

ಧಾರವಾಡ: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರವೂ ಜವಾಬ್ದಾರಿ ವಹಿಸಿ, ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಗುರುವಾರ ಧಾರವಾಡದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದ ಅವರು, ಕಬ್ಬಿನ ಬೆಲೆ ಪರಿಷ್ಕರಣೆ ಸೇರಿದಂತೆ ರೈತರ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವೂ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ಉಪ ಉತ್ಪನ್ನಗಳಿಂದ ಸಂಗ್ರಹವಾಗುವ ಜಿಎಸ್ಟಿ ಆದಾಯ ರಾಜ್ಯ ಸರ್ಕಾರಕ್ಕೆ ದೊರೆಯುವುದರಿಂದ, ರೈತರ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯವೂ ತನ್ನ ಪಾಲಿನ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.
ಕಳೆದ ಹಲವು ವರ್ಷಗಳಿಂದ ಕಬ್ಬಿನ ಬೆಲೆ ಪರಿಷ್ಕರಣೆ ನಿಯಮಿತವಾಗಿ ನಡೆಯದಿರುವುದರಿಂದ ಈಗ ಏಕಾಏಕಿ ಬೆಲೆ ಹೆಚ್ಚಳ ಜಾರಿಗೊಳಿಸುವುದು ಕಷ್ಟಕರವಾಗಿದೆ. ಆದರೆ, ಈ ಸಮಸ್ಯೆಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವಾಲಯ ಸಮಿತಿಯೊಂದನ್ನು ರಚಿಸಿವೆ. ವಿವಿಧ ರಾಜ್ಯಗಳಲ್ಲಿ ಬೇಡಿಕೆಗಳು ವಿಭಿನ್ನವಾಗಿರುವುದರಿಂದ, ಆಯಾ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಈ ವಿಷಯವನ್ನು ಪರಿಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಬ್ಬಿನಿಂದ ಉತ್ಪಾದಿಸುವ ಉಪ ಉತ್ಪನ್ನಗಳ ಮೇಲಿನ ಜಿಎಸ್ಟಿ ಆದಾಯ ರಾಜ್ಯ ಸರ್ಕಾರಕ್ಕೆ ದೊರೆಯುತ್ತದೆ. ಹೀಗಾಗಿ, ಈ ವಿಚಾರದಲ್ಲಿ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕಬ್ಬಿನ ಬೆಲೆ ಪರಿಷ್ಕರಣೆ ದೇಶಾದ್ಯಂತ ಜಾರಿಯಾಗಬೇಕಿರುವುದರಿಂದ, ಸಮಿತಿಯ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ರೈತರ ಪಾದಯಾತ್ರೆ ಹುಬ್ಬಳ್ಳಿ ತಲುಪುವ ವೇಳೆಗೆ ಅವರ ಬೇಡಿಕೆಗಳ ಕುರಿತು ಸಕಾರಾತ್ಮಕ ಸುದ್ದಿ ಹೊರಬೀಳಬಹುದು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರು ಕಬ್ಬಿನ ತೂಕ ಮಾಡುವ ವಿಧಾನ, ಬಿಲ್ಲಿಂಗ್ ಪ್ರಕ್ರಿಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.