

ಬೆಂಗಳೂರು: ಬೆಂಗಳೂರಿನ ಮೇಖ್ರಿ ವೃತ್ತದಲ್ಲಿ 1.74 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಚಾಲನೆ ನೀಡಿದ್ದು, ಈಗಾಗಲೇ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಹಾಗೂ ನಮ್ಮ ಮೆಟ್ರೋದ ಪ್ರಸ್ತಾವಿತ ಕೆಂಪು ಮಾರ್ಗಕ್ಕೆ ಮೇಲ್ಸೇತುವೆಯಿಂದ ಅಡ್ಡಿಯಾಗುವ ಸಾಧ್ಯತೆ ಸೇರಿದಂತೆ ಹಲವು ಪ್ರಮುಖ ಅಂಶಗಳ ಪರಿಶೀಲನೆ ಇನ್ನೂ ನಡೆಯುತ್ತಿದೆ.
ಯೋಜನೆಯ ರೂಪುರೇಷೆ ಸಿದ್ಧಪಡಿಸುವ ಹಂತದಲ್ಲೇ ಈ ಎಲ್ಲ ಅಂಶಗಳನ್ನು ಹೇಗೆ ಪರಿಗಣಿಸಲಾಗಿದೆ ಮತ್ತು ವಿವರವಾದ ಯೋಜನಾ ವರದಿಯಲ್ಲಿ (ಡಿಪಿಆರ್) ಇವುಗಳಿಗೆ ಎಷ್ಟರಮಟ್ಟಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂಬ ಪ್ರಶ್ನೆಗಳು ಈಗ ಎದ್ದಿವೆ.
ಡಿಪಿಆರ್ ಲಭ್ಯವಿದೆ ಎಂದು ಬಿಡಿಎ ಹೇಳುತ್ತಿದ್ದರೂ, ಅದರ ಪ್ರತಿಕ್ರಿಯೆಗಳು ಕೆಲವು ಪ್ರಮುಖ ತಾಂತ್ರಿಕ ವಿಚಾರಗಳ ಪರಿಶೀಲನೆ ಇನ್ನೂ ಬಾಕಿ ಇರುವುದನ್ನು ಸೂಚಿಸುತ್ತವೆ. ಡಿಪಿಆರ್ ಸಾರ್ವಜನಿಕವಾಗಿ ಲಭ್ಯವಿಲ್ಲ ಎಂಬುದು ಗಮನಾರ್ಹ.
ಮೆಟ್ರೋದ ಪ್ರಸ್ತಾವಿತ ಕೆಂಪು ಮಾರ್ಗ ಮತ್ತು ಮೇಲ್ಸೇತುವೆ ನಡುವೆ ಉಂಟಾಗಬಹುದಾದ ಸಂಭಾವ್ಯ ಸಂಘರ್ಷ ಪ್ರಮುಖ ಆತಂಕಗಳಲ್ಲಿ ಒಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಡಿಎ, 'ಮೇಲ್ಸೇತುವೆಯ ಕಂಬಗಳ ಸ್ಥಳ, ಅಡಿಪಾಯ ಮತ್ತು ರಚನಾತ್ಮಕ ಅಂತರವನ್ನು ಬಿಎಂಆರ್‌ಸಿಎಲ್‌ನ ಸಂಬಂಧಿತ ಮಾರ್ಗ ನಕ್ಷೆಗಳ ಆಧಾರದಲ್ಲಿ ಪರಿಶೀಲಿಸಬೇಕಿದೆ. ಅಗತ್ಯವಿದ್ದಲ್ಲಿ ತಾಂತ್ರಿಕ ಸಾಧ್ಯತೆ ಮತ್ತು ಅನುಮೋದನೆಗೆ ಒಳಪಟ್ಟು ಬಿಎಂಆರ್‌ಸಿಎಲ್ ಜೊತೆ ಸಮಾಲೋಚಿಸಿ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗುವುದು' ಎಂದು ತಿಳಿಸಿದೆ.
ಮೆಟ್ರೋ ಮಾರ್ಗಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ಅಂತಿಮ ದೃಢೀಕರಣವನ್ನು ಅನುಮೋದಿತ ನಕ್ಷೆಗಳು ಹಾಗೂ ಬಿಎಂಆರ್‌ಸಿಎಲ್‌ನ ತಾಂತ್ರಿಕ ಅಭಿಪ್ರಾಯ ಮತ್ತು ಅನುಮತಿಯ ಆಧಾರದ ಮೇಲೆ ನೀಡಲಾಗುವುದು ಎಂದು ಬಿಡಿಎ ಸ್ಪಷ್ಟಪಡಿಸಿದೆ.
ಇನ್ನು 725 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಭೂಸ್ವಾಧೀನಕ್ಕಾಗಿ 170 ಕೋಟಿ ರೂ. ಮೀಸಲಿಡಲಾಗಿದೆ. ಯಾವ ಪ್ರದೇಶಗಳಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಬಿಡಿಎ, 'ಮುಖ್ಯ ಮೇಲ್ಸೇತುವೆಯನ್ನು ಈಗಿರುವ ಬಳ್ಳಾರಿ ರಸ್ತೆ ಮಾರ್ಗದಲ್ಲೇ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಸಂಪರ್ಕ ರಸ್ತೆಗಳು, ಇಳಿಜಾರು ಮಾರ್ಗಗಳು, ವೃತ್ತಗಳ ಸಂಪರ್ಕ, ಜಂಕ್ಷನ್ ಸುಧಾರಣೆ ಹಾಗೂ ಇತರ ಪೂರಕ ಸೌಲಭ್ಯಗಳಿಗಾಗಿ ಹೆಚ್ಚುವರಿ ಭೂಮಿ ಅಗತ್ಯವಾಗಬಹುದು' ಎಂದು ತಿಳಿಸಿದೆ.
ಭೂಸ್ವಾಧೀನ ನಡೆಯಲಿರುವ ನಿಖರ ಸ್ಥಳಗಳು, ಸರ್ವೆ ಸಂಖ್ಯೆಗಳು, ಭೂಮಿಯ ವಿಸ್ತೀರ್ಣ ಮತ್ತು ಪರಿಹಾರದ ಮೊತ್ತ ಸೇರಿದಂತೆ 170 ಕೋಟಿ ರೂ. ಮೀಸಲಾತಿಯ ವಿವರಗಳನ್ನು ಅನುಮೋದಿತ ಭೂಸ್ವಾಧೀನ ವೇಳಾಪಟ್ಟಿ ಹಾಗೂ ಮಂಜೂರಾದ ಅಂದಾಜು ಪಟ್ಟಿಯಿಂದ ದೃಢಪಡಿಸಬೇಕಿದೆ ಎಂದು ಹೇಳಿದೆ.
ಇದರಿಂದ ಸಂಪರ್ಕ ರಸ್ತೆಗಳು ಹಾಗೂ ಇತರ ಪೂರಕ ಕಾಮಗಾರಿಗಳಿಗೆ ಎಷ್ಟು ಭೂಮಿ ಬೇಕಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಮೇಲ್ಸೇತುವೆ ಕಾಮಗಾರಿ ಮಾತ್ರ ಮುಂದುವರಿದಿದೆ.
ಇದೇ ವೇಳೆ, ಎರಡೂ ಯೋಜನೆಗಳನ್ನು ಸಮಗ್ರ ರಸ್ತೆ ಮಾರ್ಗವಾಗಿ ಪರಿಗಣಿಸಿ ಸ್ವತಂತ್ರ ವೈಜ್ಞಾನಿಕ ಸಂಚಾರ ಪರಿಣಾಮ ಅಧ್ಯಯನ ನಡೆಸುವಂತೆ ಬಿಡಿಎ ಸೆಪ್ಟೆಂಬರ್ 16ರಂದು ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಮನವಿ ಮಾಡಿತ್ತು. ಇದಕ್ಕೆ ಸಂಬಂಧಿಸಿದ ಅಧಿಕೃತ ಪ್ರಸ್ತಾವನೆಯನ್ನು ಐಐಎಸ್‌ಸಿ ಅಕ್ಟೋಬರ್ 21ರಂದು ಸಲ್ಲಿಸಿದ್ದು, ಅಧ್ಯಯನಕ್ಕೆ ಮೂರು ತಿಂಗಳ ಕಾಲಾವಕಾಶ ಸೂಚಿಸಿದೆ.
ಆದರೆ, ಈ ಪ್ರಸ್ತಾವನೆಗೆ ಇನ್ನೂ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ದೊರೆಯುವ ಪ್ರಕ್ರಿಯೆ ಬಾಕಿ ಇರುವಾಗಲೇ ಮೇಲ್ಸೇತುವೆ ಕಾಮಗಾರಿ ಮುಂದುವರಿದಿದೆ ಎಂದು ಬಿಡಿಎ ತಿಳಿಸಿದೆ.
ಇದು ಯೋಜನೆಯ ಸಮಗ್ರ ಸಂಚಾರ ಅಧ್ಯಯನ ಮತ್ತು ತಾಂತ್ರಿಕ ಪರಿಶೀಲನೆ ಪೂರ್ಣಗೊಳ್ಳುವ ಮೊದಲೇ ಕಾಮಗಾರಿ ಆರಂಭಿಸಿರುವ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.