

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಕಲಿ ಹಾಗೂ ದುರುದ್ದೇಶಪೂರಿತ ವಿಡಿಯೋಗಳನ್ನು ಹಂಚಿಕೊಂಡು ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ದೂರಿನ ಮೇರೆಗೆ ಸಿಸಿಬಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಸೂಚನೆಯಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಈಗಾಗಲೇ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ರಾಜಕೀಯ ಷಡ್ಯಂತ್ರ ರೂಪಿಸಿ, ತಮ್ಮ ತೇಜೋವಧೆ ಮಾಡುವ ದುರುದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಅವರು ಖುದ್ದು ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದರು. ದೂರಿನೊಂದಿಗೆ ಸುಳ್ಳು ಮಾಹಿತಿ ಹರಡುತ್ತಿದ್ದ ನಿರ್ದಿಷ್ಟ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನೂ ಒದಗಿಸಿದ್ದರು.
ದೂರು ದಾಖಲಾಗುತ್ತಿದ್ದಂತೆ ಸೈಬರ್ ಕ್ರೈಮ್ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದು, ವಿಡಿಯೋ ಪ್ರಸಾರ ಮಾಡಿದ ಪ್ರಮುಖ ಖಾತೆಗಳ ಐಪಿ (IP) ವಿಳಾಸಗಳ ಮೂಲಕ ಡಿವೈಸ್ ಮಾಲೀಕರನ್ನು ಪತ್ತೆಹಚ್ಚುವ ಕಾರ್ಯ ನಡೆಸಿದ್ದಾರೆ.
ಈ ಬೆನ್ನಲ್ಲೇ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಮತ್ತು ವಿಡಿಯೋ ಎಲ್ಲಿಂದ ಸೃಷ್ಟಿಯಾಗಿದೆ ಎಂಬ ಕುರಿತು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.