ಬೆಂಗಳೂರು: ಪೆರೋಲ್ ಅವಧಿ ಮುಗಿದರೂ ಜೈಲಿಗೆ ವಾಪಸಾಗದ ಕೈದಿ; ಇಬ್ಬರು ಶ್ಯೂರಿಟಿದಾರರ ವಿರುದ್ಧ FIR ದಾಖಲು..!

ಕೊಲೆ ಪ್ರಕರಣದ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಮತ್ತೊಂದು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಸಾಕ್ಷ್ಯ ನಾಶಪಡಿಸಿದ ಪ್ರಕರಣದ ಸೆಕ್ಷನ್ 201ರ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.
parappana agrahara jail
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
Updated on: 

ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 32 ವರ್ಷದ ಕೈದಿಯೊಬ್ಬ 60 ದಿನಗಳ ಪೆರೋಲ್ ಅವಧಿ ಮುಗಿದ ನಂತರವೂ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಹಿಂತಿರುಗದೆ ತಲೆಮರೆಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಪರಾರಿಯಾಗಿರುವ ಕೈದಿಯನ್ನು ಎ. ಹುಸೇನ್ ಅಲಿಯಾಸ್ ನಸ್ರುಲ್ ಹುಸೇನ್ (ಕೈದಿ ಸಂಖ್ಯೆ 12440) ಎಂದು ಗುರುತಿಸಲಾಗಿದೆ.

ಬೆಂಗಳೂರು ಕೇಂದ್ರ ಕಾರಾಗೃಹದ ಪ್ರಭಾರ ಮುಖ್ಯ ಅಧೀಕ್ಷಕ ಬಿ.ಆರ್. ಅಂದಾನಿ ಸಲ್ಲಿಸಿರುವ ದೂರಿನ ಪ್ರಕಾರ, 2021ರ ಅಕ್ಟೋಬರ್ 16ರಂದು ನ್ಯಾಯಾಲಯವು ಹುಸೇನ್‌ಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 364(ಎ) ಅಡಿಯಲ್ಲಿ ಅಪಹರಣ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು.

ಇದಲ್ಲದೆ, ಕೊಲೆ ಪ್ರಕರಣದ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಮತ್ತೊಂದು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಸಾಕ್ಷ್ಯ ನಾಶಪಡಿಸಿದ ಪ್ರಕರಣದ ಸೆಕ್ಷನ್ 201ರ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿತ್ತು.

parappana agrahara jail
ಫೋನ್ ಕೊಟ್ಟು ಸಹಾಯ ಮಾಡಿದ್ದೇ ತಪ್ಪಾಯ್ತು! ಕೊಲೆಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆ ಜೀವಂತವಾಗಿ ಪತ್ತೆ, ಮಾಡದ ತಪ್ಪಿಗೆ 2.5 ವರ್ಷ ಜೈಲುವಾಸ ಅನುಭವಿಸಿದ ಯುವಕ..!

2026ರ ಸೆಪ್ಟೆಂಬರ್ 10ರಂದು ಜಾಮೀನುದಾರರು ಭದ್ರತಾ ಬಾಂಡ್ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಅವರಿಗೆ 60 ದಿನಗಳ ಪೆರೋಲ್ ಮಂಜೂರು ಮಾಡಲಾಗಿತ್ತು. ನವೆಂಬರ್ 8ರಂದು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಮರಳಬೇಕಿತ್ತು. ಆದರೆ, ನಿಗದಿತ ದಿನಾಂಕದಂದು ಅವರು ಶರಣಾಗದೆ ನಾಪತ್ತೆಯಾಗಿದ್ದಾರೆಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೆರೋಲ್ ಷರತ್ತುಗಳನ್ನು ಪಾಲಿಸುವಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಮೂಲದ ಎಸ್. ಗಂಗಯ್ಯ (50) ಮತ್ತು ಡಿ. ಕಪ್ಪಣ್ಣ (35) ಎಂಬ ಇಬ್ಬರು ಜಾಮೀನುದಾರರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಕಾರಾಗೃಹದ ಮುಖ್ಯ ಅಧೀಕ್ಷಕರು ದೂರಿನಲ್ಲಿ ಕೋರಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಕೈದಿ ಹುಸೇನ್ ಹಾಗೂ ಆತನಿಗೆ ಜಾಮೀನು ನೀಡಿದ್ದ ಇಬ್ಬರು ಶ್ಯೂರಿಟಿದಾರರಾದ ಎಸ್. ಗಂಗಯ್ಯ ಮತ್ತು ಡಿ. ಕಪ್ಪಣ್ಣ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಕೈದಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X