ಸುರಂಗ ರಸ್ತೆಗಾಗಿ ಭೂಮಿಗಾಗಿ ಪರದಾಟ: ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬ

ನಗರಾಭಿವೃದ್ಧಿ ಇಲಾಖೆ ಮತ್ತು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಮೂಲಗಳ ಪ್ರಕಾರ, ಯೋಜನೆಯು ಮತ್ತೆ ಹಳಿ ತಪ್ಪದಂತೆ ನೋಡಿಕೊಳ್ಳುವಂತಹ ಸೂಕ್ತ ಪರ್ಯಾಯ ಭೂಮಿಯನ್ನು ಹುಡುಕುವುದೇ ಈಗಿರುವ ದೊಡ್ಡ ಸವಾಲಾಗಿದೆ.
lalbagh
ಲಾಲ್ ಬಾಗ್
Updated on: 

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಅವಳಿ ಸುರಂಗ ರಸ್ತೆ ನಿರ್ಮಾಣವು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ತಪ್ಪಿಸುವ ಸಲುವಾಗಿ ಸುರಂಗ ಮಾರ್ಗವನ್ನು ಬದಲಾಯಿಸಲು ಸರ್ಕಾರವು ಅನಿವಾರ್ಯವಾಗಿ ಮುಂದಾಯಿತು. ಈ ಯೋಜನೆಗೆ ಪರ್ಯಾಯ ಮಾರ್ಗವನ್ನು ರೂಪಿಸಲು ಸೂಕ್ತವಾದ ಭೂಮಿಯನ್ನು ಕಂಡುಕೊಳ್ಳಲು ಸರ್ಕಾರಿ ಸಂಸ್ಥೆಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ನಗರಾಭಿವೃದ್ಧಿ ಇಲಾಖೆ ಮತ್ತು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಮೂಲಗಳ ಪ್ರಕಾರ, ಯೋಜನೆಯು ಮತ್ತೆ ಹಳಿ ತಪ್ಪದಂತೆ ನೋಡಿಕೊಳ್ಳುವಂತಹ ಸೂಕ್ತ ಪರ್ಯಾಯ ಭೂಮಿಯನ್ನು ಹುಡುಕುವುದೇ ಈಗಿರುವ ದೊಡ್ಡ ಸವಾಲಾಗಿದೆ.

ಸುರಂಗ ರಸ್ತೆ ಯೋಜನೆಯನ್ನು ಕೇವಲ ನಾಗರಿಕರು ಮಾತ್ರ ವಿರೋಧಿಸುತ್ತಿಲ್ಲ, ಬದಲಿಗೆ ಅನೇಕ ಸರ್ಕಾರಿ ಸಂಸ್ಥೆಗಳು ಕೂಡ ಇದರ ಪರವಾಗಿಲ್ಲ. ಭೂಮಿಗಾಗಿ ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯಂತಹ ಇತರ ಸರ್ಕಾರಿ ಇಲಾಖೆಗಳೊಂದಿಗೆ ಸಹಕರಿಸಲು ಮತ್ತು ಸಮನ್ವಯ ಸಾಧಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಯೋಜನೆಗಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಡಲು ಯಾರೂ ಆಸಕ್ತಿ ತೋರುತ್ತಿಲ್ಲ, ಆದರೆ ಯೋಜನೆಯ ಅನುಷ್ಠಾನದ ಸಮಯವು ವೇಗವಾಗಿ ಕಳೆದುಹೋಗುತ್ತಿದೆ ಎಂದು B-SMILE ಮೂಲವೊಂದು ತಿಳಿಸಿದೆ.

lalbagh
ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಲಾಲ್‌ಬಾಗ್- ಬನ್ನೇರುಘಟ್ಟ ರಸ್ತೆ, ಅಗ್ನಿಶಾಮಕ ಠಾಣೆ, ಮಾರ್ಗಮಧ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಬಳಸಿಕೊಳ್ಳುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ.

"ಮಾರ್ಗ ವಿನ್ಯಾಸದಲ್ಲಿ ಮತ್ತೊಂದು ಬದಲಾವಣೆಯನ್ನು ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಯೋಜನೆಯ ಅನುಷ್ಠಾನದ ಸಮಯವೂ ಮೀರುತ್ತಿದೆ. 2025ರಲ್ಲಿ, ವಸತಿ ಮತ್ತು ನಗರಾಭಿವೃದ್ಧಿ ನಿಗಮವು (HUDCO) ಈ ಯೋಜನೆಗೆ 9,303.66 ಕೋಟಿ ರೂ.ಗಳ ಹಣಕಾಸಿನ ನೆರವು ನೀಡಲು ಅನುಮೋದನೆ ನೀಡಿತ್ತು.

ಆದರೆ ಇತರ ಯಾವುದೇ ಯೋಜನೆಗಳಂತೆ ಇದಕ್ಕೂ ಅನುಷ್ಠಾನದ ಸಮಯದ ಮಿತಿಯಿದೆ. ಭೂಮಿ ಸ್ವಾಧೀನವಾಗದಿದ್ದರೆ ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬವಾಗುತ್ತದೆ. ಈಗ ಸರ್ಕಾರಕ್ಕೆ ಅತ್ಯಂತ ಸೂಕ್ತವಾದ ಭೂಮಿಯನ್ನು ಕಂಡುಕೊಳ್ಳುವುದೇ ದೊಡ್ಡ ಸವಾಲಾಗಿದೆ. ಲಾಲ್‌ಬಾಗ್ ಕುರಿತ ನಿರ್ಧಾರವನ್ನು ಹಿಂಪಡೆದು 'ಉದ್ಯಾನವನಗಳ ತಿದ್ದುಪಡಿ ಮಸೂದೆ'ಯನ್ನು ತಡೆಹಿಡಿದು ಒಂದು ತಿಂಗಳು ಕಳೆದಿದ್ದರೂ, ನಾವು ಭೂಮಿಗಾಗಿ ಇನ್ನೂ ಪರದಾಡುತ್ತಿದ್ದೇವೆ" ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com