

ಗದಗ: ಗದಗ ಸಮೀಪದ ನೀಲಗುಂದ ಗ್ರಾಮದ ಕಲ್ಲುಬಂಡೆಗಳ ಪ್ರದೇಶದಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಮಧ್ಯ ಶಿಲಾಯುಗದ ಗುಹಾಚಿತ್ರಗಳಿಗೆ ಶೀಘ್ರದಲ್ಲೇ ಸಂರಕ್ಷಿತ ಸ್ಮಾರಕ ಸ್ಥಾನಮಾನ ದೊರೆಯುವ ಸಾಧ್ಯತೆಯಿದೆ.
ಈ ಬೆಟ್ಟವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕಚೇರಿ (ಸಿಎಂಒ) ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಇದು ಇತಿಹಾಸಕಾರರು ಹಾಗೂ ಇತಿಹಾಸಾಸಕ್ತರಲ್ಲಿ ಸಂತಸ ಮೂಡಿಸಿದೆ.
ಈ ಹಿಂದೆ ಈ ಪ್ರದೇಶಗಳಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಚಟುವಟಿಕೆಗಳಿಂದಾಗಿ ಇತಿಹಾಸಾಸಕ್ತರು ಆತಂಕ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಉತ್ತರ ಭಾರತದಿಂದ ಬಂದ ಕೆಲವು ಆಸಕ್ತರು ಈ ಸ್ಥಳಕ್ಕೆ ಭೇಟಿ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದರು. ಇದಾದ ಬಳಿಕ, ಇತಿಹಾಸ ಮತ್ತು ಪುರಾತತ್ವ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕರ್ತರೊಬ್ಬರು ಗುಹಾಚಿತ್ರಗಳಿಗೆ ಗಣಿಗಾರಿಕೆಯಿಂದ ಅಪಾಯ ಎದುರಾಗುವ ಸಾಧ್ಯತೆಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕಚೇರಿ, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಗದಗ ಮಾತ್ರವಲ್ಲದೆ ಹಿರೇಬೆಣಕಲ್ ಮತ್ತು ಹಂಪಿಯಂತಹ ಐತಿಹಾಸಿಕ ತಾಣಗಳನ್ನೂ ಅಭಿವೃದ್ಧಿಪಡಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇದರಿಂದ ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಮಧ್ಯ ಶಿಲಾಯುಗದ ಈ ಗುಹಾಚಿತ್ರಗಳನ್ನು ಅಧ್ಯಯನ ಮಾಡಲು ಅವಕಾಶ ದೊರೆಯಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ನೀಲಗುಂದದ ಬೆಟ್ಟವು ಗದಗ ಪಟ್ಟಣದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ.
ನೀಲಗುಂದ ಗ್ರಾಮದ ನಿವಾಸಿ ಮಂಜುನಾಥ್ ಭಜಂತ್ರಿ ಮಾತನಾಡಿ, ನಮ್ಮ ಗ್ರಾಮಕ್ಕೆ ಮಧ್ಯ ಶಿಲಾಯುಗದ ಇತಿಹಾಸವಿದೆ ಮತ್ತು ಇಲ್ಲಿ ಆ ಕಾಲದ ಗುಹಾಚಿತ್ರಗಳಿವೆ ಎಂಬುದು ನಮಗೆ ತಿಳಿದಿರಲಿಲ್ಲ. ಸರ್ಕಾರ ಈ ಬೆಟ್ಟವನ್ನು ಸಂರಕ್ಷಿಸಿ ಸಂರಕ್ಷಿತ ಸ್ಮಾರಕದ ಸ್ಥಾನಮಾನ ನೀಡಲು ನಿರ್ಧರಿಸಿರುವುದು ನಮಗೆ ಸಂತಸ ತಂದಿದೆ. ಗ್ರಾಮದ ಜನರೂ ಈ ಬಗ್ಗೆ ಇತರರಲ್ಲಿ ಜಾಗೃತಿ ಮೂಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.