

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂಬ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ, ಸೂಕ್ತ ದಾಖಲೆಗಳು ಮತ್ತು ಪರಿಶೀಲನೆ ಇಲ್ಲದೆ ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನು ತೆಗೆದುಹಾಕುತ್ತಿಲ್ಲ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೃತರು, ನಕಲು ಅಥವಾ ಸ್ಥಳಾಂತರಗೊಂಡ ಮತದಾರರನ್ನು ಮಾತ್ರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಸೂಕ್ತ ದಾಖಲೆಗಳು ಮತ್ತು ಸ್ಥಳ ಪರಿಶೀಲನಾ ಮಹಜರು ಇಲ್ಲದೆ ಸಲ್ಲಿಸಲಾದ ನಮೂನೆ-7 ಅರ್ಜಿಗಳನ್ನು ಪರಿಗಣಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ವಿದೇಶಿ ಪ್ರಜೆಗಳ ಹೆಸರುಗಳನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದು, ಪ್ರತಿಯೊಬ್ಬ ಮತದಾರರ ವಿವರಗಳನ್ನೂ ಈಗ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೂವರೆಗೆ ಇದೇ ಪರಿಶೀಲನೆ ಮತ್ತು ದಾಖಲೆಗಳ ಪ್ರಕ್ರಿಯೆಯ ಮೂಲಕ 26 ನೇಪಾಳಿ ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಮಾತ್ರ ಅಕ್ಟೋಬರ್ 27ರಂದು ಪ್ರಕಟವಾಗಲಿರುವ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಥವಾ ಹೆಸರು ತೆಗೆದುಹಾಕುವ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಈ ಅವಧಿಯ ನಂತರ ಸಲ್ಲಿಸಲಾದ ಅರ್ಜಿಗಳನ್ನು 2027ರ ಜನವರಿಯಲ್ಲಿ ಪ್ರಕಟವಾಗಲಿರುವ ಪೂರಕ ಪಟ್ಟಿಯಲ್ಲಿ ಸೇರ್ಪಡೆ ಅಥವಾ ತೆಗೆದುಹಾಕುವ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ.
ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣಾ ಅವಧಿ ಅಕ್ಟೋಬರ್ 22ರಂದು ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಮತದಾರರ ನೋಂದಣಿ ಅಧಿಕಾರಿಗಳು ಮತದಾರರ ಪಟ್ಟಿಯ ದತ್ತಾಂಶ ನಮೂದು, ಸಂಪಾದನೆ ಹಾಗೂ ತಿದ್ದುಪಡಿ ಕಾರ್ಯಗಳನ್ನು ಸ್ಥಗಿತಗೊಳಿಸಲಿದ್ದಾರೆ. ಇದುವರೆಗೆ ಸೂಕ್ತ ದಾಖಲೆಗಳ ಪರಿಶೀಲನೆ ನಡೆಸದೆ ಯಾವುದೇ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಕಲೇಶಪುರದಲ್ಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ಗಳು ಪತ್ತೆ: ತನಿಖೆಗೆ ಎಸಿ ಆದೇಶ
ಸಕಲೇಶಪುರ ಪಟ್ಟಣದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶ್ರೀಗಂಧ ಲಾಡ್ಜ್ ಸಮೀಪ ಮತದಾರರ ಗುರುತಿನ ಚೀಟಿಗಳು, ಆಧಾರ್ ಕಾರ್ಡ್ಗಳು, ಪಾನ್ ಕಾರ್ಡ್ಗಳು ಹಾಗೂ ಚಾಲನಾ ಪರವಾನಗಿಗಳ ದೊಡ್ಡ ಸಂಗ್ರಹ ಪತ್ತೆಯಾಗಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರ ನಿರ್ದೇಶನದ ಮೇರೆಗೆ ಸಕಲೇಶಪುರ ಉಪವಿಭಾಗದ ಸಹಾಯಕ ಆಯುಕ್ತ ಹುಲ್ಲುಮನೆ ತಿಮ್ಮಣ್ಣ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ತಿಮ್ಮಣ್ಣ ಅವರು, ಅಲ್ಲಿ ಬಿದ್ದಿದ್ದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಪತ್ತೆಯಾದ ಕೆಲವು ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ಗಳು ಯಾದಗಿರಿ ಮತ್ತು ಮಂಡ್ಯ ಜಿಲ್ಲೆಗಳ ನಿವಾಸಿಗಳಿಗೆ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ದಾಖಲೆಗಳು ಸೇರಿರಬಹುದು ಎಂದು ತಾಲ್ಲೂಕು ಅಧಿಕಾರಿಗಳು ಶಂಕಿಸಿದ್ದಾರೆ.
ಅನಧಿಕೃತ ಮತದಾರರ ಹೆಸರುಗಳನ್ನು ತೆಗೆದುಹಾಕಲು ಮಾಜಿ ಶಾಸಕ ಅನಿಲ್ ಬೆನಕೆ ಮನವಿ
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ನೋಂದಣಿಗಳನ್ನು ಪರಿಶೀಲಿಸಿ, ಅನಧಿಕೃತ ಹೆಸರುಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಮಾಜಿ ಶಾಸಕ ಹಾಗೂ ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ಅವರು ತಮ್ಮ ಬೆಂಬಲಿಗರೊಂದಿಗೆ ಗುರುವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಸಿಟಿಎಸ್ ಸಂಖ್ಯೆ 2438ರ ಅಡಿಯಲ್ಲಿ 2438/1ರಿಂದ 2438/127ರವರೆಗಿನ ಆಸ್ತಿಗಳಿಗೆ ಸಂಬಂಧಿಸಿದಂತೆ 212, 213, 214 ಮತ್ತು 215ನೇ ಮತಗಟ್ಟೆಗಳಲ್ಲಿ ಒಂದೇ ಮನೆಯಿಂದ 263 ಮತದಾರರು ನೋಂದಣಿಯಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯ ಬಳಿಕ ಸ್ಥಳಾಂತರಗೊಂಡ ಮತದಾರರು, ದ್ವಿಪ್ರವೇಶ ಹೊಂದಿರುವವರು, ಮೃತಪಟ್ಟವರು ಹಾಗೂ ನೋಂದಣಿಯಾಗದ ಮತದಾರರಿಗೆ ಸೇರಿದ ಸುಮಾರು 8,000 ನಮೂದುಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.