ರಾಜ್ಯ

ನಮ್ಮ ಮುಂದಿನ ಗುರಿ ಹೊಸ ಗ್ರೀನ್‌ಫೀಲ್ಡ್ ಯೋಜನೆ ಬೆಂಗಳೂರಿನಾಚೆ ಕೈಗಾರಿಕೆ ಅಭಿವೃದ್ಧಿ, ಕನ್ನಡಿಗರಿಗೆ ಉದ್ಯೋಗ ಆದ್ಯತೆ: CM ಡಿ ಕೆ ಶಿವಕುಮಾರ್; Video

ನಮ್ಮ ಮುಂದಿನ ಗುರಿ ಹೊಸ ಗ್ರೀನ್‌ಫೀಲ್ಡ್ ಯೋಜನೆ ಬೆಂಗಳೂರಿನಾಚೆ ಕೈಗಾರಿಕೆ ಅಭಿವೃದ್ಧಿ, ಕನ್ನಡಿಗರಿಗೆ ಉದ್ಯೋಗ ಆದ್ಯತೆ: CM ಡಿ ಕೆ ಶಿವಕುಮಾರ್; Video
ಸಿಎಂ ಡಿ ಕೆ ಶಿವಕುಮಾರ್
Published On :

ಬೆಂಗಳೂರು: ರಾಜಧಾನಿ ಬೆಂಗಳೂರಿನಾಚೆಗೆ ಜಪಾನ್ ಕಂಪನಿಗಳಿಂದ ಹೂಡಿಕೆ ಆಕರ್ಷಿಸಲು ಹಾಗೂ ಕನ್ನಡಿಗರಿಗೆ ಉದ್ಯೋಗಾವಕಾಶಗಳಿಗೆ ಆದ್ಯತೆ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೂಡಿಕೆ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಅನ್ವೇಷಿಸಲು ಇತ್ತೀಚೆಗೆ ಮೂರು ದಿನಗಳ ಕಾಲ ಜಪಾನ್‌ಗೆ ಭೇಟಿ ನೀಡಿದ ಬಳಿಕ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಅಂತಾರಾಷ್ಟ್ರೀಯ ಹೂಡಿಕೆದಾರರಲ್ಲಿ ಭಾರತ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತ ಮತ್ತು ಕರ್ನಾಟಕದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ವಿದೇಶಿ ಹೂಡಿಕೆಗೆ ಕರ್ನಾಟಕ ಪ್ರಮುಖ ತಾಣವಾಗಿ ಗುರುತಿಸಿಕೊಂಡಿದೆ ಎಂದರು.

ನಾನು ಮೂರು ದಿನಗಳ ಕಾಲ ಜಪಾನ್‌ಗೆ ಭೇಟಿ ನೀಡಿದ್ದೆ. ಜಾಗತಿಕ ಹೂಡಿಕೆ ಇಲಾಖೆ ಸೇರಿದಂತೆ ಹಲವು ಕಡೆಗಳಲ್ಲಿ ನಾವು ರೋಡ್‌ಶೋಗಳನ್ನು ನಡೆಸುತ್ತಿದ್ದೇವೆ. ಅಮೆರಿಕ, ಯುರೋಪ್ ಮತ್ತು ಸೌದಿ ಅರೇಬಿಯಾದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ. ಅದರ ಬಗ್ಗೆ ವಿವರವಾಗಿ ಹೇಳುವುದಿಲ್ಲ ಎಂದು ಹೇಳಿದರು.

ನಗರಾಭಿವೃದ್ಧಿಯನ್ನು ಅಧ್ಯಯನ ಮಾಡಲು ಮತ್ತು ಶಿಸ್ತು ಹಾಗೂ ಸಮಯಪಾಲನೆಗೆ ಜಪಾನ್ ನೀಡುವ ಮಹತ್ವವನ್ನು ತಿಳಿದುಕೊಳ್ಳಲು 10 ಸದಸ್ಯರ ನಿಯೋಗ ಜಪಾನ್‌ಗೆ ಭೇಟಿ ನೀಡಿತ್ತು, ತಂತ್ರಜ್ಞಾನದಲ್ಲಿ ಅವರು ಅತ್ಯಂತ ಶಿಸ್ತುಬದ್ಧರಾಗಿದ್ದಾರೆ. ಭಾರತ, ಅದರಲ್ಲೂ ದಕ್ಷಿಣ ಭಾರತ ಮತ್ತು ಕರ್ನಾಟಕದ ಬಗ್ಗೆ ಹೆಚ್ಚಿನ ಆಸಕ್ತಿ ವ್ಯಕ್ತವಾಗುತ್ತಿದೆ. 10 ಮಂದಿಯ ನಿಯೋಗ ಜಪಾನ್‌ಗೆ ತೆರಳಿತ್ತು. ನಗರಾಭಿವೃದ್ಧಿ ಅಧ್ಯಯನ ಮಾಡುವುದು ನಮ್ಮ ಉದ್ದೇಶವಾಗಿತ್ತು. ಅಲ್ಲಿನವರು ಶಿಸ್ತು ಮತ್ತು ಸಮಯಪಾಲನೆಯ ಬಗ್ಗೆ ನಮಗೆ ತಿಳಿಸಿಕೊಟ್ಟರು ಎಂದರು.

ಭೇಟಿಯ ಮೊದಲ ದಿನ ತಾವು ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಹೊಸ ಹೂಡಿಕೆ ಹಾಗೂ ‘ಜಾಗತಿಕ ಕೈಗಾರಿಕಾ ಪಾಲುದಾರಿಕೆ’ ಕುರಿತು ಚರ್ಚಿಸಿದ್ದಾಗಿ ಶಿವಕುಮಾರ್ ಹೇಳಿದರು. ಕರ್ನಾಟಕದಲ್ಲಿ ಈಗಾಗಲೇ 525 ಜಪಾನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಮೊದಲ ದಿನ ನಾನು ಮತ್ತು ಎಂ.ಬಿ. ಪಾಟೀಲ್ ಅವರು ಹೊಸ ಹೂಡಿಕೆ ಹಾಗೂ ‘ಜಾಗತಿಕ ಕೈಗಾರಿಕಾ ಪಾಲುದಾರಿಕೆ’ ಕುರಿತು ಚರ್ಚಿಸಿದೆವು. ಕರ್ನಾಟಕದಲ್ಲಿ 525 ಜಪಾನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿ ವಿದೇಶಿ ಹೂಡಿಕೆಗೆ ಕರ್ನಾಟಕವನ್ನು ಪ್ರಮುಖ ರಾಜ್ಯವಾಗಿ ಪರಿಗಣಿಸುತ್ತಿದ್ದಾರೆ. ನಾವು ಉದ್ಯೋಗಗಳನ್ನು ಸೃಷ್ಟಿಸಬೇಕು. ಕನ್ನಡಿಗರಿಗೆ ಆದ್ಯತೆ ನೀಡಬೇಕು. ಅದೇ ನಮ್ಮ ಗುರಿ ಎಂದು ತಿಳಿಸಿದರು.

ಟೊಯೊಟಾ ಕಂಪನಿಯೊಂದಿಗಿನ ಸಭೆಯ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್, ಕಂಪನಿ ಹೊಸ ಆಲೋಚನೆಗಳನ್ನು ಪರಿಚಯಿಸುತ್ತಿದ್ದು, ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿರುವುದಾಗಿ ತಿಳಿಸಿದೆ ಎಂದರು. ಕಂಪನಿಯ ಒಂದು ಘಟಕ ಮಹಾರಾಷ್ಟ್ರದಲ್ಲಿ ಸ್ಥಾಪನೆಯಾಗುತ್ತಿದೆ ಎಂದೂ ಹೇಳಿದರು.

ನಾನು ಟೊಯೊಟಾ ಕಂಪನಿಯವರನ್ನೂ ಭೇಟಿಯಾಗಿದ್ದೆ. ಅವರು ಹೊಸ ಆಲೋಚನೆಗಳನ್ನು ಪರಿಚಯಿಸುತ್ತಿದ್ದಾರೆ. ಒಂದು ಘಟಕ ಮಹಾರಾಷ್ಟ್ರಕ್ಕೆ ಹೋಗುತ್ತಿದೆ. ಈ ನಿರ್ಧಾರವನ್ನು ಒಂದು ವರ್ಷದ ಹಿಂದೆಯೇ ತೆಗೆದುಕೊಳ್ಳಲಾಗಿದೆ. ಕರ್ನಾಟಕದಲ್ಲಿಯೂ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಅವರು ಹೇಳಿದ್ದಾರೆ ಎಂದರು.

ಮೂರುರಿಂದ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ವಾಹನಗಳನ್ನು ತಯಾರಿಸುವ ಸಾಧ್ಯತೆ ಬಗ್ಗೆಯೂ ರಾಜ್ಯ ಸರ್ಕಾರ ಚರ್ಚಿಸಿದೆ. ಕ್ಯಾಬ್‌ಗಳನ್ನು ಪರಿಚಯಿಸುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕವಾಸಕಿ ಕಂಪನಿಯೊಂದಿಗೂ ಮಾತುಕತೆ ನಡೆಸಲಾಗಿದ್ದು, ಕನಕಪುರದ ಹಾರೋಹಳ್ಳಿಯಲ್ಲಿ ನಿರ್ಮಿಸಲಾಗಿರುವ ಹೊಸ ಘಟಕದಲ್ಲಿ ಸ್ಥಳೀಯ 600 ಮಂದಿಗೆ ಉದ್ಯೋಗ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನ ಹೊರಭಾಗಗಳಿಗೂ ಹೂಡಿಕೆ ಆಕರ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ, ಹೂಡಿಕೆದಾರರು ಸಾಮಾನ್ಯವಾಗಿ ಬೆಂಗಳೂರು ನಗರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ರಾಜ್ಯದ ಇತರ ಭಾಗಗಳ ಬಗ್ಗೆಯೂ ಗಮನಹರಿಸುವಂತೆ ಅವರಿಗೆ ಮನವಿ ಮಾಡಲಾಗುತ್ತಿದೆ ಎಂದರು.

ಭಾರತದಲ್ಲಿ ಜಪಾನ್ ಕಂಪನಿಗಳಿಗೆ ಉದ್ಯಮಾವಕಾಶಗಳನ್ನು ಕಲ್ಪಿಸುವಲ್ಲಿ ಜಪಾನ್ ಬಾಹ್ಯ ವ್ಯಾಪಾರ ಸಂಸ್ಥೆ (JETRO) ವಹಿಸುತ್ತಿರುವ ಪಾತ್ರವನ್ನೂ ಅವರು ಪ್ರಸ್ತಾಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.