ರಾಜ್ಯ

ಅಡ್ವಾನ್ಸ್ ವಾಪಸ್ ಕೊಟ್ಟಿದ್ದಕ್ಕೆ ವಲಸೆ ಕಾರ್ಮಿಕರಿಗೆ ಬಂದೂಕು ತೋರಿಸಿ, ದೊಣ್ಣೆಯಿಂದ ಮನಸೋ ಇಚ್ಛೆ ಥಳಿಸಿದ ಎಸ್ಟೇಟ್ ಮಾಲೀಕ! Video ವೈರಲ್

ಅಡ್ವಾನ್ಸ್ ವಾಪಸ್ ಕೊಟ್ಟಿದ್ದಕ್ಕೆ ವಲಸೆ ಕಾರ್ಮಿಕರಿಗೆ ಬಂದೂಕು ತೋರಿಸಿ, ದೊಣ್ಣೆಯಿಂದ ಮನಸೋ ಇಚ್ಛೆ ಥಳಿಸಿದ ಎಸ್ಟೇಟ್ ಮಾಲೀಕ! Video ವೈರಲ್
ಚಿಕ್ಕಮಗಳೂರಿನಲ್ಲಿ ಅಮಾನವೀಯ ಕೃತ್ಯ — Online Desk
Published On :

ಬಸಗೂಡು (ಚಿಕ್ಕಮಗಳೂರು): ಚಿಕ್ಕಮಗಳೂರು ತಾಲೂಕಿನ ಬಸಗೂಡು ಗ್ರಾಮದಲ್ಲಿ ಕಾಫಿ ಎಸ್ಟೇಟ್ ಮಾಲೀಕ ಭರತ್ ಎಂಬಾತ ಒಂದು ಕೈಯಲ್ಲಿ ಬಂದೂಕು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಹಿಡಿದು ವಲಸೆ ಕಾರ್ಮಿಕರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ತಮಿಳುನಾಡು ಮೂಲದ ವಲಸೆ ಕಾರ್ಮಿಕರು ತಾವು ಪಡೆದಿದ್ದ ಮುಂಗಡ ಹಣವನ್ನು ವಾಪಸ್ ನೀಡಿ, ಬೇರೆಡೆ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದಕ್ಕೆ ಎಸ್ಟೇಟ್ ಮಾಲೀಕ ಭರತ್ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಜೀತದಾಳುಗಳಂತೆ ಕೂಡಿಹಾಕಿ, ಮಹಿಳೆಯರು ಮತ್ತು ಮಕ್ಕಳೆನ್ನದೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಮುಂದುವರೆದು, ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿ ಭರತ್ ಒಂದು ಕೈಯಲ್ಲಿ ಬಂದೂಕು ಹಾಗೂ ಇನ್ನೊಂದು ಕೈಯಲ್ಲಿ ಮರದ ದೊಣ್ಣೆ ಹಿಡಿದು 4 ರಿಂದ 5 ಮಂದಿ ತಮಿಳುನಾಡು ಮೂಲದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಮೊದಲು ಪುರುಷ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ, ನಂತರ ಮಹಿಳಾ ಕಾರ್ಮಿಕರೊಬ್ಬರು ನೆಲಕ್ಕೆ ಬಿದ್ದರೂ ಬಿಡದೆ ದೊಣ್ಣೆಯಿಂದ ಮನಸೋಇಚ್ಛೆ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು, ಹಲ್ಲೆ ನಡೆಸುವ ವೇಳೆ ಆರೋಪಿಯು ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, "ಸಾವಿರಾರು ಜನರಿಗೆ ಅನ್ನ ನೀಡುವ ಎಸ್ಟೇಟ್ ಮಾಲೀಕರಿಗೆ ಚಪ್ಪಲಿ ತೋರಿಸುತ್ತೀರಾ?" ಎಂದು ಗದರಿಸುತ್ತಾ ಬಂದೂಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ಇನ್ನು, ಹಲ್ಲೆಯಿಂದ ಗಾಯಗೊಂಡಿರುವ ಮಹಿಳಾ ಕಾರ್ಮಿಕರಾದ ಮೀನಾ ಅವರು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಯ ವೇಳೆ ತಮ್ಮ ಚಿನ್ನದ ಕಿವಿಯೋಲೆ ಕಾಣೆಯಾಗಿದೆ ಎಂದೂ ಅವರು ದೂರಿದ್ದಾರೆ.

ಏತನ್ಮಧ್ಯೆ, ಘಟನೆ ನಡೆದ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಹೇಳಿಕೆ ಪಡೆದಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಚಿಕ್ಕಮಗಳೂರು ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.