KPSC ನೇಮಕಾತಿ ಹಗರಣ: ಆರೋಪಿಗಳಿಗೆ ED ಶಾಕ್, 1.22 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ!

ಹಗರಣದ ಆರೋಪಿಗಳಾದ ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಮಾಜಿ ಸದಸ್ಯೆ ಗೀತಾ ಬಿ.ವಿ. ಶಿವಮೂರ್ತಿ ಮತ್ತು ಐಎಎಸ್ ಅಧಿಕಾರಿ, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ..
KPSC SCAM
ಕೆಪಿಎಸ್ ಸಿ ಹಗರಣ
Updated on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದೆ.

ಹಗರಣದ ಆರೋಪಿಗಳಾದ ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಮಾಜಿ ಸದಸ್ಯೆ ಗೀತಾ ಬಿ.ವಿ. ಶಿವಮೂರ್ತಿ ಮತ್ತು ಐಎಎಸ್ ಅಧಿಕಾರಿ, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸೇರಿದ 1.22 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ನವೆಂಬರ್ 13ರಂದು ಆಸ್ತಿ ಜಪ್ತಿ ಆದೇಶ ಹೊರಡಿಸಲಾಗಿದೆ ಎಂದು ಇಡಿ ಶನಿವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

KPSC SCAM
ಕೆಪಿಎಸ್‌ಸಿ 'ಅಕ್ರಮ' ತನಿಖೆ: ಎಸ್‌ಐಟಿಗೆ ನೇಮಕಗೊಂಡಿದ್ದ ಐಪಿಎಸ್ ಅಧಿಕಾರಿ ದಿಢೀರ್ ವರ್ಗಾವಣೆ; ಅನುಮಾನ ಮೂಡಿಸಿದ ಸರ್ಕಾರದ ನಡೆ

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಲಂಚ ವಸೂಲಿ ಆರೋಪ

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಹಾಗೂ ಕೆಪಿಎಸ್‌ಸಿ ನೇಮಕಾತಿಯಲ್ಲಿ ನಕಲಿ ಪ್ರಮಾಣಪತ್ರ ಸಲ್ಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪ್ರಕರಣಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು.

ತನಿಖೆಯ ಪ್ರಕಾರ, ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು, ಸದಸ್ಯರು ಮತ್ತು ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಗಂಗ್ವಾರ್ ಅವರು ಬಸವರಾಜ್ ಕನ್ನಾಳೆ ಸೇರಿದಂತೆ ಇತರರೊಂದಿಗೆ ಸೇರಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ಇಡಿ ಆರೋಪಿಸಿದೆ.

ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ಮತ್ತು ಸರಿಯಾದ ಉತ್ತರಗಳನ್ನು ಸೋರಿಕೆ ಮಾಡುವುದು, ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಉತ್ತರ ಕೀ ಒದಗಿಸುವುದು ಹಾಗೂ 1:3 ಸಂದರ್ಶನ ಅರ್ಹತಾ ಪಟ್ಟಿಯಲ್ಲಿ ಅಂಕಗಳನ್ನು ತಿರುಚುವ ಮೂಲಕ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇಡಿ ತಿಳಿಸಿದೆ.

ಪರೀಕ್ಷೆಗೂ ಮುನ್ನವೇ 10 ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ

2026ರ ಜನವರಿ 7ರಂದು ಜ್ಞಾನೇಂದ್ರ ಗಂಗ್ವಾರ್ ಅವರು ಪ್ರಶ್ನೆಪತ್ರಿಕೆಯಲ್ಲಿನ ಸರಿಯಾದ ಉತ್ತರಗಳನ್ನು ತಮ್ಮ ಆಪ್ತ ಬಸವರಾಜ್ ಕನ್ನಾಳೆಗೆ ಸೋರಿಕೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ.

ಜನವರಿ 8ರಂದು ಬೆಂಗಳೂರಿನ ಹೊರವಲಯದ ವಿಲ್ಲಾವೊಂದರಲ್ಲಿ ಕನ್ನಾಳೆ ಈ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು 10 ಅಭ್ಯರ್ಥಿಗಳಿಗೆ ಹಂಚಿದ್ದಾನೆ.

ಆಯ್ಕೆಯ ಖಾತರಿ ನೀಡುವ ನೆಪದಲ್ಲಿ ಪ್ರತಿ ಅಭ್ಯರ್ಥಿಯಿಂದ 20ರಿಂದ 40 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. ಕೆಲವು ಅಭ್ಯರ್ಥಿಗಳಿಂದ ಮುಂಗಡ ಹಣ ಪಡೆಯಲಾಗಿತ್ತು. ಉಳಿದ ಹಣಕ್ಕೆ ಭದ್ರತೆಯಾಗಿ ಖಾಲಿ ಚೆಕ್‌ಗಳು ಮತ್ತು ಪ್ರಾಮಿಸರಿ ನೋಟ್‌ಗಳನ್ನು ಪಡೆಯಲಾಗಿತ್ತು ಎಂದು ಇಡಿ ತಿಳಿಸಿದೆ.

KPSC SCAM
ಕೆಪಿಎಸ್ ಸಿ ಕಾರ್ಯದರ್ಶಿಯಿಂದ ಅಧಿಕಾರ ದುರ್ಬಳಕೆ, ಏಕಪಕ್ಷೀಯ ಟೆಂಡರ್: ಆಯೋಗದ ಅಧ್ಯಕ್ಷರ ಆರೋಪ

80 ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಿ ಹಂಚಿಕೆ

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಸಾಹುಕಾರ್ ಸೂಚನೆಯಂತೆ, ಪರೀಕ್ಷಾ ನಿಯಂತ್ರಕರಾಗಿದ್ದ ಗಂಗ್ವಾರ್ ಅವರು ಆರು ಅಭ್ಯರ್ಥಿಗಳಿಗೆ 80 ಪ್ರಶ್ನೆಗಳ ಸರಿಯಾದ ಉತ್ತರಗಳನ್ನು ಸಿದ್ಧಪಡಿಸಿದ್ದರು ಎಂದು ಇಡಿ ಆರೋಪಿಸಿದೆ. ಈ ಆರು ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಗೀತಾ ಅವರು ನೀಡಿದ್ದರು.

ಪರೀಕ್ಷಾ ಕೇಂದ್ರಗಳ ಆಸನ ವ್ಯವಸ್ಥೆ ಮತ್ತು ಅಭ್ಯರ್ಥಿಗಳ ಕ್ರಮ ಬದಲಾವಣೆಯ ಪಟ್ಟಿಗಳನ್ನು ಬಳಸಿಕೊಂಡು ಉತ್ತರಗಳನ್ನು ಸಿದ್ಧಪಡಿಸಿ ಜನವರಿ 8ರಂದು ಗೀತಾ ಅವರಿಗೆ ನೀಡಲಾಗಿತ್ತು.

ಇದಕ್ಕೆ ಪ್ರತಿಯಾಗಿ, ತಮಗೆ ಬೇಕಾದ ಅಭ್ಯರ್ಥಿಯೊಬ್ಬರಿಗೆ ಕೆಎಎಸ್ ಪರೀಕ್ಷೆಯ ಸಂದರ್ಶನದಲ್ಲಿ ಉತ್ತಮ ಅಂಕ ಕೊಡಿಸುವುದಾಗಿ ಸಾಹುಕಾರ್ ಭರವಸೆ ನೀಡಿದ್ದರು ಎನ್ನಲಾಗಿದೆ.

ಈ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳ ಒಎಂಆರ್ ಉತ್ತರ ಪತ್ರಿಕೆಗಳು ಕೆಪಿಎಸ್‌ಸಿ ಆರಂಭದಲ್ಲಿ ಪ್ರಕಟಿಸಿದ್ದ ಉತ್ತರ ಕೀಗೆ ಹೊಂದಿಕೆಯಾಗಿದ್ದವು. ಆದರೆ, ನಂತರ ಪರಿಷ್ಕೃತ ಉತ್ತರ ಕೀಲಿಯಲ್ಲಿ ಕೆಲವು ಉತ್ತರಗಳು ತಪ್ಪು ಎಂದು ಕಂಡುಬಂದಿತ್ತು ಎಂದು ಇಡಿ ವಿವರಿಸಿದೆ.

ಸಾಹುಕಾರ್ ಅವರ ನಿವಾಸದಲ್ಲಿ ಅವರದೇ ಕೈಬರಹದಲ್ಲಿದ್ದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳು ಮತ್ತು ಪರೀಕ್ಷಾ ಕೇಂದ್ರಗಳ ವಿವರಗಳಿದ್ದ ನೋಟ್‌ಬುಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

KPSC SCAM
ಕೆಪಿಎಸ್​ಸಿ ಪರೀಕ್ಷೆಯಲ್ಲಿ ಅಂಕ ಕಡಿತಕ್ಕೆ ವಿರೋಧ: ಮುಖ್ಯಮಂತ್ರಿ ಬೊಮ್ಮಾಯಿಗೆ ಹೆಚ್.ಡಿ.ದೇವೇಗೌಡ ಪತ್ರ

10 ಲಕ್ಷ, 20 ಲಕ್ಷ ರೂ. ನಗದು ಸಂಗ್ರಹ

ಒಬ್ಬ ಅಭ್ಯರ್ಥಿಯೊಂದಿಗೆ 20 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದ ಸಾಹುಕಾರ್, ಆತನಿಂದ 10 ಲಕ್ಷ ರೂ. ನಗದು ಪಡೆದಿದ್ದರು. ಮತ್ತೊಬ್ಬ ಅಭ್ಯರ್ಥಿಯಿಂದ 40 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದ ಗೀತಾ, 20 ಲಕ್ಷ ರೂ. ನಗದು ಪಡೆದಿದ್ದರು ಎಂದು ಇಡಿ ಆರೋಪಿಸಿದೆ.

ಲಂಚದ ಹಣವನ್ನು ನಗದು ರೂಪದಲ್ಲಿ ಮಾತ್ರವಲ್ಲದೆ, ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿರುವ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕವೂ ಸಂಗ್ರಹಿಸಲಾಗಿತ್ತು.

ಮೂರನೇ ವ್ಯಕ್ತಿಗಳ ಖಾತೆಗಳನ್ನು ಬಳಸಿಕೊಂಡು ನಕಲಿ ಉಳಿತಾಯ ಖಾತೆಗಳ ವಹಿವಾಟಿನಂತೆ ಹಣವನ್ನು ತೋರಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಲಂಚದ ಹಣದಲ್ಲಿ ಚಿನ್ನಾಭರಣ ಖರೀದಿ, ವಿಮಾನ ಪ್ರಯಾಣ

ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಜ್ಞಾನೇಂದ್ರ ಗಂಗ್ವಾರ್ ಅವರ ಅನುಕೂಲಕ್ಕಾಗಿ ಮೂರನೇ ವ್ಯಕ್ತಿಯ ಹೆಸರಿನಲ್ಲಿ 52.30 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಲಾಗಿತ್ತು ಎಂದು ಇಡಿ ತಿಳಿಸಿದೆ.

ಅಲ್ಲದೆ, ಗಂಗ್ವಾರ್, ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ವಿಮಾನ ಪ್ರಯಾಣಕ್ಕೆ ತಗುಲಿದ 13.31 ಲಕ್ಷ ರೂ. ವೆಚ್ಚವನ್ನು ಬಸವರಾಜ್ ಕನ್ನಾಳೆ ಮೂರನೇ ವ್ಯಕ್ತಿಗಳ ಬ್ಯಾಂಕ್ ಖಾತೆಗಳ ಮೂಲಕ ಪಾವತಿಸಿದ್ದರು ಎಂದು ಇಡಿ ಆರೋಪಿಸಿದೆ. ಈ ಪ್ರಕರಣದಲ್ಲಿ ಅಕ್ರಮ ಹಣದ ಮೂಲ, ವಹಿವಾಟು ಮತ್ತು ಆರೋಪಿಗಳಿಗೆ ಸೇರಿದ ಆಸ್ತಿಗಳ ಕುರಿತು ಇಡಿ ತನಿಖೆ ಮುಂದುವರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X