್ರಿಯೆ ಪಾಲನೆಯಾಗಿಲ್ಲ ಎಂದು ವಾದಿಸಿದರು.
ಪ್ರಕರಣ ದಾಖಲಿಸಲು ಅಗತ್ಯವಾದ ಅನುಮತಿಯೂ ಇಲ್ಲ ಮತ್ತು ದೂರುದಾರರು ಈ ಪ್ರಕರಣದಲ್ಲಿ ನೊಂದ ವ್ಯಕ್ತಿಯೂ ಅಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದೇ ರೀತಿಯ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್‌ನ ಮತ್ತೊಂದು ನ್ಯಾಯಪೀಠ ಪರಿಶೀಲಿಸಿ, ಅವರ ವಿರುದ್ಧದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಈ ಪ್ರಕರಣದಲ್ಲೂ ಅದೇ ತತ್ವ ಅನ್ವಯವಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಇದಕ್ಕೆ ಪ್ರತಿಯಾಗಿ ದೂರುದಾರರ ಪರ ವಕೀಲರು, ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತು ಜಾಹೀರಾತು ಪ್ರಕಟಿಸುವುದೇ ಸರ್ಕಾರದ ಮಾನಹಾನಿಗೆ ಕಾರಣವಾಗುತ್ತದೆ. ಹೀಗಾಗಿ ಪ್ರಕರಣದ ವಿಚಾರಣೆ ಮುಂದುವರಿಯಬೇಕು ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ರಾಹುಲ್ ಗಾಂಧಿ ಪ್ರಕರಣದಲ್ಲಿ ಜಾಹೀರಾತು ಪ್ರಕಟಿಸುವಲ್ಲಿ ಅವರ ಉದ್ದೇಶ ಮತ್ತು ಪಾತ್ರ ಹಾಗೂ ರಾಜಕೀಯ ಪಕ್ಷವು ನೊಂದ ವ್ಯಕ್ತಿಯಾಗಬಹುದೇ ಎಂಬ ಅಂಶಗಳನ್ನು ಪರಿಶೀಲಿಸಲಾಗಿತ್ತು ಎಂದು ಗಮನಿಸಿತು.
ಜಾಹೀರಾತಿನಲ್ಲಿ ಉಲ್ಲೇಖಿಸಲಾದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನ್ಯಾಯಾಲಯದ ಮುಂದೆ ದೂರುದಾರರಾಗಿ ಹಾಜರಾಗಿಲ್ಲ. ಹೀಗಿರುವಾಗ, ಪ್ರಕಟಿತ ಜಾಹೀರಾತುಗಳಿಂದ ನೊಂದ ವ್ಯಕ್ತಿ ರಾಜಕೀಯ ಪಕ್ಷವಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿತು.