'ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಸೌಲಭ್ಯ ಬೇಡ': ಸ್ವಂತ ಖರ್ಚಿನಲ್ಲೇ ಭಾಗವಹಿಸುವುದಾಗಿ ಶಾಸಕ ಶರಣಗೌಡ ಕಂದಕೂರು ಪತ್ರ

ವಸತಿ, ಊಟ ಸೇರಿದಂತೆ ಯಾವುದೇ ಭತ್ಯೆ ಅಥವಾ ಸೌಲಭ್ಯ ಪಡೆಯದೆ ಸ್ವಂತ ಖರ್ಚಿನಲ್ಲೇ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
Gurmitkal MLA Sharanagouda Kandakur
ಶಾಸಕ ಶರಣಗೌಡ ಕಂದಕೂರು
Updated on: 

ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳಿಗೆ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು, ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ.

ವಸತಿ, ಊಟ ಸೇರಿದಂತೆ ಯಾವುದೇ ಭತ್ಯೆ ಅಥವಾ ಸೌಲಭ್ಯ ಪಡೆಯದೆ ಸ್ವಂತ ಖರ್ಚಿನಲ್ಲೇ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ನವೆಂಬರ್ 18, 2026ರಂದು ಬರೆದಿರುವ ಪತ್ರದಲ್ಲಿ ಕಂದಕೂರು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಉದ್ದೇಶ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದು, ಈ ಭಾಗಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು ಹಾಗೂ ಪ್ರಾದೇಶಿಕ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿದೆ ಎಂದು ಹೇಳಿದ್ದಾರೆ.

ಆದರೆ, ಕಳೆದ ಬಾರಿ ನಡೆದ ಅಧಿವೇಶನದಲ್ಲಿ ಚರ್ಚೆಯಾದ ವಿಷಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಈ ಭಾಗದ ಜನರಿಗೆ ಅಧಿವೇಶನ ಕೇವಲ ಕಣ್ಣೊರೆಸುವ ತಂತ್ರ ಎಂಬ ಭಾವನೆ ಮೂಡಿದೆ. ಇದನ್ನು ತಾವು ಸದನದಲ್ಲೇ ಬಲವಾಗಿ ವಿರೋಧಿಸಿದ್ದಾಗಿ ತಿಳಿಸಿದ್ದಾರೆ.

ಕಳೆದ ಬಾರಿಯ ಚಳಿಗಾಲದ ಅಧಿವೇಶನದಲ್ಲಿಯೂ ಸರ್ಕಾರದಿಂದ ವಸತಿ, ಊಟ ಅಥವಾ ಯಾವುದೇ ಭತ್ಯೆ ಪಡೆಯದೆ, ಸಂಪೂರ್ಣ ಖರ್ಚನ್ನು ಸ್ವತಃ ಭರಿಸಿ ಅಧಿವೇಶನದಲ್ಲಿ ಭಾಗವಹಿಸಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

Gurmitkal MLA Sharanagouda Kandakur
ಶೀಘ್ರದಲ್ಲೇ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ; ಸಿದ್ದರಾಮಯ್ಯಗೆ ಅಗೌರವ ತೋರಿಲ್ಲ: ಪರಮೇಶ್ವರ್ ಸ್ಪಷ್ಟನೆ

ರೈತರ ಸಂಕಷ್ಟ, ಜನರ ವಲಸೆ ಬಗ್ಗೆ ಕಳವಳ

ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರಿಗೆ ಬರಗಾಲ ಬದುಕಿನ ಭಾಗವಾಗಿಬಿಟ್ಟಿದೆ. ರೈತರು ಕಷ್ಟಪಟ್ಟು ಬಿತ್ತಿದ ಬೆಳೆ ಕೈಕೊಟ್ಟರೆ, ಬಿತ್ತನೆ ಮಾಡಿದ ಬೀಜವೇ ಮಣ್ಣಿನಲ್ಲಿ ವ್ಯರ್ಥವಾದರೆ ರೈತರು ವಿಷ ಕುಡಿಯುವುದನ್ನು ಬಿಟ್ಟು ಬೇರೆ ದಾರಿ ಏನು? ಎಂದು ಕಂದಕೂರು ಪ್ರಶ್ನಿಸಿದ್ದಾರೆ.

ಹಸಿರು ಮೇವು, ಉದ್ಯೋಗ, ಶಾಲೆ, ಆಸ್ಪತ್ರೆ ಮತ್ತು ಕುಡಿಯುವ ನೀರಿನಂತಹ ಮೂಲಸೌಲಭ್ಯಗಳಿಲ್ಲದೆ ಜನರು ಹೇಗೆ ಬದುಕಬೇಕು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸಮಸ್ಯೆಗಳ ನಡುವೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಜನರು ಬಸವಳಿದಿದ್ದಾರೆ.

ಸಾಲದ ಹೊರೆ ಹೊತ್ತು, ಮಕ್ಕಳನ್ನೇ ಮಾರುವಂತಹ ಪರಿಸ್ಥಿತಿಗೆ ತಲುಪಿ, ಬದುಕಿಗಾಗಿ ಬೆಂಗಳೂರು, ಮುಂಬೈ, ಪುಣೆ ಮತ್ತು ಹೈದರಾಬಾದ್‌ಗೆ ವಲಸೆ ಹೋಗುತ್ತಿರುವ ಜನರ ಸ್ಥಿತಿ ಕಂಡರೆ ಯಾರ ಮನಸ್ಸಾದರೂ ಕರಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಜನರಿಂದ ಮತ ಪಡೆದು, ಭರವಸೆಗಳ ಗೋಪುರ ಕಟ್ಟಿ ಜನಪ್ರತಿನಿಧಿಯಾಗಿದ್ದೇವೆ. ಆದರೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ನಾವು ಶಾಸಕರಾಗಿರುವುದರ ಉದ್ದೇಶವೇನು? ಈ ನಿರಾಶೆಯ ಭಾವನೆ ನನ್ನನ್ನು ಕಾಡುತ್ತಿದೆ" ಎಂದು ಅವರು ಹೇಳಿದ್ದಾರೆ.

Gurmitkal MLA Sharanagouda Kandakur
ಕಬ್ಬು ಬೆಳೆಗಾರರ ಅನಿರ್ದಿಷ್ಟಾವಧಿ ಪ್ರತಿಭಟನೆ ಹಿನ್ನಲೆ: ಸಚಿವ ರುದ್ರಪ್ಪ ಲಮಾಣಿ ನಿವಾಸದ ಸುತ್ತಮುತ್ತ ನಿಷೇಧಾಜ್ಞೆ ಜಾರಿ!

ಕೋಟ್ಯಂತರ ರೂ. ಖರ್ಚು ಮಾಡಿ ಪ್ರಯೋಜನವಿಲ್ಲದ ಅಧಿವೇಶನ ಏಕೆ?

ಕಳೆದ ವರ್ಷದ ಅಧಿವೇಶನ ಮುಗಿದು ಮತ್ತೊಂದು ಅಧಿವೇಶನ ಬಂದರೂ ಈ ಭಾಗದ ಜನರಿಗೆ ಯಾವುದೇ ಪ್ರಯೋಜನವಾಗದಿದ್ದರೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಧಿವೇಶನ ನಡೆಸುವುದರಿಂದ ಏನು ಪ್ರಯೋಜನ ಎಂದು ಕಂದಕೂರು ಪ್ರಶ್ನಿಸಿದ್ದಾರೆ.

ಅಧಿವೇಶನದಿಂದ ಜನರಿಗೆ ಲಾಭವಾಗದಿದ್ದರೆ ತೆರಿಗೆದಾರರ ಹಣ ವ್ಯರ್ಥವಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೆ, ತಮ್ಮ ವೈಯಕ್ತಿಕ ಖರ್ಚಿನಲ್ಲೇ ಅಗತ್ಯ ವ್ಯವಸ್ಥೆ ಮಾಡಿಕೊಂಡು ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಷರತ್ತಿನೊಂದಿಗೆ ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X