ಒಂದೇ ತಿಂಗಳಲ್ಲಿ LPG ದರ ಕೆ.ಜಿಗೆ 11 ರೂ. ಹೆಚ್ಚಳ: ಆಟೋ ಚಾಲಕರಿಗೆ ಗಾಯದ ಮೇಲೆ ಬರೆ, ಪ್ರಯಾಣ ದರ ಮಾತ್ರ ಯಥಾಸ್ಥಿತಿ..!

ಬಹುತೇಕ ಗ್ಯಾಸ್ ಭರ್ತಿ ಕೇಂದ್ರಗಳು ತಮಗೆ ಬೇಕಾದಂತೆ ದರ ಹೆಚ್ಚಿಸುತ್ತಿವೆ. ದರ ಏರಿಕೆಗೆ ಆಧಾರವೇನು ಎಂದು ಪ್ರಶ್ನಿಸಿದರೆ ನಮ್ಮ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ. ಇರುವ ದರದಲ್ಲೇ ಗ್ಯಾಸ್ ಖರೀದಿಸಿ, ಇಲ್ಲದಿದ್ದರೆ ಹೊರಡಿ ಎಂದು ಹೇಳುತ್ತಾರೆ.
Bengaluru Auto service
ಬೆಂಗಳೂರು ಆಟೋ ಸೇವೆ
Updated on: 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಚಾಲಕರಿಗೆ ಎಲ್‌ಪಿಜಿ ದರ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ತಂದಿದೆ.

ಅಕ್ಟೋಬರ್ ತಿಂಗಳೊಂದರಲ್ಲೇ ಆಟೋಗಳಿಗೆ ಬಳಸುವ ಎಲ್‌ಪಿಜಿ ದರ ಪ್ರತಿ ಕೆ.ಜಿಗೆ 11 ರೂ. ಹೆಚ್ಚಳವಾಗಿದೆ ಎಂದು ಚಾಲಕರು ಹೇಳಿದ್ದಾರೆ.

ನಗರದ ಒಟ್ಟು ಆಟೋಗಳ ಪೈಕಿ ಅರ್ಧದಷ್ಟು ಆಟೋಗಳು ಎಲ್‌ಪಿಜಿ ಬಳಸಿ ಸಂಚರಿಸುತ್ತಿದ್ದು, ದರ ಏರಿಕೆ ಚಾಲಕರ ದೈನಂದಿನ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ.

ಬಹುತೇಕ ಗ್ಯಾಸ್ ಭರ್ತಿ ಕೇಂದ್ರಗಳು ತಮಗೆ ಬೇಕಾದಂತೆ ದರ ಹೆಚ್ಚಿಸುತ್ತಿವೆ. ದರ ಏರಿಕೆಗೆ ಆಧಾರವೇನು ಎಂದು ಪ್ರಶ್ನಿಸಿದರೆ ನಮ್ಮ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ. ಇರುವ ದರದಲ್ಲೇ ಗ್ಯಾಸ್ ಖರೀದಿಸಿ, ಇಲ್ಲದಿದ್ದರೆ ಹೊರಡಿ ಎಂದು ಹೇಳುತ್ತಾರೆ.

ಆಟೋಗಳ ಕನಿಷ್ಠ ಪ್ರಯಾಣ ದರ 36 ರೂ. ಆಗಿದ್ದರೂ, ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಅದನ್ನು ಪರಿಷ್ಕರಿಸಿಲ್ಲ' ಎಂದು ಕಳೆದ 10 ವರ್ಷಗಳಿಂದ ಆಟೋ ಚಾಲನೆ ಮಾಡುತ್ತಿರುವ ಮೂರ್ತಿ ನಾಯಕ್ ಅವರು ಅಳಲು ತೋಡಿಕೊಂಡಿದ್ದಾರೆ.

ನಮ್ಮ ಜೀವನೋಪಾಯ ಸಂಪೂರ್ಣವಾಗಿ ದಿನದ ದುಡಿಮೆಯನ್ನೇ ಅವಲಂಬಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದೆ. ಶಾಲಾ ವಾಹನಗಳ ಬಾಡಿಗೆಯೂ ಹೆಚ್ಚಾಗಿದೆ. ತಿಂಗಳೊಂದರಲ್ಲಿ ಎರಡು ಅಥವಾ ಮೂರು ಬಾರಿ ಎಲ್‌ಪಿಜಿ ದರ ಹೆಚ್ಚಿಸಿದರೆ ನಾವು ಜೀವನ ನಡೆಸುವುದಾದರೂ ಹೇಗೆ? ಯಾವ ಆಧಾರದ ಮೇಲೆ ಈ ದರ ಏರಿಕೆ ಮಾಡಲಾಗುತ್ತಿದೆ?' ಎಂದು ಪ್ರಶ್ನಿಸಿದ್ದಾರೆ.

Bengaluru Auto service
ಆಟೋ ಸೈಡ್‌ಗೆ ಹಾಕಿ ಎಂದ ಸುನಿಲ್ ಸಹೋದರರ ಮೇಲೆ ಜಮೀರ್ ಸಹೋದರರಿಂದ ಮಾರಣಾಂತಿಕ ಹಲ್ಲೆ!

ಮತ್ತೊಬ್ಬ ಆಟೋ ಚಾಲಕ ವಿ. ಪ್ರಕಾಶ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಹೇಳಿದ್ದಾರೆ.

'ಎಲ್ಲ ವಸ್ತುಗಳ ಬೆಲೆಯೂ ಹೆಚ್ಚಾಗಿದ್ದು, ಕುಟುಂಬ ನಿರ್ವಹಿಸುವುದು ದಿನದಿಂದ ದಿನಕ್ಕೆ ಸವಾಲಾಗುತ್ತಿದೆ. ಈ ಹಿಂದೆ ತಿಂಗಳಿಗೆ ಸುಮಾರು 1,000 ರೂ. ಇದ್ದ ದಿನಸಿ ವೆಚ್ಚ ಈಗ 2,300ರಿಂದ 2,400 ರೂ.ಗೆ ಏರಿಕೆಯಾಗಿದೆ. ಅಡುಗೆ ಎಣ್ಣೆ ಲೀಟರ್‌ಗೆ 180 ರೂ. ಆಗಿದೆ. ಅಕ್ಕಿ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬದುಕುವುದಾದರೂ ಹೇಗೆ?' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಟೋ ಪ್ರಯಾಣ ದರ ನಿಗದಿಪಡಿಸುವಾಗ ಚಾಲಕರ ಅಭಿಪ್ರಾಯವನ್ನೇ ಕೇಳುವುದಿಲ್ಲ. ದರ ಪರಿಷ್ಕರಣೆಯ ನಿರ್ಧಾರಗಳಿಂದಲೂ ಚಾಲಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪ್ರಕಾಶ್ ದೂರಿದ್ದಾರೆ.

ಆಟೋ ರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಅವರು ಮಾತನಾಡಿ, ಕರ್ನಾಟಕದಾದ್ಯಂತ ಒಂದೇ ರೀತಿಯ ಆಟೋ ಪ್ರಯಾಣ ದರ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕವಾಗಿ ಪ್ರಯಾಣ ದರ ನಿಗದಿಪಡಿಸುವ ಅಧಿಕಾರ ನೀಡಬಾರದು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X